ನಾಗಪುರ (ಜ.29): ಬಟ್ಟೆಯ ಮೇಲಿಂದಲೇ ಅಪ್ರಾಪ್ತೆಯ ಗುಪ್ತಾಂಗ ಮುಟ್ಟುವುದು ಪೋಕ್ಸೋ ಕಾಯ್ದೆಯಡಿ ಲೈಂಗಿಕ ಕಿರುಕುಳ ಎನ್ನಿಸಿಕೊಳ್ಳುವುದಿಲ್ಲ ಎಂದು ಜ.20ರಂದು ವಿವಾದಿತ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್‌ನ ನ್ಯಾ. ಪುಷ್ಪಾ ಗನೇಡಿವಾಲಾ, ಜ.15ರಂದು ಕೂಡಾ ಇದೇ ರೀತಿಯ ಮತ್ತೊಂದು ವಿವಾದಾತ್ಮಕ ತೀರ್ಪು ನೀಡಿದ್ದ ವಿಷಯ ಇದೀಗ ಬೆಳಕಿಗೆ ಬಂದಿದೆ. ಆ ಪ್ರಕರಣದಲ್ಲೂ ಲೈಂಗಿಕ ಕಿರುಕುಳ ಕೇಸಲ್ಲಿ 5 ವರ್ಷ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಅವರು ಬಿಡುಗಡೆ ಮಾಡಿ ತೀರ್ಪು ನೀಡಿದ್ದಾರೆ. ಅವರ ಈ ಎರಡೂ ತೀರ್ಪುಗಳು ಇದೀಗ ಸಾಕಷ್ಟುಚರ್ಚೆಗೆ ಗ್ರಾಸವಾಗಿದೆ.

50 ವರ್ಷದ ಲಿಬ್ನಸ್‌ ಕುಜುರ್‌ ಎಂಬಾತ 2018ರಲ್ಲಿ ಮನೆಯೊಂದಕ್ಕೆ ನುಗ್ಗಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಕೆಲಸಕ್ಕೆ ಹೊರಗೆ ಹೋಗಿದ್ದ ಬಾಲಕಿಯ ತಾಯಿ ಮನೆಗೆ ಬಂದ ವೇಳೆ, ಆರೋಪಿಯು 5 ವರ್ಷದ ಬಾಲಕಿಯ ಹೈಹಿಡಿದುಕೊಂಡಿದ್ದು ಮತ್ತು ಆತನ ಪ್ಯಾಂಟ್‌ನ ಜಿಪ್‌ ಬಿಚ್ಚಿದ್ದು ಕಂಡುಬಂದಿತ್ತು. ಈ ಕುರಿತು ಆಕೆ ನೀಡಿದ ದೂರಿನ ಅನ್ವಯ ತನಿಖೆ ನಡೆದು, ವಿಚಾರಣೆ ಬಳಿಕ ಸ್ಥಳೀಯ ನ್ಯಾಯಾಲಯ ಆತನಿಗೆ ಪೋಕ್ಸೋ ಕಾಯ್ದೇ ಸೇರಿದಂತೆ ವಿವಿಧ ಕಾಯ್ದೆಯಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

'ಹುಡುಗಿಯರು ಯಾರನ್ನೂ ಬೇಕಾದರೂ ಹತ್ಯೆ ಮಾಡಬಹುದು, ತಪ್ಪೇನಿಲ್ಲ'

ಆತ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ಈ ಕುರಿತು ಜ.15ರಂದು ತೀರ್ಪು ನೀಡಿರುವ ನ್ಯಾ.ಪುಷ್ಪಾ ಗನೇಡಿವಾಲಾ, ‘ಬಾಲಕಿಯ ಮಾನಭಂಗ ಮಾಡುವ ಉದ್ದೇಶದಿಂದ ಆರೋಪಿ ಆಕೆಯ ಮನೆಯ ಪ್ರವೇಶಿಸಿದ್ದ ಎಂಬುದನ್ನು ಬಾಲಕಿಯ ಪರ ವಕೀಲರು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿರುವಾದರೂ, ಆಕೆಯ ಮೇಲಿನ ಲೈಂಗಿಕ ಕಿರುಕುಳವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಆರೋಪಿಯ ಸಂತ್ರಸ್ತೆಯ ಕೈಯನ್ನು ಹಿಡಿಯುವುದು ಅಥವಾ ಪ್ಯಾಂಟ್‌ನ ಜಿಪ್‌ ಅನ್ನು ಬಿಚ್ಚುವುದು ಪೋಕ್ಸೋ ಕಾಯ್ದೆಯಡಿ ಲೈಂಗಿಕ ಕಿರುಕುಳ ಎಂದೆನ್ನಿಸಿಕೊಳ್ಳುವುದಿಲ್ಲ. ಹೀಗಾಗಿ ಪೋಕ್ಸೋ ಕಾಯ್ದೆಯಡಿ ನೀಡಿರುವ 5 ವರ್ಷ ಜೈಲು ಶಿಕ್ಷೆ ವಜಾ ಮಾಡಲಾಗುತ್ತಿದೆ. ಆದರೆ ಆತನ ಮೇಲೆ ಹೊರಿಸಿರುವ ಇತರೆ ಆರೋಪಗಳಿಗೆ ಈಗಾಗಲೇ ಆತ ಅನುಭವಿಸಿರುವ 5 ತಿಂಗಳ ಶಿಕ್ಷೆಯೇ ಸಾಕು. ಆತ ಇನ್ಯಾವುದೇ ಪ್ರಕರಣಗಳಿಗೆ ಬೇಕಾಗದೇ ಇದ್ದರೆ, ಆತನನ್ನು ಬಿಡುಗಡೆ ಮಾಡಬಹುದು’ ಎಂದು ತೀರ್ಪು ನೀಡಿದ್ದಾರೆ.

ಸುಪ್ರೀಂ ತಡೆ ನೀಡಿತ್ತು:  ಚರ್ಮಕ್ಕೆ ಚರ್ಮ ತಾಗದೇ ಇದ್ದರೆ ಅದು ಪೋಕ್ಸಾ ಕಾಯ್ದೆಯಡಿ ಲೈಂಗಿಕ ಕಿರುಕುಳವಾಗದು ಎಂಬ ನ್ಯಾ. ಪುಷ್ಪಾ ನೀಡಿದ್ದ ತೀರ್ಪಿಗೆ ಜ.27ರ ಬುಧವಾರವಷ್ಟೇ ಸುಪ್ರೀಂಕೋರ್ಟ್‌ ತಡೆ ನೀಡಿತ್ತು.