Asianet Suvarna News Asianet Suvarna News

ಸಾಮಾನ್ಯರ ಸಿಎಂ, ಅಸಾಮಾನ್ಯ ಸುಧಾರಣೆಗಳು!

* 100 ದಿನದ ಆಡಳಿತದಲ್ಲೇ ಮೋದಿಯವರ ದೂರದೃಷ್ಟಿಸಾಕಾರದ ಭರವಸೆ ಮೂಡಿಸಿದ ಬೊಮ್ಮಾಯಿ

* ಸಾಮಾನ್ಯರ ಸಿಎಂ, ಅಸಾಮಾನ್ಯ ಸುಧಾರಣೆಗಳು

Bommai government completes 100 days in office Extraordinary Improvements By CM pod
Author
Bangalore, First Published Nov 5, 2021, 8:22 AM IST

- ಡಾ| ಕೆ.ಸುಧಾಕರ್‌

ಆರೋಗ್ಯ, ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ

ಬೆಂಗಳೂರು(ನ.05) ನವಭಾರತ ನಿರ್ಮಾಣದ ಹಾದಿಯಲ್ಲಿ ನವಕರ್ನಾಟಕ ನಿರ್ಮಿಸುವ ಭರವಸೆಯ ನಾಯಕನಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ನಾಡಿನ ಜನತೆಗೆ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಸಿಎಂ ಎಂದರೆ ‘ಕಾಮನ್‌ ಮ್ಯಾನ್‌’ ಎಂಬ ಮಾತು ಈಗ ಜನಜನಿತವಾಗಿದೆ. ಇದಕ್ಕೆ ಪೂರಕವಾಗಿ ಅವರು ಆಡಳಿತದಲ್ಲಿ ಕೈಗೊಂಡ ಕೆಲ ಸಣ್ಣ ಕ್ರಮಗಳು ಕೂಡ ದೊಡ್ಡ ಮಟ್ಟದಲ್ಲಿ ಜನರ ಮನ ಗೆದ್ದಿವೆ.

ಸಾವಿರಾರು ವರ್ಷಗಳ ದೀರ್ಘ ಇತಿಹಾಸ, ಪರಂಪರೆ, ವೈಭವ ಹೊಂದಿರುವ ಭಾರತಾಂಬೆಯ ಹೆಮ್ಮೆಯ ತನುಜಾತೆ ಕರ್ನಾಟಕ (Karnataka) ಮಾತೆ ವಿಶ್ವದ ಭೂಪಟದಲ್ಲಿ ತನ್ನದೇ ಆದ ವಿಶಿಷ್ಟಸ್ಥಾನ ಪಡೆದಿದ್ದಾಳೆ. ಭಾರತದ ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ ಆರೋಗ್ಯ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ, ಕೈಗಾರಿಕೆ ಮೊದಲಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. 21ನೇ ಶತಮಾನ ಭಾರತದ ಶತಮಾನ ಎಂದೇ ವ್ಯಾಖ್ಯಾನ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನವಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಲು, ಆತ್ಮನಿರ್ಭರ ಭಾರತ (Atmanirbhar Bharat) ನಿರ್ಮಿಸಲು ಕರ್ನಾಟಕದ ಪಾತ್ರ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ದೃಢ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ನವೆಂಬರ್‌ 4ಕ್ಕೆ ನೂರು ಯಶಸ್ವಿ ದಿನಗಳನ್ನು ಪೂರೈಸಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಜನಸ್ನೇಹಿ ಆಡಳಿತದತ್ತ ನೂರು ದಿಟ್ಟಹೆಜ್ಜೆಗಳನ್ನಿಟ್ಟಿದೆ.

100 ದಿನದ ಯಶಸ್ವಿ ಆಡಳಿತ

2019ರಲ್ಲಿ ಅಧಿಕಾರ ವಹಿಸಿಕೊಂಡ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು, ಕೋವಿಡ್‌ ಸಂಕಷ್ಟ (Covid Crisis), ಪ್ರವಾಹ (Flood) ಮೊದಲಾದ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿ ಮುಂದಿನ ಪೀಳಿಗೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಂದೆ ಎಸ್‌.ಆರ್‌.ಬೊಮ್ಮಾಯಿ ನಾಡು ಕಂಡ ಧೀಮಂತ ನಾಯಕರಲ್ಲೊಬ್ಬರು. ಇದರಿಂದ ಸಿಎಂ ಬೊಮ್ಮಾಯಿ ಅವರಿಗೆ ರಾಜಕೀಯದ ಒಳನೋಟಗಳು, ಅಧಿಕಾರದ ಪಡಸಾಲೆ ಹೊಸದಲ್ಲದಿದ್ದರೂ, ಅವರ ಸರಳ ವ್ಯಕ್ತಿತ್ವ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಸ್ವಭಾವ ಅನುಕರಣೀಯವಾಗಿದೆ.

ಶಾಸಕರಾಗಿ, ವಿಧಾನಪರಿಷತ್ತಿನ ಸದಸ್ಯರಾಗಿ, ಸಚಿವರಾಗಿ, ಸಾರ್ವಜನಿಕ ಜೀವನದಲ್ಲಿ ದೀರ್ಘ ಅನುಭವ ಹೊಂದಿರುವ ಅವರು, ಮುಖ್ಯಮಂತ್ರಿಯಾಗುವ ಮುನ್ನ ಯಡಿಯೂರಪ್ಪನವರ ಸಂಪುಟದಲ್ಲಿ ಗೃಹಸಚಿವರಾಗಿದ್ದಾಗ, ಕೋವಿಡ್‌ ರೋಗಿಗಳಿಗೆ ಹಾಸಿಗೆ ಕೊರತೆ ಉಂಟಾಗಬಾರದು ಎಂಬ ಕಾರಣಕ್ಕೆ ತಮ್ಮ ಮನೆಯ ಆವರಣದಲ್ಲೇ ಹಾಸಿಗೆಗಳನ್ನು ಅಳವಡಿಸಿ, ಕ್ವಾರಂಟೈನ್‌ ಕೇಂದ್ರ ನಿರ್ಮಿಸಿ ಜನಪ್ರತಿನಿಧಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದರು. ಮುಖ್ಯಮಂತ್ರಿಯಾದರೂ ಅವರ ಈ ಸರಳ ನಡೆ, ವಿನಮ್ರತೆಯ ಗುಣಗಳು ಎಳ್ಳಷ್ಟೂದೂರವಾಗಲಿಲ್ಲ. ಇದರಿಂದಾಗಿಯೇ ಸಿಎಂ ಎಂದರೆ ‘ಕಾಮನ್‌ ಮ್ಯಾನ್‌’ ಎಂಬ ಮಾತು ಈಗ ಜನಜನಿತವಾಗಿದೆ. ಇದಕ್ಕೆ ಪೂರಕವಾಗಿ ಅವರು ಆಡಳಿತದಲ್ಲಿ ಕೈಗೊಂಡ ಕೆಲ ಸಣ್ಣ ಕ್ರಮಗಳು ಕೂಡ ದೊಡ್ಡ ಮಟ್ಟದಲ್ಲಿ ಜನರ ಮನ ಗೆದ್ದಿವೆ.

ಕಾಮನ್‌ಮ್ಯಾನ್‌ ಸಿಎಂ

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೊಮ್ಮಾಯಿ ಅವರು, ಜನರಿಗೆ ಕಿರಿಕಿರಿಯಾಗುವ ಕೆಲ ಕ್ರಮಗಳನ್ನು ಹಿಂಪಡೆದರು. ಅನಗತ್ಯ ಪೊಲೀಸ್‌ ಗೌರವ ವಂದನೆಯನ್ನು ಕೈಬಿಟ್ಟು ಜನಸಾಮಾನ್ಯರಿಗಾಗುತ್ತಿದ್ದ ಕಷ್ಟತಪ್ಪಿಸಿದರು. ಸರ್ಕಾರಿ ಕಾರ್ಯಕ್ರಮ, ತಮ್ಮ ಭೇಟಿಯ ವೇಳೆ ದುಬಾರಿ ಹೂಗುಚ್ಛಗಳನ್ನು ನೀಡುವ ರೂಢಿಯನ್ನು ನಿಷೇಧಿಸಿ ಕನ್ನಡ ಪುಸ್ತಕಗಳನ್ನು ನೀಡುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಇದು ಪರೋಕ್ಷವಾಗಿ ಪುಸ್ತಕಗಳ ಮಹತ್ವವನ್ನೂ ಸಾರಿದಂತಾಗಿದೆ. ಜೊತೆಗೆ ಅನಗತ್ಯವಾಗಿ ಜೀರೋ ಟ್ರಾಫಿಕ್‌ ಕ್ರಮಕ್ಕೆ ಕಡಿವಾಣ ಹಾಕಿದರು. ಇವೆಲ್ಲ ಸಣ್ಣ ಕ್ರಮಗಳು ಎಂದೆನಿಸಿದರೂ, ಜನರ ಸೂಕ್ಷ್ಮ ಮನಸ್ಸನ್ನು ಅರಿಯುವ ಪ್ರಯತ್ನದ ಕ್ರಮಗಳಾಗಿದ್ದವು. ಇದರಿಂದಾಗಿ ಸಿಎಂ ಭಾವನಾತ್ಮಕವಾಗಿ ಜನರಿಗೆ ಸಮೀಪವಾಗಿದ್ದಾರೆ. ಇವರು ನಮ್ಮ ಸಿಎಂ ಎಂಬ ಭಾವನೆ ಜನರಲ್ಲಿ ಉಂಟಾಗಿದೆ. ಅಭಿವೃದ್ಧಿ ಕೆಲಸಗಳು ಸರ್ಕಾರ ಹಾಗೂ ಜನರನ್ನು ಒಳಗೊಂಡಿದೆ. ಇಬ್ಬರೂ ಸೇರಿ ಕಾರ್ಯ ನಿರ್ವಹಿಸಿದರೆ ಮಾತ್ರ ಸುಧಾರಣೆ ಸಾಧ್ಯ. ಈ ನಿಟ್ಟಿನಲ್ಲಿ ಜನರಿಗೆ ಹತ್ತಿರವಾಗುವ ಸೂಕ್ಷ್ಮತೆಯನ್ನು ಮುಖ್ಯಮಂತ್ರಿಗಳು ಪ್ರದರ್ಶಿಸಿರುವುದು ರಾಜಕಾರಣದಲ್ಲಿ ಹೊಸ ಹೆಜ್ಜೆ ಎನ್ನಬಹುದು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತರುವಾಗ ಮೊದಲ ಸಚಿವ ಸಂಪುಟ ಸಭೆಯಲ್ಲಿ ಬೊಮ್ಮಾಯಿರವರು ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ಘೋಷಿಸಿ 1,000 ಕೋಟಿ ರು. ಮೀಸಲಿಟ್ಟರು. ಹಿಂದೆ ಎಂದೂ ಈ ಬಗೆಯ ಯೋಚನೆಯನ್ನು ಯಾರೂ ಮಾಡಿರಲಿಲ್ಲ. ರೈತರ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ಸಹಕಾರ ನೀಡುವ ಈ ಯೋಜನೆಯು, ಅನ್ನದಾತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿದೆ. ಇದಲ್ಲದೆ, ವಯೋವೃದ್ಧರ ಪಿಂಚಣಿ, ವಿಧವಾ ವೇತನ, ವಿಶೇಷಚೇತನರ ವೇತನದ ಮೊತ್ತ ಹೆಚ್ಚಿಸಿದರು. ಸಮಾಜದ ಅಶಕ್ತ ವರ್ಗದ ಜನರಿಗೆ ಈ ರೀತಿಯಾಗಿ ಸ್ಪಂದಿಸಿದ ಮುಖ್ಯಮಂತ್ರಿಗಳು ಸಾಮಾಜಿಕ ಭದ್ರತಾ ವ್ಯವಸ್ಥೆಯ ಬಲವರ್ಧನೆ ಮಾಡಿ ಅನುಕೂಲ ಮಾಡಿಕೊಟ್ಟಿದ್ದಾರೆ.

ಅಭಿವೃದ್ಧಿಯ ಆಶೋತ್ತರ

ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗೆ ಕರೆ ನೀಡಿದ್ದು, ಸಮಗ್ರ ಸುಧಾರಣೆ ಮಾಡುವ ಸಂಕಲ್ಪವನ್ನು ಈ ಮೂಲಕ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಯೋಜನೆಗಳನ್ನು ಪ್ರಕಟಿಸಿದರು. ಎಲ್ಲಾ ರಂಗದಲ್ಲೂ ರಾಜ್ಯವನ್ನು ಮುಂಚೂಣಿಗೆ ತಂದು ಅಭಿವೃದ್ಧಿ ಕೈಗೊಳ್ಳಲು ಈ ಯೋಜನೆಗಳನ್ನು ನೀಡಲಾಗಿದೆ. 750 ಗ್ರಾಮ ಪಂಚಾಯಿತಿಗಳ ಮೂಲಸೌಕರ್ಯಾಭಿವೃದ್ಧಿ ಹಾಗೂ ವಸತಿರಹಿತರಿಗೆ ವಸತಿ, 750 ರೈತ ಉತ್ಪಾದಕ ಸಂಘಗಳ ಆರಂಭ, 75 ನಗರ ಸ್ಥಳೀಯ ಸಂಸ್ಥೆಗಳ ನಿರ್ಮಲೀಕರಣ, 750 ಶಾಲೆಗಳ ಸುಧಾರಣೆ, 750 ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ, 7,500 ಕಿರು ಸ್ವಸಹಾಯ ಗುಂಪುಗಳಿಗೆ ಸಹಾಯ ಮೊದಲಾದ ಕ್ರಮಗಳ ಮೂಲಕ ಸರ್ವ ಅಭಿವೃದ್ಧಿಯ ಆಶೋತ್ತರಗಳನ್ನು ಜಾರಿ ಮಾಡಲಾಗಿದೆ.

ಇಡೀ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನವಪರ್ವ ತರಲು ಪ್ರಧಾನಿ ನರೇಂದ್ರ ಮೋದಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ರೂಪಿಸಿದ್ದಾರೆ. ಇದು 34 ವರ್ಷಗಳ ಬಳಿಕ ಶಿಕ್ಷಣ ಕ್ಷೇತ್ರಕ್ಕೆ ದೊರೆತ ದೊಡ್ಡ ಕೊಡುಗೆ. ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮೊಟ್ಟಮೊದಲು ಸಿಎಂ ಬೊಮ್ಮಾಯಿ ಸರ್ಕಾರ ಈ ನೀತಿ ಅನುಷ್ಠಾನಗೊಳಿಸಿದೆ. ಇದು ಶಿಕ್ಷಣರಂಗದ ಸಮಗ್ರ ಸುಧಾರಣೆಯ ಮಹತ್ವದ ಹೆಜ್ಜೆ. ಸರ್ಕಾರಿ ಸೇವೆಗಳನ್ನು ಜನರ ಬಳಿಗೆ ಕೊಂಡೊಯ್ಯಲು ‘ಜನಸೇವಕ’ ಸೇವೆ ಜಾರಿಯಾಗಿದೆ. ಕೇವಲ ಫೋನ್‌ ಕರೆಯಿಂದಲೇ ಜನಸೇವಕರು ಮನೆ ಬಾಗಿಲಿಗೆ ಬಂದು 56 ಬಗೆಯ ಸೇವೆಗಳನ್ನು ನೀಡುವ ಈ ಸೇವೆ, ಸರ್ಕಾರವನ್ನು ಇನ್ನಷ್ಟುಜನಸ್ನೇಹಿಯಾಗಿಸಿದೆ. ಇದರ ಜೊತೆಗೆ 1902-ಜನಸ್ಪಂದನ ಸೇವೆಗೂ ಚಾಲನೆ ಸಿಕ್ಕಿದೆ. 50 ಇಲಾಖೆಗಳ 600 ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದುಕೊರತೆಗಳನ್ನು ಈ ಸೇವೆ ನಿವಾರಿಸಲಿದೆ.

ಆರೋಗ್ಯಕ್ಕಾಗಿ ದೂರದೃಷ್ಟಿ

ಕೋವಿಡ್‌ ಬಂದ ಬಳಿಕ ಆರೋಗ್ಯ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ಮಾಡಲಾಗಿದೆ. ಇದರ ಜೊತೆಗೆ ಮುಖ್ಯಮಂತ್ರಿಗಳು 750 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆ ಘೋಷಿಸಿರುವುದರಿಂದ ಬಲವರ್ಧನೆ ಸಾಧ್ಯವಾಗಿದೆ. ಇದರಿಂದಾಗಿ ಗ್ರಾಮೀಣ ಜನರು ನಗರ ಪ್ರದೇಶಗಳ ಕಡೆ ಬರದೆ ಸ್ಥಳೀಯ ಮಟ್ಟದಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗಲಿದೆ. ಕಳೆದ ಒಂದೂವರೆ ವರ್ಷದಿಂದ ನಾವೆಲ್ಲರೂ ಕೋವಿಡ್‌ ಬವಣೆಗೆ ಒಳಗಾಗಿದ್ದೇವೆ. ಲಸಿಕೆಯ ಮಹತ್ವವನ್ನು ಅರಿತಿರುವ ಮುಖ್ಯಮಂತ್ರಿಗಳು ಲಸಿಕಾಕರಣಕ್ಕೆ ವೇಗ ನೀಡಿದ್ದಾರೆ. ಇದರಿಂದಾಗಿ ವೇಗವಾಗಿ ಲಸಿಕೆ ನೀಡಿದ ರಾಜ್ಯಗಳಲ್ಲಿ ಕರ್ನಾಟಕವು ದೇಶದ ಐದು ಮುಂಚೂಣಿ ರಾಜ್ಯಗಳಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ವಿಶೇಷ ಲಸಿಕಾ ಮೇಳ ಹಮ್ಮಿಕೊಳ್ಳಲು ಮುಖ್ಯಮಂತ್ರಿಗಳು ಸೂಚಿಸಿದ್ದು, ಒಂದೇ ದಿನ 31 ಲಕ್ಷ ಲಸಿಕೆ ನೀಡಲು ಸಾಧ್ಯವಾಯಿತು. ಆರೋಗ್ಯ ಕ್ಷೇತ್ರದ ಈ ಚುರುಕಾದ ಕೆಲಸ ಜನರ ಜೀವ ರಕ್ಷಣೆ ಮಾಡಿದೆ. ಇತ್ತೀಚೆಗೆ ದಿ ಇಂಡಿಯಾ ಟುಡೇ ಗ್ರೂಪ್‌ನಿಂದ ಕೊಡಮಾಡುವ ‘ಹೆಲ್ತ… ಗಿರಿ’ ಪ್ರಶಸ್ತಿಯ ಗೌರವಕ್ಕೂ ರಾಜ್ಯ ಪಾತ್ರವಾಗಿದೆ. ಈ ಮೂಲಕ ಇಡೀ ದೇಶದಲ್ಲಿ ಕರ್ನಾಟಕವು ಯಶಸ್ವಿಯಾಗಿ ಕೋವಿಡ್‌ ನಿರ್ವಹಣೆ ಮಾಡಿದೆ ಎಂಬ ಹೆಗ್ಗಳಿಕೆ ದೊರೆತಿದೆ. ಬೊಮ್ಮಾಯಿ ಸರ್ಕಾರದ ವೇಗದ, ಪಾರದರ್ಶಕ ಆಡಳಿತದಿಂದಾಗಿ ಇಂದು ಕರ್ನಾಟಕ ಪ್ರಗತಿಯತ್ತ ದಾಪುಗಾಲಿಟ್ಟಿದೆ.

ಆರೋಗ್ಯ ಕ್ಷೇತ್ರದಲ್ಲಿ ರಾಜ್ಯವನ್ನು ಮುಂಚೂಣಿಯಲ್ಲಿರಿಸಲು ‘ವಿಷನ್‌ ವರದಿ’ ರೂಪಿಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಆರೋಗ್ಯ ವಲಯವನ್ನು ಎಲ್ಲಾ ಆಯಾಮಗಳಿಂದ ಅಧ್ಯಯನ ಮಾಡಿ ಅಭಿವೃದ್ಧಿ ತರುವ ದೂರದೃಷ್ಟಿಯ ಯೋಜನೆ ಇದಾಗಿದೆ.

ನಂ.1 ರಾಜ್ಯದ ಗುರಿ

ಇನ್ನು 25 ವರ್ಷಗಳ ಬಳಿಕ ಭಾರತದ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸಲಿದೆ. ಈ ವೇಳೆಗೆ ರಾಜ್ಯವನ್ನು ಜಗತ್ತಿನಲ್ಲೇ ನಂ.1 ಆಗಿಸುವ ಗುರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಈ ಗುರಿ ಈಡೇರಲು ಅಡಿಪಾಯ ಹಾಕಲು ಇದು ಸೂಕ್ತ ಸಮಯ ಹಾಗೂ ಅವಕಾಶವಾಗಿದ್ದು, ನಾಡಿನ ಸಮಗ್ರ ಶ್ರೇಯೋಭಿವೃದ್ಧಿಯ ಹಿತ ಇದರಲ್ಲಿ ಅಡಗಿದೆ. ನವಭಾರತ ನಿರ್ಮಾಣದ ಹಾದಿಯಲ್ಲಿ ನವಕರ್ನಾಟಕ ನಿರ್ಮಿಸುವ ಭರವಸೆಯ ನಾಯಕನಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಡಿನ ಜನತೆಗೆ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಇನ್ನುಳಿದಿರುವ ಒಂದೂವರೆ ವರ್ಷದಲ್ಲಿ ಇನ್ನಷ್ಟುಅಭಿವೃದ್ಧಿ ಕಾರ್ಯಕ್ರಮಗಳು, ಸುಧಾರಣೆಗಳನ್ನು ತರಲಿದ್ದಾರೆ ಎನ್ನುವ ದೃಢ ವಿಶ್ವಾಸ ಕನ್ನಡಿಗರಲ್ಲಿದೆ.

Follow Us:
Download App:
  • android
  • ios