ನವದೆಹಲಿ (ಡಿ.18): ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ರಕ್ಷಣಾ ಉದ್ದೇಶದಿಂದ ಮಹತ್ವದ್ದಾಗಿದ್ದು, ಇಂತಹ ರಸ್ತೆಗಳು 10 ಮೀಟರ್‌ ಅಗಲ ಇರುವುದು ಕಡ್ಡಾಯ ಎಂದು ಹೆದ್ದಾರಿ ಸಚಿವಾಲಯ ತಿಳಿಸಿದೆ. ಗಡಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳ ಅಗಲವನ್ನು 5.5 ಮೀಟರ್‌ಗೆ ಸೀಮಿತಗೊಳಿಸಿ 2 ವರ್ಷಗಳ ಹಿಂದೆ ಹೊರಡಿಸಿದ್ದ ಅಧಿಸೂಚನೆಯಲ್ಲಿ ಸಚಿವಾಲಯ ಬದಲಾವಣೆ ಮಾಡಿದೆ. 

ಈ ಮುನ್ನ ವ್ಯೂಹಾತ್ಮಕವಾಗಿ ಮಹತ್ವದ್ದಾದ ರಸ್ತೆಗಳ ಅಗಲದ ಕುರಿತು ನಿರ್ದಿಷ್ಟವಾದ ಮಾನದಂಡ ಇರಲಿಲ್ಲ. ಆದರೆ, ಇತ್ತೀಚಿನ ಲಡಾಖ್‌ ಬಿಕ್ಕಟ್ಟು ಹಾಗೂ ಚೀನಾದ ಜೊತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಗಡಿ ರಸ್ತೆಗಳ ಅಗಲವನ್ನು ಹೆಚ್ಚಿಸುವಂತೆ ರಕ್ಷಣಾ ಸಚಿವಾಲಯ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ ಎಂದು ಹೆದ್ದಾರಿ ಸಚಿವಾಲಯ ತಿಳಿಸಿದೆ.

ಚೀನಾ ಜೊತೆ ಗಡಿ ಸಂಘರ್ಷ: 15 ದಿನದ ಭಾರಿ ಯುದ್ಧಕ್ಕೆ ಶಸ್ತ್ರಾಸ್ತ್ರ ಸಂಗ್ರಹ!
 
ಈ ಆದೇಶದ ಪ್ರಕಾರ, ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ಗುಡ್ಡಗಾಡು ಹಾಗೂ ಪರ್ವತ ಪ್ರದೇಶಗಳಲ್ಲಿ ಇರುವ ರಸ್ತೆಗಳನ್ನು ವ್ಯೂಹಾತ್ಮಕವಾಗಿ ಮಹತ್ವದ ರಸ್ತೆಗಳೆಂದು ಪರಿಗಣಿಸಲಾಗಿದೆ. ಇಂತಹ ರಸ್ತೆಗಳಲ್ಲಿ ವಾಹನಗಳು ಸಂಚರಿಸುವ ಮಾರ್ಗ 7 ಮೀಟರ್‌ ಅಗಲವಾಗಿರಬೇಕು. ಜೊತೆಗೆ ಎರಡೂ ಕಡೆಗಳಲ್ಲಿ 1.5 ಮೀಟರ್‌ನಷ್ಟುಹೆಚ್ಚುವರಿ ಜಾಗವನ್ನು ಬಿಡಬೇಕು ಎಂದು ತಿಳಿಸಲಾಗಿದೆ. ಸೇನಾ ವಾಹನಗಳು ಮತ್ತು ಸೈನಿಕರನ್ನು ಗಡಿ ಪ್ರದೇಶಕ್ಕೆ ತ್ವರಿತವಾಗಿ ರವಾನಿಸುವುದಕ್ಕೆ ಈ ರಸ್ತೆಗಳು ಬಳಕೆ ಆಗುವ ಕಾರಣ ಹೆದ್ದಾರಿ ವಿಸ್ತರಣೆ ಆದೇಶ ಮಹತ್ವ ಪಡೆದುಕೊಂಡಿದೆ.