ಹದಿನಾರು ವರ್ಷಗಳ ಬಳಿಕ ಭಾರತಕ್ಕೆ ಬಂದ ಬ್ರಿಟನ್‌ನ ರಾಲ್ಫ್ ಲ್ಯಾಂಗ್, ದೆಹಲಿಯ ತನ್ನ ಬಾಲ್ಯದ ಮನೆಗೆ ಭಾವುಕ ಭೇಟಿ ನೀಡಿದ್ದಾರೆ. ಮನೆಯೊಳಗೆ ಹೋಗಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಕೆದಾರರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಜೀವನ (life)ದಲ್ಲಿ ನಡೆಯುವ ಪ್ರತಿಯೊಂದು ಘಟನೆ ನಮಗೆ ನೆನಪಿರುತ್ತೆ. ಅದ್ರಲ್ಲೂ ಬಾಲ್ಯದ ದಿನಗಳು ಬಹಳ ವಿಶೇಷ. ಮತ್ತೆ ಬಾಲ್ಯದ ಜೀವನಕ್ಕೆ ಮರಳಲು ಸಾಧ್ಯವಿಲ್ಲ. ಆದ್ರೆ ಬಾಲ್ಯದ ಸ್ನೇಹಿತರು, ಸಂಬಂಧಿಕರು, ಬಾಲ್ಯದಲ್ಲಿ ಕಳೆದ ಸ್ಥಳಗಳಿಗೆ ಭೇಟಿ ನೀಡಿ ಹಳೆ ದಿನಗಳನ್ನು ನೆನಪಿಸಿಕೊಳ್ಬಹುದು. ವಯಸ್ಸಾಗ್ತಿದ್ದಂತೆ ಜನರು ನಮ್ಮ ಹಳೆ ಸ್ನೇಹಿತರನ್ನು ಭೇಟಿಯಾಗಲು ಕಾಲೇಜ್, ಶಾಲೆಗಳಲ್ಲಿ ಗೆಟ್ ಟುಗೆದರ್ ಪ್ಲಾನ್ ಮಾಡ್ತಾರೆ. ಇದು ನಮ್ಮ ಹಿಂದಿನ ದಿನಗಳನ್ನು ನೆನಪಿಸೋದಲ್ಲದೆ ಮನಸ್ಸನ್ನು ರಿಪ್ರೆಶ್ ಮಾಡುತ್ತದೆ. ಈಗಿನ ದಿನಗಳಲ್ಲಿ ದೇಶ ಬಿಟ್ಟು ವಿದೇಶದಲ್ಲಿ ನೆಲೆಸುವವರ ಸಂಖ್ಯೆ ಸಾಕಷ್ಟಿದೆ. ಕೆಲಸ, ಓದು ಅಂತ ಬೇರೆ ಬೇರೆ ಕಾರಣಕ್ಕೆ ಅವರು ತವರು ಬಿಟ್ಟಿರ್ತಾರೆ. ಊರಿಗೆ ಬಂದ್ರೆ ಅದೇನೋ ಸಂಭ್ರಮ. ತಮ್ಮ ಊರಿನ ಇಂಚು ಇಂಚನ್ನು ನೋಡಿ, ಅದು ಹಾಗಿತ್ತು, ಇದು ಹೀಗಿತ್ತು ಎಂದು ಆಪ್ತರಿಗೆ ಮಾಹಿತಿ ನೀಡ್ತಾ ಸಂಭ್ರಮಿಸ್ತಾರೆ. ಬ್ರಿಟನ್ (Britain) ವ್ಯಕ್ತಿ ಕೂಡ ಭಾರತ (India)ದಲ್ಲಿ ಈ ಸಂತೋಷವನ್ನು ಅನುಭವಿಸಿದ್ದಾನೆ. ಹದಿನಾರು ವರ್ಷಗಳ ನಂತ್ರ ಭಾರತಕ್ಕೆ ಬಂದ ವ್ಯಕ್ತಿ, ತನ್ನ ಬಾಲ್ಯದ ಮನೆಗೆ ಭೇಟಿ ನೀಡಿದ್ದಾನೆ. ಅದ್ರ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಬಹುತೇಕರನ್ನು ಭಾವುಕಗೊಳಿಸಿದ್ದಾನೆ.
2009ರಲ್ಲಿ ರಾಲ್ಫ್ ಲ್ಯಾಂಗ್ ಎಂಬ ವ್ಯಕ್ತಿ ಭಾರತದಲ್ಲಿದ್ದ. ತನ್ನ ಬಾಲ್ಯದ ದಿನಗಳನ್ನು ಆತ ದೆಹಲಿಯಲ್ಲಿ ಕಳೆದಿದ್ದ. ಸದ್ಯ ಬ್ರಿಟನ್ ನಲ್ಲಿ ವಾಸವಾಗಿದ್ದಾನೆ. ಕೆಲ ದಿನಗಳ ಹಿಂದೆ ಭಾರತಕ್ಕೆ ಬಂದಿದ್ದ ವ್ಯಕ್ತಿ, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿದ್ದಾನೆ. ನಾನು ಹದಿನಾರು ವರ್ಷಗಳ ಹಿಂದೆ ಭಾರತದಲ್ಲಿ ನೆಲೆಸಿದ್ದೆ. ನಾನು ವಾಸವಾಗಿದ್ದ ಮನೆಗೆ ಈಗ ಹೋಗ್ತಿದ್ದೇನೆ ಎಂದು ವಿಡಿಯೋ ಆರಂಭದಲ್ಲಿ ಹೇಳ್ತಾನೆ. ನಂತ್ರ ಬಾಲ್ಯದ ದಿನಗಳನ್ನು ಕಳೆದ ಮನೆಗೆ ಹೋಗ್ತಾನೆ. ಬಾಗಿಲನ್ನು ಲಾಕ್ ಮಾಡ್ತಾನೆ. ನಾನು ಚಿಕ್ಕವನಿದ್ದಾಗ ಈ ಮನೆಯಲ್ಲಿ ವಾಸವಾಗಿದ್ದೆ, ಈಗ ಮನೆಯೊಳಗೆ ಬರ್ಬಹುದಾ ಎಂದು ಒಪ್ಪಿಗೆ ಕೇಳ್ತಾನೆ. ಅದಕ್ಕೆ ಮನೆಯಲ್ಲಿದ್ದವರು ಪರ್ಮಿಷನ್ ನೀಡ್ತಾರೆ. ಮನೆಯೊಳಗೆ ಹೋಗಿ ಪ್ರತಿಯೊಂದು ಜಾಗವನ್ನೂ ಆತ ವೀಕ್ಷಣೆ ಮಾಡ್ತಾನೆ. ನಾನು ಬಾಲ್ಯದಲ್ಲಿದ್ದ ಮನೆ ಹಾಗೆಯೇ ಇದೆ. ಮನೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನುವ ವ್ಯಕ್ತಿ, ವಿಡಿಯೋ ಪೂರ್ತಿ ಭಾವುಕವಾಗಿರೋದನ್ನು ನೀವು ಕಾಣ್ಬಹುದು. ಅನೇಕ ಕಡೆ ರಾಲ್ಫ್ ಲ್ಯಾಂಗ್ ಗೆ ತನ್ನ ಅಳುವನ್ನು ಕಂಟ್ರೋಲ್ ಮಾಡಲು ಸಾಧ್ಯವಾಗೋದಿಲ್ಲ. ಬಿಕ್ಕಿ ಬಿಕ್ಕಿ ಅಳುವ ಆತನ ವಿಡಿಯೋವನ್ನು ಸಿಕ್ಕಾಪಟ್ಟೆ ಜನರು ವೀಕ್ಷಣೆ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆದ ಈ ವೀಡಿಯೊವನ್ನು 2 ಲಕ್ಷ 72 ಸಾವಿರಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ವಿಡಿಯೋ ನೋಡಿದ ನಂತ್ರ ಬಳಕೆದಾರರೊಬ್ಬರು, ಅಂತಹ ಸ್ಥಳ ನೋಡುವುದು ಭಾವನಾತ್ಮಕವಾಗಿರುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, ಇದು ನನ್ನನ್ನೂ ಭಾವುಕನನ್ನಾಗಿ ಮಾಡ್ತು ಅಂತ ಬರೆದಿದ್ದಾರೆ. ಇನ್ನೊಬ್ಬರು , ನೀವು ನಿಮ್ಮ ಬಾಲ್ಯದ ಸ್ನೇಹಿತರನ್ನು ಭೇಟಿಯಾಗಿ, ಅದು ಬಹಳ ಮುಖ್ಯ ಎಂದಿದ್ದಾರೆ. ನಿನ್ನಂತ ಅನುಭವ ನನಗೂ ಆಗಿದೆ, ನಿನ್ನ ಭಾವನೆ ನನಗೆ ಅರ್ಥವಾಗುತ್ತದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ರಾಲ್ಫ್ ಲ್ಯಾಂಗ್, ಬಾಲ್ಯದಲ್ಲಿ ಐಷಾರಾಮಿ ಬಂಗಲೆಯಲ್ಲಿ ಕಳೆದಿದ್ದಾನೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಇಷ್ಟು ವರ್ಷಗಳ ನಂತ್ರ ಭಾರತಕ್ಕೆ ಬಂದು, ತನ್ನ ಹಳೆ ಮನೆಯನ್ನು ನೋಡಿ ಖುಷಿಯಾದ ರಾಲ್ಫ್ ಲ್ಯಾಂಗ್ ಕೆಲಸವನ್ನು ಬಹುತೇಕರು ಮೆಚ್ಚಿದ್ದಾರೆ.


