ಚೆನ್ನೈ(ಮೇ 12) ಕೊರೋನಾ ಸಂಕಷ್ಟಕ್ಕೆ ಈ ಬಾಲಕನ ಹೃದಯ ಮಿಡಿದಿದೆ. ಸೈಕಲ್ ಖರೀದಿಗೆ ಎಂದು  ಕೂಡಿಟ್ಟುಕೊಂಡಿದ್ದ ಹಣವನ್ನು ಈ ಬಾಲಕ ಸಿಎಂ ಪರಿಹಾರ ನಿಧಿಗೆ ನೀಡಿದ್ದ. ಹೃದಯ ವೈಶ್ಯಾಲತೆ ಮೆರೆದಿದ್ದ  7 ವರ್ಷದ  ಬಾಲಕ ಹರೀಶ್ ವರ್ಮನ್ ಗೆ ಈಗ ಹೊಸ ಸೈಕಲ್ ಬಂದಿದೆ.

ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿಶೇಷ ಉಡುಗೊರೆ ಆಗಿ ಸೈಕಲ್  ನೀಡಿದ್ದಾರೆ. ಮಧುರೈ ಮೂಲದ ಎಲೆಕ್ಟ್ರಿಷಿಯನ್ ಅವರ ಪುತ್ರ ಹರೀಶ್ ವರ್ಮನ್ ಎರಡು ವರ್ಷಗಳಿಂದ ಸಂಗ್ರಹಿಸಿ ಇಟ್ಟಿದ್ದ 1,000 ರೂಪಾಯಿ ಹಣವನ್ನು ಸಿಎಂ ಕೊವಿಡ್-19 ಪರಿಹಾರ ನಿಧಿಗೆ ನೀಡಿದ್ದ. ಬಾಲಕನ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಸಿಎಂ ಎಂ ಕೆ ಸ್ಟಾಲಿನ್ ಬಾಲಕನಿಗೆ ಸೈಕಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಕೊರೋನಾ ಫಂಡ್ ಕಲೆಹಾಕುತ್ತಿರುವ ಪ್ರಿಯಾಂಕಾ ಚೋಪ್ರಾ

ಕೊರೊನಾವೈರಸ್ ಸೋಂಕಿನಿಂದ ಜನರು ನಿತ್ಯ ಅನುಭವಿಸುತ್ತಿದ್ದ ನರಕಯಾತನೆಯನ್ನು ನೋಡಿದ 7 ವರ್ಷದ ಬಾಲಕ ಹರೀಶ್ ತನ್ನ ಹಣವನ್ನು ಮುಖ್ಯಮಂತ್ರಿ ಕೊವಿಡ್-19 ಪರಿಹಾರ ನಿಧಿಗೆ ನೀಡಿದ್ದ.  1,000 ರೂಪಾಯಿ ಹಣದ ಜೊತೆಗೆ ಪತ್ರ ಬರೆದಿದ್ದ ಬಾಲಕ  ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿನಿಂದ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದ.

ಮೇ 9ರಂದು ಮಧುರೈ ಉತ್ತರ ಕ್ಷೇತ್ರದ ಶಾಸಕ ತಳಪಥಿ ಅವರು ತಮ್ಮ ಬೆಂಬಲಿಗರೊಂದಿಗೆ ಹರೀಶ್ ವರ್ಮನ್ ಅವರ ಮನೆಗೆ ಭೇಟಿ ನೀಡಿ ಸೈಕಲ್ ನೀಡಿದ್ದಾರೆ. . ಕೆಂಪು-ನೀಲಿ ಬಣ್ಣದ ಸೈಕಲ್ ನೀಡಲಾಯಿತು. ಇದೇ ಸಂದರ್ಭ ದೂರವಾಣಿ ಮೂಲಕ ಬಾಲಕನ ಜೊತೆಗೆ ಮಾತನಾಡಿದ ಸಿಎಂ ಎಂ ಕೆ ಸ್ಟಾಲಿನ್ ಧನ್ಯವಾದ ತಿಳಿಸಿದರು. ಹೊಸ ಸೈಕಲ್ ಪಡೆದ ಖುಷಿಯಲ್ಲಿ ಬಾಲಕ ಸವಾರಿ ಮಾಡುತ್ತಿದ್ದಾನೆ.