ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದ ವೇಳೆ ನಡೆದಿದ್ದ ಬೋಫೋರ್ಸ್ ಗನ್‌ ಖರೀದಿಗೆ 64 ಕೋಟಿ ರು. ಲಂಚ ಸ್ವೀಕಾರದ ಪ್ರಕರಣ ಸಂಬಂಧ ಅಮೆರಿಕಕ್ಕೆ ಸಿಬಿಐ ನ್ಯಾಯಾಂಗ ಕೋರಿಕೆ ರವಾನಿಸಿದೆ.

ನವದೆಹಲಿ(ಮಾ.6): ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದ ವೇಳೆ ನಡೆದಿದ್ದ ಬೋಫೋರ್ಸ್ ಗನ್‌ ಖರೀದಿಗೆ 64 ಕೋಟಿ ರು. ಲಂಚ ಸ್ವೀಕಾರದ ಪ್ರಕರಣ ಸಂಬಂಧ ಅಮೆರಿಕಕ್ಕೆ ಸಿಬಿಐ ನ್ಯಾಯಾಂಗ ಕೋರಿಕೆ ರವಾನಿಸಿದೆ.

 ಬೋಫೋರ್ಸ್‌ ಹಗರಣದ ಕುರಿತು ತನ್ನ ಬಳಿ ಹೆಚ್ಚಿನ ಮಾಹಿತಿ ಇದೆ ಎಂದಿದ್ದ ಅಮೆರಿಕದ ಖಾಸಗಿ ಗೂಢಚರ ಮೈಕೆಲ್‌ ಹೆರ್ಷ್‌ಮನ್‌ ಅವರಿಂದ ಮಾಹಿತಿ ಸಂಗ್ರಹದ ಸಲುವಾಗಿ ಸಿಬಿಐ ಈ ನ್ಯಾಯಾಂಗ ಕೋರಿಕೆ ರವಾನಿಸಿದೆ. ಇದರೊಂದಿಗೆ ಕಾಂಗ್ರೆಸ್‌ ಪಾಲಿಗೆ ಸದಾ ಕಾಡುವ ಬೋಫೋರ್ಸ್‌ ಹಗರಣಕ್ಕೆ ಸಿಬಿಐ ಮರುಜೀವ ಕೊಡಲು ಹೊರಟಿರುವ ದಟ್ಟ ಸಾಧ್ಯತೆ ಕಂಡುಬಂದಿದೆ.

ಫೇರ್‌ಫ್ಯಾಕ್ಸ್‌ ಗ್ರೂಪ್‌ನ ಮುಖ್ಯಸ್ಥರಾದ ಹೆರ್ಷ್‌ಮನ್‌ 2017ರಲ್ಲಿ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್‌ ಪಕ್ಷ ಹಗರಣದ ತನಿಖೆಯನ್ನು ಹಳಿ ತಪ್ಪಿಸಿತ್ತು. ಸಿಬಿಐ ಕೋರಿದರೆ ಅದರ ಜೊತೆ ವಿವರ ಹಂಚಿಕೊಳ್ಳಲು ಸಿದ್ಧರಿರುವುದಾಗಿ ಅವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ತನ್ನ ತನಿಖೆ ಭಾಗವಾಗಿ ಅಮೆರಿಕದ ಅಧಿಕಾರಿಗಳಿಗೆ ಲೆಟರ್ಸ್‌ ರೊಗೇಟರಿ (ಒಂದು ದೇಶದ ನ್ಯಾಯಾಲಯ ಮತ್ತೊಂದು ದೇಶದ ನ್ಯಾಯಾಲಯಕ್ಕೆ ಕ್ರಿಮಿನಲ್ ವಿಷಯದ ತನಿಖೆಗೆ ಸಲ್ಲಿಸುವ) ವಿನಂತಿ ಕಳುಹಿಸಿದೆ. ವಿನಂತಿ ಪತ್ರ ಸಲ್ಲಿಕೆಗೆ ಜ.14ರಂದು ಹಸಿರು ನಿಶಾನೆ ಸಿಕ್ಕಿತ್ತು. ಫೆ.11ರಂದು ಸಿಬಿಐ ಕಳುಹಿಸಿದೆ.

ಇದನ್ನೂ ಓದಿ: ಎರಡೂ ಯುನಿವರ್ಸಿಟಿಯಲ್ಲಿ ಫೇಲ್‌ ಆಗಿದ್ದ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದರು, ಮಣಿಶಂಕರ್ ಅಯ್ಯರ್ ಹೇಳಿಕೆ ಅಚ್ಚರಿ!

155 ಎಂಎಂ ಫೀಲ್ಡ್ ಹೊವಿಟ್ಜರ್‌ಗಳ ಗನ್‌ ಪೂರೈಕೆಗಾಗಿ ಸ್ವೀಡಿಷ್ ಸಂಸ್ಥೆ ಬೋಫೋರ್ಸ್ ಜೊತೆಗಿನ 1,437 ಕೋಟಿ ರು.ಗಳ ಒಪ್ಪಂದದಲ್ಲಿ 64 ಕೋಟಿ ರು. ಲಂಚ ಸ್ವೀಕಾರ ಆರೋಪಗಳಿಗೆ ಸಂಬಂಧಿಸಿದ ಹಗರಣ ಇದಾಗಿದೆ. ಈ ಪ್ರಕರಣದಲ್ಲಿ ಅಂದಿನ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ 64 ಕೋಟಿ ರು. ಲಂಚ ಸ್ವೀಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ತನಿಖೆ ಬಳಿಕ ಅವರಿಗೆ ಕ್ಲೀನ್‌ಚಿಟ್‌ ನೀಡಲಾಗಿತ್ತು.