ನವದೆಹಲಿ(ಅ.18): ಎ, ಬಿ ಮತ್ತು ಎಬಿ ರಕ್ತದ ಗುಂಪಿನವರಿಗೆ ಕೊರೋನಾ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಒ ರಕ್ತದ ಗುಂಪಿನವರಿಗೆ ಕೊರೋನಾ ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನವೊಂದು ಹೇಳಿದೆ. ಇನ್ನೊಂದು ಅಧ್ಯಯನವು, ಎ ಮತ್ತು ಎಬಿ ಗುಂಪಿನವರಿಗೆ ಕೊರೋನಾದ ಸೋಂಕು ತೀವ್ರಗೊಂಡರೆ ಕೃತಕ ಉಸಿರಾಟದ ವ್ಯವಸ್ಥೆ, ಸಿಆರ್‌ಆರ್‌ಟಿ ಅಥವಾ ಸುದೀರ್ಘ ತೀವ್ರ ನಿಗಾ ಘಟಕದ (ಐಸಿಯು) ಚಿಕಿತ್ಸೆಯ ಅಗತ್ಯ ಬೀಳಬಹುದು ಎಂದು ಹೇಳಿದೆ.

ಇದೇ ಮೊದಲ ಬಾರಿ ರಕ್ತದ ಗುಂಪಿಗೂ ಕೊರೋನಾಕ್ಕೂ ಇರುವ ಸಂಬಂಧದ ಬಗ್ಗೆ ನಡೆದ ವೈದ್ಯಕೀಯ ಅಧ್ಯಯನಗಳ ವರದಿ ಹೊರಬಿದ್ದಿದೆ. ಒ ರಕ್ತದ ಗುಂಪು ಜಗತ್ತಿನ ಅತಿಹೆಚ್ಚು ಜನರ ರಕ್ತದ ಗುಂಪಾಗಿರುವ ಕಾರಣ ಈ ರಕ್ತದ ಗುಂಪಿನವರಿಗೆ ಕೊರೋನಾ ತಗಲುವ ಸಾಧ್ಯತೆ ಕಡಿಮೆ ಮತ್ತು ತಗಲಿದರೂ ಅದು ತೀವ್ರ ಸ್ವರೂಪಕ್ಕೆ ಹೋಗುವ ಸಾಧ್ಯತೆ ಕಡಿಮೆ ಎಂಬ ಸಂಗತಿ ಆಶಾಭಾವನೆ ಮೂಡಿಸುವಂತಿದೆ.

ಎ, ಬಿ ಮತ್ತು ಎಬಿ ರಕ್ತದ ಗುಂಪನಿವರಿಗೆ ಕೊರೋನಾ ತಗಲುವ ಸಾಧ್ಯತೆ ಹೆಚ್ಚು ಎಂದು ಹೇಳಿರುವ ಅಧ್ಯಯನ ಡೆನ್ಮಾರ್ಕ್ನಲ್ಲಿ ನಡೆದಿದೆ. ಈ ಅಧ್ಯಯನ ನಡೆಸಿದವರು ಇದಕ್ಕೆ ಕಾರಣವೇನು ಮತ್ತು ರೋಗಿಗಳ ಮೇಲೆ ಇದರ ಪರಿಣಾಮವೇನು ಎಂಬುದನ್ನು ಹೇಳಿಲ್ಲ. ಆ ಬಗ್ಗೆ ಇನ್ನಷ್ಟುಅಧ್ಯಯನ ನಡೆಯಬೇಕೆಂದು ಹೇಳಿದ್ದಾರೆ.

ಇನ್ನು, ಎ ಮತ್ತು ಎಬಿ ರಕ್ತದ ಗುಂಪಿನವರಿಗೆ ಕೊರೋನಾ ಸಾಧ್ಯತೆ ಹೆಚ್ಚು ಮತ್ತು ಕೊರೋನಾದಿಂದ ಅಪಾಯವೂ ಹೆಚ್ಚು ಎಂದು ಹೇಳಿರುವ ಅಧ್ಯಯನ ನಡೆದಿರುವುದು ಕೆನಡಾದಲ್ಲಿ. ಈ ಅಧ್ಯಯನ ನಡೆಸಿದವರು ಒ ಮತ್ತು ಬಿ ರಕ್ತದ ಗುಂಪಿನವರಿಗೆ ಕೊರೋನಾ ತಗಲುವ ಸಾಧ್ಯತೆ ಕಡಿಮೆ ಮತ್ತು ಕೊರೋನಾದ ಅಪಾಯವೂ ಕಡಿಮೆ ಎಂದು ಹೇಳಿದ್ದಾರೆ.

"

ಈ ಹಿಂದೆ ನಡೆದ ಕೆಲ ಅಧ್ಯಯಗಳಲ್ಲಿ ಒ ರಕ್ತದ ಗುಂಪು ಹೊಂದಿರುವವರಿಗೆ ಹೃದ್ರೋಗದ ಸಮಸ್ಯೆಗಳು ಕಡಿಮೆ ಮತ್ತು ಗ್ಯಾಸ್ಟ್ರಿಕ್‌ ಕ್ಯಾನ್ಸರ್‌ ಸಾಧ್ಯತೆಗಳೂ ಕಡಿಮೆ ಎಂದು ಹೇಳಿದ್ದವು. ಇದೀಗ ಕೊರೋನಾದ ಸಾಧ್ಯತೆ ಮತ್ತು ಕೊರೋನಾದ ಅಪಾಯವೆರಡೂ ಒ ರಕ್ತದ ಗುಂಪಿನವರಿಗೆ ಕಡಿಮೆ ಎಂದು ಹೇಳಿರುವುದು ಜಗತ್ತಿನಲ್ಲಿರುವ ಶೇ.45ರಷ್ಟುಒ ರಕ್ತದ ಗುಂಪಿನ ಜನರಿಗೆ ಹೆಚ್ಚು ನೆಮ್ಮದಿ ತರುವಂತಿದೆ.

ಅಧ್ಯಯ ನಡೆದಿದ್ದು ಎಲ್ಲೆಲ್ಲಿ?

ಡೆನ್ಮಾರ್ಕ್

ಕೆನಡಾ

ಯಾವ ಅಧ್ಯಯನ ಏನು ಹೇಳುತ್ತೆ?

ಡೆನ್ಮಾರ್ಕ್ ಅಧ್ಯಯನ

ಎ, ಬಿ ಮತ್ತು ಎಬಿ ರಕ್ತದ ಗುಂಪಿನವರಿಗೆ ಕೊರೋನಾ ಬರುವ ಸಾಧ್ಯತೆ ಹೆಚ್ಚು. ಒ ರಕ್ತದ ಗುಂಪಿನವರಿಗೆ ಕೊರೋನಾ ಸಾಧ್ಯತೆ ಕಡಿಮೆ.

ಕೆನಡಾ ಅಧ್ಯಯನ

ಎ ಮತ್ತು ಎಬಿ ರಕ್ತದ ಗುಂಪನವರಿಗೆ ಕೊರೋನಾ ಬರುವ ಸಾಧ್ಯತೆ ಹೆಚ್ಚು ಮತ್ತು ಕೊರೋನಾ ಬಂದರೆ ಅಪಾಯವೂ ಹೆಚ್ಚು. ಒ ಮತ್ತು ಬಿ ರಕ್ತದ ಗುಂಪಿನವರಿಗೆ ಕೊರೋನಾ ಸಾಧ್ಯತೆ ಕಡಿಮೆ ಮತ್ತು ಕೊರೋನಾದ ಅಪಾಯವೂ ಕಡಿಮೆ.