ಗಾಯಕ ಅಭಿಜಿತ್ ಭಟ್ಟಾಚಾರ್ಯ, ಮಹಾತ್ಮ ಗಾಂಧಿ ಭಾರತಕ್ಕಲ್ಲ, ಪಾಕಿಸ್ತಾನಕ್ಕೆ ರಾಷ್ಟ್ರಪಿತ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪೋಡ್‌ಕಾಸ್ಟ್‌ನಲ್ಲಿ ಮಾತನಾಡುತ್ತ, ಪಾಕಿಸ್ತಾನ ಭಾರತದಿಂದ ಬೇರ್ಪಡಲು ಗಾಂಧೀಜಿಯೇ ಕಾರಣ ಎಂದಿದ್ದಾರೆ.

ಮುಂಬೈ: ‘ಮಹಾತ್ಮ ಗಾಂಧಿ ಭಾರತಕ್ಕಲ್ಲ, ಅವರು ಪಾಕಿಸ್ತಾನಕ್ಕೆ ರಾಷ್ಟ್ರಪಿತ’ ಎಂದು ಬಾಲಿವುಡ್‌ ಗಾಯಕ ಅಭಿಜಿತ್ ಭಟ್ಟಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಶುಭಾಂಕರ್‌ ಮಿಶ್ರಾ ಅವರ ಜತೆ ಪೋಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಅವರು, ಭಾರತ ಈ ಮೊದಲೇ ಇದ್ದ ದೇಶ. ಪಾಕಿಸ್ತಾನವು ಭಾರತದಿಂದ ಭಾಗವಾಗಿ ಹೋಯಿತು. ಅದಕ್ಕೆ ಮಹಾತ್ಮ ಗಾಂಧೀಜಿಯವರೇ ಕಾರಣ. ಆದರೆ ದುರದೃಷ್ಟವಶಾತ್‌ ನಾವು ಗಾಂಧೀಜಿಯನ್ನು ಭಾರತದ ರಾಷ್ಟ್ರಪಿತ ಎಂದು ಕರೆಯುತ್ತಿದ್ದೇವೆ. ಆದರೆ ನಿಜವಾಗಿಯೂ ಮಹಾತ್ಮ ಗಾಂಧೀಜಿ ಅವರು ಪಾಕಿಸ್ತಾನದ ರಾಷ್ಟ್ರಪಿತ ಎಂದು ಹೇಳಿದ್ದಾರೆ. ಅಭಿಜಿತ್‌ ಅವರು ಶಾರುಖ್‌ ಖಾನ್‌ ಸೇರಿದಂತೆ ಅನೇಕ ಬಾಲಿವುಡ್‌ ಸ್ಟಾರ್‌ ನಟರ ಸಿನಿಮಾಳಿಗೆ ಹಾಡಿದ್ದಾರೆ.

ಚಳಿ ಹೆಚ್ಚಳ ಬೆನ್ನಲ್ಲೇ ದಿಲ್ಲಿ ಮಾಲಿನ್ಯ ಮತ್ತೆ ಗಂಭೀರದ ಮಟ್ಟಕ್ಕೆ

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ಚಳಿ ಮತ್ತು ಮಂಜು ಕವಿದ ವಾತಾವರಣ ಹೆಚ್ಚಿದ ಬೆನ್ನಲ್ಲೇ ವಾಯುಮಾಲಿನ್ಯ ಪ್ರಮಾಣ ಮತ್ತೆ ಗಂಭೀರಕ್ಕೆ ತಲುಪಿದೆ. ಭಾನುವಾರ ರಾಷ್ಟ್ರರಾಜಧಾನಿ ವಲಯದಲ್ಲಿ ವಾಯುಗುಣಮಟ್ಟ ಸೂಚ್ಯಂಕ (ಎಕ್ಯುಐ) ಅತಿ ಕಳಪೆ ಎಂದು ಪರಿಗಣಿಸಲಾಗುವ 406 ಅಂಕಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಚಳಿಯೂ ವಿಪರೀತವಿದ್ದು, ಇಲ್ಲಿನ ಜನ ಪರದಾಡುವಂತಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ವಾಯು ಮಾಲಿನ್ಯಕ್ಕೆ ಕಾರಣವಾಗುವ ಕಟ್ಟಡ ನಿರ್ಮಾಣದಂತಹ ಕಾರ್ಯಗಳನ್ನು ನಿರ್ಬಂಧಿಸುವ ಗ್ರಾಪ್‌-4ಅನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಅಲ್ಲದೆ, ವಾಯು ಮಾಲಿನ್ಯದಿಂದ ಇಲ್ಲಿನ ನಿವಾಸಿಗಳಿಗೆ ಸದ್ಯಕ್ಕೆ ಮುಕ್ತಿ ಇಲ್ಲ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.