ನವದೆಹಲಿ(ಅ.05): ಮನಾಲಿ ಹಾಗೂ ಲೇಹ್‌ ನಡುವಿನ 9.2 ಕಿ.ಮೀ. ಉದ್ದದ ಅಟಲ್‌ ಸುರಂಗ ಮಾರ್ಗದ ನಿರ್ಮಾಣದ ಬೆನ್ನಲ್ಲೇ, ಲಡಾಖ್‌ಗೆ ಸಂಪರ್ಕ ಕಲ್ಪಿಸುವ ಸರ್ವಋುತು ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಗಡಿ ರಸ್ತೆಗಳ ಸಂಘಟನೆಯ ಮುಖ್ಯಸ್ಥ ಲೆ| ಜ. ಹರ್ಪಾಲ್‌ ಸಿಂಗ್‌ ಅವರಿಗೆ ಸೂಚನೆ ನೀಡಿದ್ದಾರೆ.

ಅಟಲ್‌ ಸುರಂಗ ಮಾರ್ಗದ ಉದ್ಘಾಟನೆಯ ವೇಳೆ ಗಡಿ ಪ್ರದೇಶದ ರಸ್ತೆ ಮೂಲಸೌಕರ್ಯಗಳ ಕುರಿತಂತೆ ಹರ್ಪಾಲ್‌ ಸಿಂಗ್‌ ಅವರೊಂದಿಗೆ ಚರ್ಚೆ ನಡೆಸಿದ ಮೋದಿ, ಗಡಿ ಭಾಗದ ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದರಿಂದ ಭಾರತೀಯ ಪಡೆಗಳು ಗಡಿಯ ತುತ್ತತುದಿಯವರೆಗೂ ಕಾವಲು ಕಾಯಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಲಡಾಖ್‌ಗೆ ಸರ್ವಋುತುವಿನಲ್ಲೂ ಸಂಪರ್ಕ ಕಲ್ಪಿಸುವ ಶಿಂಕುಲಾ ಸುರಂಗವನ್ನು ಮುಂದಿನ 3 ವರ್ಷದಲ್ಲಿ ಪೂರ್ಣಗೊಳಿಸುವ ಕುರಿತಂತೆಯೂ ಮೋದಿ ಚರ್ಚೆ ನಡೆಸಿದ್ದಾರೆ. 13.5 ಕಿ.ಮೀ. ಉದ್ದದ ಸುರಂಗ ಮಾರ್ಗ ಇದಾಗಿದ್ದು, ಲಡಾಖ್‌, ಲಾಹೌಲ್‌ ಮತ್ತು ಹಿಮಾಚಲ ಪ್ರದೇಶದ ಸ್ಪಿತಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿದೆ.