ಮಳೆ ಅಭಾವ ಹಾಗೂ ಸಕ್ಕರೆ ಕೊರತೆಯ ಆತಂಕದಿಂದಾಗಿ 2026-27ನೇ ಸಾಲಿನಲ್ಲಿ ಸಕ್ಕರೆ ಆಧಾರಿತ ಎಥೆನಾಲ್ ಖರೀದಿಸದಿರಲು ತೈಲ ಕಂಪನಿಗಳು ನಿರ್ಧರಿಸಿವೆ. ಬದಲಾಗಿ ಮೆಕ್ಕೆಜೋಳ, ಅಕ್ಕಿ ಮತ್ತು ಸಿ-ದರ್ಜೆಯ ಕಾಕಂಬಿಯಿಂದ ಉತ್ಪಾದಿಸಿದ ಎಥೆನಾಲ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ಅಲ್ಲದೆ, ಮೆಕ್ಕೆಜೋಳ ಆಧಾರಿತ ಎಥೆನಾಲ್ ಪ್ರೋತ್ಸಾಹ ಧನವನ್ನು ಕಡಿತಗೊಳಿಸಲಾಗಿದೆ.

ನವದೆಹಲಿ: 2026-27ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಅಧೀನದ ತೈಲ ಕಂಪನಿಗಳು ಸಕ್ಕರೆ ಆಧಾರಿತ ಕಚ್ಚಾವಸ್ತುಗಳಿಂದ ತಯಾರಿಸುವ ಎಥೆನಾಲ್‌ ಖರೀದಿಸದಿರಲು ನಿರ್ಧರಿಸಿವೆ. ಮಳೆ ಅಭಾವ ಹಾಗೂ ಮಾರುಕಟ್ಟೆಯಲ್ಲಿ ಸಕ್ಕರೆಯ ಆತಂಕ ಸರಿದೂಗಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಸಾಲಿನ ಟೆಂಡರ್‌ನಲ್ಲಿ ಕಬ್ಬಿನ ರಸ, ಸಕ್ಕರೆ ಶಿರಪ್‌ ಮತ್ತು ಕಾಕಂಬಿಯಿಂದ (ಬಿ-ಹೆವಿ ಮೊಲಾಸಿಸ್‌) ತಯಾರಿಸುವ ಎಥೆನಾಲ್‌ ಅನ್ನು ಟೆಂಡರ್‌ನಿಂದ ಹೊರಗಿಡಲು ಸರ್ಕಾರಿ ತೈಲ ಕಂಪನಿಗಳು ತೀರ್ಮಾನಿಸಿವೆ.

ಎಥೆನಾಲ್‌ ಪೂರೈಕೆದಾರ ಬಿಡ್‌ನಲ್ಲಿ ಪಾಲ್ಗೊಳ್ಳಬಹುದು

ತೈಲ ಕಂಪನಿಗಳ ಪರ ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ (ಬಿಪಿಸಿಎಲ್‌) ಅ.16ರಂದು ಟೆಂಡರ್‌ ಆಹ್ವಾನಿಸಿದ್ದು, ಈ ನವೆಂಬರ್‌ನಿಂದ ಮುಂದಿನ ಅಕ್ಟೋಬರ್‌ ವರೆಗೆ 11 ಶತಕೋಟಿ ಲೀಟರ್‌ ಎಥೆನಾಲ್‌ ಖರೀದಿಗೆ ಉದ್ದೇಶಿಸಿದೆ. ಪೆಟ್ರೋಲ್‌ ಜತೆ ಶೇ.20ರಷ್ಟು ಎಥೆನಾಲ್‌ ಮಿಶ್ರಣ ಮಾಡುವ ಸರ್ಕಾರದ ನಿರ್ಧಾರದ ಭಾಗವಾಗಿ ಈ ಟೆಂಡರ್‌ ಆಹ್ವಾನಿಸಲಾಗಿದೆ. ಮೆಕ್ಕೆಜೋಳ, ಅಕ್ಕಿ, ಎಫ್‌ಸಿಐನಿಂದ ಖರೀದಿಸಿದ ಹೆಚ್ಚುವರಿ ಅಕ್ಕಿ, ಸಿ-ದರ್ಜೆಯ ಕಾಕಂಬಿಯಿಂದ ಉತ್ಪಾದಿಸಿದ ಎಥೆನಾಲ್‌ ಪೂರೈಕೆದಾರರಷ್ಟೇ ಈ ಬಿಡ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ.

ಇದೇ ವೇಳೆ ಮೆಕ್ಕೆಜೋಳ ಆಧಾರಿತ ಎಥೆನಾಲ್‌ಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಲೀಟರ್‌ಗೆ 71.86 ರು.ನಿಂದ 68.86 ರು.ಗೆ ಇಳಿಸಿದೆ. ಈವರೆಗೆ ಮೆಕ್ಕೆಜೋಳದಿಂದ ಉತ್ಪಾದಿಸುವ ಪ್ರತಿ ಲೀಟರ್‌ ಎಥೆನಾಲ್‌ಗೆ 5.79 ರು. ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಅದನ್ನೀಗ 2.79 ರು.ಗೆ ಇಳಿಸಲಾಗಿದೆ.