Chandrayaan 3: ಚಂದ್ರನ ಚಿತ್ರ ಭೂಮಿಗೆ ಕಳಿಸಿದ ವಿಕ್ರಮ್ ಲ್ಯಾಂಡರ್!
ಚಂದ್ರನ ಮೇಲ್ಮೈ ಮೇಲೆ ಇಳಿಯುವ ಕೆಲಸವನ್ನು ಆರಂಭಿಸಲಿರುವ ವಿಕ್ರಮ್ ಲ್ಯಾಂಡರ್ ಅದಕ್ಕೂ ಮುನ್ನ ಚಂದ್ರನ ಚಿತ್ರಗಳನ್ನು ಅಲ್ಲಿಂದ ಭೂಮಿ ಹೇಗೆ ಕಾಣುತ್ತಿದೆ ಎನ್ನುವ ಚಿತ್ರಗಳನ್ನು ಕಳುಹಿಸಿಕೊಟ್ಟಿದೆ.
ಬೆಂಗಳೂರು (ಆ.18): ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆ ಅಂತಿಮ ಘಟ್ಟ ತಲುಪಿದೆ. ಪ್ರಪಲ್ಶನ್ ಮಾಡ್ಯುಲ್‌ನಿಂದ ವಿಕ್ರಮ್ ಲ್ಯಾಂಡರ್ ಬೇರ್ಪಟ್ಟಿರುವ ಚಿತ್ರಗಳನ್ನು ಹಾಗೂ ಚಂದ್ರನ ಅತ್ಯಂತ ಸನಿಹದ ಚಿತ್ರಗಳನ್ನು ವಿಕ್ರಮ್ ಲ್ಯಾಂಡರ್ ಭೂಮಿಗೆ ಕಳುಹಿಸಿಕೊಟ್ಟಿದೆ. ಈ ಚಿತ್ರಗಳ 31 ಸೆಕೆಂಡ್ನ ವಿಡಿಯೋವನ್ನು ಇಸ್ರೋ ಶುಕ್ರವಾರ ಬಿಡುಗಡೆ ಮಾಡಿದೆ. ಚಂದ್ರಯಾನ-3 ನೌಕೆಯ ವಿಕ್ರಮಲ್ ಲ್ಯಾಂಡರ್‌ನಲ್ಲಿ ಅಳವಡಿಸಲಾಗಿರುವ ಇಮೇಜರ್ (ಎಲ್1) ಕ್ಯಾಮೆರಾ-1ರಿಂದ ಸೆರೆಹಿಡಿದ ಚಿತ್ರಗಳು ಇದಾಗಿವೆ ಎಂದು ಇಸ್ರೋ ತಿಳಿಸಿದೆ. ಆಗಸ್ಟ್ 17 ರಂದು ಚಂದ್ರನ ಕಕ್ಷೆಯಲ್ಲಿ ಪ್ರಪಲ್ಶನ್ ಮಾಡ್ಯೂಲ್ ಹಾಗೂ ವಿಕ್ರಮ್ ಲ್ಯಾಂಡರ್ ಬೇರ್ಪಟ್ಟ ತಕ್ಷಣದಲ್ಲಿ ತೆಗೆದ ಚಿತ್ರಗಳು ಇದಾಗಿವೆ ಎಂದು ಮಾಹಿತಿ ನೀಡಿದೆ. ಇದಕ್ಕೂ ಮುನ್ನ ಆಗಸ್ಟ್ 15 ರಂದು ಲ್ಯಾಂಡರ್ ಪೊಸಿಷನ್ ಡಿಟೆಕ್ಟರ್ ಕ್ಯಾಮೆರಾದಿಂದ ಚಂದ್ರನ ಚಿತ್ರಗಳನ್ನು ಸೆರೆಹಿಡಿಯಲಾಗಿತ್ತು.
ಪ್ರಪಲ್ಶನ್ ಮಾಡ್ಯುಲ್‌ನಿಂದ ಬೇರ್ಪಟ್ಟಿರುವ ಚಂದ್ರಯಾನ-3ಯ ವಿಕ್ರಮ್ ಲ್ಯಾಂಡರ್‌ಅನ್ನು ಈಗ ಚಂದ್ರನ ಮೇಲೆ ಇಳಿಸುವ ಕೆಲಸ ನಡೆಯಲಿದೆ. ಇದಕ್ಕಾಗಿ ಶುಕ್ರವಾರ ಸಂಜೆ 4 ಗಂಟೆಗೆ ವಿಕ್ರಮ್ ಲ್ಯಾಂಡರ್‌ಅನ್ನು ಡಿಬೂಸ್ಟ್ ಮಾಡುವ ಪ್ರಕ್ರಿಯೆ ನಡೆಯಲಿದೆ. ಡಿಬೂಸ್ಟ್ ಎಂದರೆ, ಲ್ಯಾಂಡರ್‌ಅನ್ನು ಚಂದ್ರನ ಕಕ್ಷೆಯಲ್ಲಿ ನಿಧಾನಗೊಳಿಸುವ ಪ್ರಕ್ರಿಯೆ. ಆಗಸ್ಟ್ 23 ರಂದು ಚಂದ್ರನ ಮೇಲೆ ಲ್ಯಾಂಡರ್ ಇಳಿಯುವ ಮುನ್ನ ಸಾಕಷ್ಟು ಬಾರಿ ಡಿಬೂಸ್ಟ್ ಪ್ರಕ್ರಿಯೆ ನಡೆಯಲಿದೆ.
Chandrayaan-3 vs Lunar-25: ಆಮೆ-ಮೊಲದ ಸ್ಪೇಸ್ ರೇಸ್‌ನಲ್ಲಿ ಗೆಲ್ಲೋದ್ ಯಾರು?
ಇದರಿಂದಾಗಿ ವಿಕ್ರಮ್ ಲ್ಯಾಂಡರ್‌ನ ಪೆರಿಲುನ್ (ಚಂದ್ರನ ಅತ್ಯಂತ ಸನಿಹದ ಪಾಯಿಂಟ್) 30 ಕಿಲೋಮೀಟರ್ ಆಗಿರಲಿದ್ದರೆ, ಅಪೋಲುನ್ (ಚಂದ್ರನ ಗರಿಷ್ಠ ದೂರದ ಪಾಯಿಂಟ್) 100 ಕಿಲೋಮೀಟರ್ ಆಗಿರಲಿದೆ. ಈ ಕಕ್ಷೆಯಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್ ಮಾಡುವ ಪ್ರಕ್ರಿಯೆ ಆಗಸ್ಟ್ 23 ರಂದು ನಡೆಯಲಿದೆ.
ಎಲ್ಲಾ ವ್ಯವಸ್ಥೆ ಫೇಲ್ ಆದರೂ, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯೋದು ಖಂಡಿತ: ಇಸ್ರೋ ಚೀಫ್
ಯಶಸ್ವಿಯಾಗಿ ನಡೆದ ಡಿಬೂಸ್ಟ್: ವಿಕ್ರಮ್ ಲ್ಯಾಂಡರ್‌ಅನ್ನು ಡಿಬೂಸ್ಟ್ ಮಾಡುವ ಪ್ರಕ್ರಿಯೆ ಶುಕ್ರವಾರ ಯಶಸ್ವಿಯಾಗಿ ನಡೆದಿದೆ ಎಂದು ಇಸ್ರೋ ತಿಳಿಸಿದೆ. ಲ್ಯಾಂಡರ್ ಮ್ಯಾಡ್ಯೂಲ್‌ಅನ್ನು ಶುಕ್ರವಾರ ಸಂಜೆ ಯಶಸ್ವಿಯಾಗಿ ಡಿಬೂಸ್ಟಿಂಗ್ ಮಾಡಲಾಗಿದ್ದು, ಚಂದ್ರನ ಮೇಲೆ 113*157 ಕಕ್ಷೆಯಲ್ಲಿ ಇಳಿಸಲಾಗಿದೆ. 2ನೇ ಡಿಬೂಸ್ಟಿಂಗ್ ಪ್ರಕ್ರಿಯೆ ಆಗಸ್ಟ್ 20 ರಂದು ರಾತ್ರಿ 8 ಗಂಟೆಗೆ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.