ಹರ್ಯಾಣ(ಡಿ.04): ಮದುವೆ ಮಂಟಪಕ್ಕೆ ತೆರಳಲು ಹಲವರು ವಿಶೇಷ ವಾಹನ ಬಳಸುತ್ತಾರೆ. ಕ್ಷಣವನ್ನು ಸ್ಮರಣೀಯವಾಗಿಸಲು ಬುಲ್ಡೇಜರ್, ಸೈಕಲ್, ಎತ್ತಿನ ಗಾಡಿಯಲ್ಲೂ ಮಂಟಪಕ್ಕೆ ಬಂದವರಿದ್ದಾರೆ. ಆದರೆ ಇಲ್ಲಿ ಕ್ರೇಝ್‌ಗಾಗಿಯೋ ಅಥವಾ ಸ್ಮರಣೀಯ ನೆನಪಿಗಾಗಿ ಅಲ್ಲ. ತನಗಾಗಿ ಸಿಂಗರಿಸಿದ್ದ ಮರ್ಸಿಡೀಸ್ ಬೆಂಝ್ ಕಾರಿನ ಬದಲು ಮದುಮಗ ಟ್ರಾಕ್ಟರ್ ಏರಿ ಮಂಟಪಕ್ಕೆ ಬಂದಿದ್ದಾರೆ. ಇದಕ್ಕೆ ಕಾರಣ ರೈತರ ಪ್ರತಿಭಟನೆ.

ಭಾರತ್ ಬಂದ್‌ಗೆ ಕರೆ ನೀಡಿದ ರೈತ ಸಂಘಟನೆ, ದೇಶವ್ಯಾಪಿ ಪ್ರತಿಭಟನೆ ಕಿಚ್ಚು!..

ಹರ್ಯಾಣದ ಕರ್ನಲ್ ಸೆಕ್ಟರ್ 6 ವಲಯದ ಸಮಿತ್ ದುಲ್ ಈ ರೀತಿ ಟ್ರಾಕ್ಟರ್ ಮೂಲಕ ಮಂಟಪಕ್ಕೆ ಆಗಮಿಸಿದ ಮದುಮಗ. ಸುಮಿತ್ ಧುಲ್ ಮದುವೆಗೆ ಎಲ್ಲಾ ಸಿದ್ಧತೆ ನಡೆಸಲಾಗಿತ್ತು. ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಕುಟಂಬಸ್ಥರು ಮದುಮಗನನ್ನು ಮಂಟಪಕ್ಕೆ ಕರೆತರಲು ಮರ್ಸಿಡೀಸ್ ಬೆಂಝ್ ಕಾರು ಹಾಗೂ ಡ್ರೈವರ್ ಕೂಡ ನಿಯೋಜಿಸಿದ್ದರು. ಆದರೆ ಸುಮಿತ್ ನಿರ್ಧಾರವೇ ಭಿನ್ನವಾಗಿತ್ತು.

 

ಕಾರು ಏರಲು ಬಂದ ಸುಮಿತ್ ಬೆಂಝ್ ಕಾರಿನಲ್ಲಿ ಪ್ರಯಾಣಿಸಲು ನಿರಾಕರಿಸಿದ್ದಾನೆ. ಬಳಿಕ ತಮ್ಮ ಮನೆಯಲ್ಲಿ ನಿಲ್ಲಿಸಿದ್ದ ಟ್ರಾಕ್ಟರ್‌ನ್ನ ತಾನೇ ಖುದ್ದಾಗಿ ಚಲಾಯಿಸಿಕೊಂಡು ಮಂಟಪಕ್ಕೆ ತೆರಳಿದ್ದಾನೆ. ಮದುಮಗ ಟ್ರಾಕ್ಟರ್ ಮೂಲಕ ಮಂಟಪಕ್ಕೆ ಆಗಮಿಸಿದಾಗ ಅಚ್ಚರಿ ಕಾದಿತ್ತು. ರೈತರು ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ನೈತಿಕ ಬೆಂಬಲ ನೀಡುವ ಸಲುವಾಗಿ ಟ್ರಾಕ್ಟರ್ ಮೂಲಕ ಆಗಮಿಸಿರುವುದಾಗಿ ಸುಮಿತ್ ಹೇಳಿದ್ದಾನೆ.

ನಗರದಲ್ಲಿ ಕೆಲಸ ಮಾಡುತ್ತಿದ್ದರೂ, ನನ್ನ ಮೂಲ ರೈತ. ನನ್ನ ತಂದೆ  ಸೇರಿದಂತೆ ಕುಟುಂಬಸ್ಥರೆಲ್ಲಾ ಕೃಷಿಕರು. ಹೀಗಾಗಿ ಪ್ರತಿಭಟನೆಗೆ ನನ್ನ ಬೆಂಬಲವನ್ನು ನೀಡಿದ್ದೇನೆ.  ಶೀಘ್ರದಲ್ಲೇ  ಪತ್ನಿ ಜೊತೆ ಪ್ರತಿಭಟನಾ ಸ್ಥಳಕ್ಕೆ ತೆರಳುವುದಾಗಿ ಸುಮಿತ್ ಹೇಳಿದ್ದಾನೆ.