ಹಪ್ಪಳ ಮಾರಾಟ ಮಾಡುತ್ತಿದ್ದ ಸ್ವಾಭಿಮಾನಿ ಬಾಲಕನಿಗೆ ಯೂಟ್ಯೂಬರ್ 500 ರೂ. ಕೊಟ್ಟಾಗ, ಬಾಲಕ 'ನಾನು ವ್ಯಾಪಾರ ಮಾಡುತ್ತಿದ್ದೇನೆ, ಭಿಕ್ಷೆ ಬೇಡುತ್ತಿಲ್ಲ' ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ರಸ್ತೆ, ಬೀದಿ, ಪಾರ್ಕ್‌ಗಳು, ಸಮುದ್ರ-ನದಿ ತೀರಗಳು, ವಾಯು ವಿಹಾರ ತಾಣಗಳು, ಟ್ರಾಫಿಕ್ ಸಿಗ್ನಲ್‌ಗಳು, ಜಾತ್ರೆಗಳು, ಬಸ್-ರೈಲು ನಿಲಗದಾಣಗಳು, ದೇವಾಲಯಗಳ ಮುಂಭಾಗ ಸೇರಿ ವಿವಿಧೆಡೆ ಕೆಲವು ಮಕ್ಕಳು ಕೈಯಲ್ಲಿ ಕೆಲವು ವಸ್ತುಗಳನ್ನು ಹಿಡಿದು ಮಾರಾಟ ಮಾಡುವುದನ್ನು ನೀವು ನೋಡಿರುತ್ತೀರಿ. ಕೆಲವು ಮಕ್ಕಳು ಪೆನ್ನು, ಪ್ಲಾಸ್ಟಿಕ್ ಸಾಮಗ್ರಿ, ಗೊಂಬೆಗಳು, ಮಿಠಾಯಿ, ಟೀ-ಕಾಫಿ, ಹೂವು ಹಾಗೂ ತರಕಾರಿಗಳನ್ನು ಮಾರಾಟ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ, ಈ ಮಕ್ಕಳ ಪೈಕಿ ಕೆಲವರು ಅತ್ಯಂತ ಸ್ವಾಭಿಮಾನಿಗಳಾಗಿರುತ್ತಾರೆ. ಅಂಥವರ ಬಳಿ ನೀವು ಸ್ವಲ್ಪ ತಪ್ಪಾಗಿ ನಡೆದುಕೊಂಡರೂ ನಿಮ್ಮ ಮಾನವೇ ಹರಾಜಾಗುವುದು ಗ್ಯಾರಂಟಿ. ಇಂತಹ ಸ್ವಾಭಿಮಾನಿ ಬಾಲಕನಿಗೆ ಯೂಟ್ಯೂಬರ್ ವ್ಯಕ್ತಿಯೊಬ್ಬರು ಹಣವನ್ನು ಕೊಟ್ಟು ಪೇಚಿಗೆ ಸಿಲುಕು ಮರ್ಯಾದೆ ಕಳೆದುಕೊಂಡು ಬಂದಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಯುವ್‌ನಿಕ್ ವೈರಲ್ ಟ್ರಸ್ಟ್ (YouNick Viral Trust) ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾದ ವೀಡಿಯೋದಲ್ಲಿ ಒಬ್ಬ ಯೂಟ್ಯೂಬರ್ ತಾನು ವಿಡಿಯೋ ಮಾಡುತ್ತಾ ಹಪ್ಪಳ ಮಾರಾಟ ಮಾಡುತ್ತಿದ್ದ ಹುಡುಗನ ಬಳಿ ಹೋಗಿ ಹಪ್ಪಳ ತೆಗೆದುಕೊಂಡಿದ್ದಾರೆ. ತಾನು ದೊಡ್ಡ ಕರುಣಾಮಯಿ, ದಾನ ಮಾಡುವ ವ್ಯಕ್ತಿ ಎಂದು ಬಿಂಬಿಸಿಕೊಳ್ಳಲು ಒಂದು ಹಪ್ಪಳವನ್ನು ಪಡೆದು ಅದಕ್ಕೆ 500 ರೂ. ಪಾವತಿ ಮಾಡಿದ್ದಾರೆ. ಆದರೆ, ಆ ಬಾಲಕ ನಾನು ಹಪ್ಪಳ ಮಾರಾಟ ಮಾಡುವವನು, ಭಿಕ್ಷೆ ಬೇಡುವವನಲ್ಲ ಎಂದು ಹೇಳಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: 'ನಾಯಿ ಜೊತೆಗೆ ಸ್ನೇಹ ಮಾಡಿದ ಹುಲಿ'ಯ ವಿಡಿಯೋ ವೈರಲ್; ಇದು ಸಸ್ಯಾಹಾರಿ ಹುಲಿಯೇ?
ವೀಡಿಯೋದಲ್ಲಿ ನಡೆದ ಸಂಭಾಷಣೆ ಏನು?
ವೈರಲ್ ವಿಡಿಯೋದಲ್ಲಿ ಒಬ್ಬ ಪುಟ್ಟ ಹುಡುಗ ಹಪ್ಪಳ ಮಾರುವುದು ಕಾಣಬಹುದು. ಆಗ ವಿಡಿಯೋ ಚಿತ್ರೀಕರಿಸುತ್ತಿರುವ ಯುವಕ ಹುಡುಗನ ಬಳಿ ಬಂದು ಮಾತನಾಡಿಸುತ್ತಾನೆ. ಇಂದಿನ ವ್ಯಾಪಾರ ಹೇಗಿದೆ ಎಂದು ಕೇಳಿದಾಗ, ಬಾಲಕ ಹೆಚ್ಚು ಹಪ್ಪಳ ಮಾರಾಟವಾಗಿಲ್ಲ ಎಂದು ಬೇಸರದಿಂದ ಹೇಳುತ್ತಾನೆ. ಆಗ, ಯೂಟ್ಯೂಬರ್ ತಾನು ಹುಡುಗನಿಂದ ಹಪ್ಪಳ ಖರೀದಿಸುವುದಾಗಿ ಯುವಕ ಹೇಳಿ, ಹಪ್ಪಳದ ಬೆಲೆ ಕೇಳುತ್ತಾನೆ. ಆಗ ಸಣ್ಣ ಹುಡುಗ ಒಂದು ಪ್ಯಾಕೆಟ್ ಹಪ್ಪಳಕ್ಕೆ 30 ರೂಪಾಯಿ ಎಂದು ಉತ್ತರಿಸುತ್ತಾನೆ.
ಮೊದಲೇ ಹಪ್ಪಳ ವ್ಯಾಪಾರವಿಲ್ಲದೆ ಕುಳಿತಿದ್ದ ಹುಡುಗನ ಬಳಿ ನೀನು 5 ರೂ.ಗೆ ಹಪ್ಪಳದ ಕೊಟ್ಟರೆ ಖರೀದಿ ಮಾಡುವುದಾಗಿ ಹೇಳುತ್ತಾನೆ. ಆಗ, ನನಗೆ ನಷ್ಟವಾಗುತ್ತದೆ ಎಂದು ಹಪ್ಪಳ ಕೊಡಲು ಒಪ್ಪುವುದಿಲ್ಲ. ಸ್ವಲ್ಪ ನಿಧಾನ ಮಾಡಿ ಸರಿ 5 ರೂ. ಕೊಡಿ, ಹಪ್ಪಳ ಕೊಡುತ್ತೇನೆ ಎಂದು ಬೇಸರದಿಂದಲೇ ಹೇಳುತ್ತಾನೆ. ಆಗ ವಿಡಿಯೋ ಮಾಡುತ್ತಿದ್ದ ಯುವಕ ಹುಡುಗನಿಗೆ ತಲಾ 100 ರೂ. ಮೌಲ್ಯದ ನೋಟುಗಳನ್ನು 500 ರೂ. ಕೊಡುತ್ತಾನೆ. ಆದರೆ, ಇಷ್ಟು ಹಣ ನನಗೇಕೆ ಕೊಟ್ಟಿದ್ದೀರಿ ಎಂದು ಅದನ್ನು ತೆಗೆದುಕೊಳ್ಳಲು ನಿರಾಕರಿಸುತ್ತಾನೆ. ನಾನು ವ್ಯಾಪಾರ ಮಾಡುತ್ತಿದ್ದೇನೆ, ಭಿಕ್ಷೆ ಬೇಡುತ್ತಿಲ್ಲ (ನಾನು ಕೆಲಸ ಮಾಡ್ತೀನಿ, ಭಿಕ್ಷೆ ಬೇಡ)ಎಂದು ಹೇಳುತ್ತಾನೆ. ನಂತರ ನನಗೆ ನೀವು ಹಪ್ಪಳ ಖರೀದಿ ಮಾಡಿದ್ದಕ್ಕೆ 30 ರೂ. ಅಷ್ಟೇ ಕೊಟ್ಟರೆ ಸಾಕು ಎಂದು ಕೇವಲ 30 ರೂ. ಪಡೆದುಕೊಳ್ಳುತ್ತಾನೆ.
ಇದನ್ನೂ ಓದಿ: Watch | ಇದೆಂಥ ಹುಚ್ಚಾಟ? ಮಲಗಿದ್ದವನ 'ಆ ಜಾಗಕ್ಕೆ' ಬೆಂಕಿಹಚ್ಚಿದ ಸ್ನೇಹಿತರು!
ಆಗ ಯೂಟ್ಯೂಬರ್ ನಾನು ನಿನಗೆ ಭಿಕ್ಷೆ ಕೊಡುತ್ತಿಲ್ಲ, ಸಂತೋಷದಿಂದ ಮಾನವೀಯತೆ ದೃಷ್ಟಿಯಿಂದ ಕೊಡುತ್ತಿದ್ದೇನೆ. ಈ ಹಣ ನಿಮ್ಮ ತಾಯಿಗೆ ಕಷ್ಟಕ್ಕೆ ನೆರವಾಗಬಹುದು ತೆಗೆದುಕೊಂಡು ಹೋಗಿ ಕೊಡು ಎಂದು ಒತ್ತಾಯ ಮಾಡುತ್ತಾನೆ. ಆಗ ಬಾಲಕ 500 ರೂಪಾಯಿ ತೆಗೆದುಕೊಳ್ಳುತ್ತಾನೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು, 10 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
