ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಲು ಮರೆಯದಿರಿ!
ಕೊರೋನಾ ಹಾವಳಿ ಮಧ್ಯೆ ದೇಶದಲ್ಲಿ ಲಸಿಕೆ ಅಭಿಯಾನ| ಮೇ 1ರಿಂದ 18ರಿಂದ 45ವರ್ಷ ವಯೋಮಿತಿಯ ಎಲ್ಲರಿಗೂ ಲಸಿಕೆ| ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಲು ಮರೆಯದಿರಿ| ಆಕ್ಸಿಜನ್, ಔಷಧ ಕೊರತೆ ಎದುರಿಸುತ್ತಿರುವ ದೇಶಕ್ಕೆ ರಕ್ತದ ಕೊರತೆ ಎದುರಾಗದಿರಲಿ| ರಕ್ತದಾನ ಮಾಡಿ, ಪ್ರಾಣ ಉಳಿಸಲು ಮುಂದಾಗೋಣ
ಬೆಂಗಳೂರು(ಏ.22): ದೇಶಾದ್ಯಂತ ಕೊರೋನಾ ಹಾವಳಿ ಮಿತಿ ಮೀರಿದೆ. ನಿಯಂತ್ರಣ ಮೀರಿರುವ ಈ ಮಹಾಮಾರಿಯಿ ಕಪಿಮುಷ್ಠಿಯಿಂದ ಬಿಡಿಸಿಕೊಳ್ಳಲು ಸರ್ಕಾರಗಳು ಕಠಿಣ ಕ್ರಮ ಕೈಗೊಂಡಿವೆ. ಹೀಗಿದ್ದರೂ ಕೊರೋನಾ ಪ್ರಕರಣಗಳು ಮಾತ್ರ ಇಳಿಕೆಯಾಗುತ್ತಿಲ್ಲ. ಇಷ್ಟೇ ಅಲ್ಲದೇ ಎರಡನೇ ಕೊರೋನಾ ಅಲೆ ಎಂಟ್ರಿ ಕೊಟ್ಟಾಗಿನಿಂದ ಔಷಧ ಹಾಗೂ ಆಮ್ಲಜನಕ ಕೊರತೆಯುಂಟಾಗಿದ್ದು, ಸರ್ಕಾರಕ್ಕೆ ಮತ್ತೊಂದು ತಲೆ ನೋವಾಗಿದೆ. ಈ ಸಾವು, ನೋವಿನ ನಡುವೆಯೇ ಕೊರೋನಾ ನಿಯಂತ್ರಿಸಲು ಲಸಿಕೆ ಅಭಿಯಾನ ಮುಂದುವರೆದಿದೆ. ಈವರೆಗೆ ನಲ್ವತ್ತೈದು ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗಷ್ಟೇ ಸೀಮಿತವಾಗಿದ್ದ ಲಸಿಕೆ, ಮೇ 1 ರಿಂದ ಹದಿನೆಂಟು ವರ್ಷದಿಂದ 45ರ ವಯೋಮಾನದ ಮೇಲಿನ ಎಲ್ಲರಿಗೂ ನೀಡಲು ಸರ್ಕಾರ ಆದೇಶಿಸಿದೆ.
"
ಕೊರೋನಾ ತಾಂಡವ: ಯಾವ ಮಾಸ್ಕ್ ಎಷ್ಟು ಸೇಫ್? ಇಲ್ಲಿದೆ ವಿವರ
ಆದರೀಗ ಈ ಆದೇಶ ಹೊರಬಿದ್ದ ಬೆನ್ನಲ್ಲೇ ರಕ್ತದಾನ ಮಾಡುವ ಬಗ್ಗೆ ಮಹತ್ವದ ಸಂದೇಶವೊಂದು ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಸೌಂಡ್ ಮಾಡುತ್ತಿದೆ. ಹೌದು ಲಸಿಕೆ ಪಡೆದ ಸುಮಾರು ಎರಡು ತಿಂಗಳವರೆಗೆ ಯಾರೂ ರಕ್ತದಾನ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ರಾಷ್ಟ್ರೀಯ ರಕ್ತ ವರ್ಗಾವಣೆ ಮಂಡಳಿ(NBTC) ಇತ್ತೀಚೆಗಷ್ಟೇ ಈ ಸಂಬಂಧ ಮಾರ್ಗಸೂಚಿ ಹೊರಡಿಸಿದ್ದು, ಇದರಲ್ಲಿ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದ ದಿನದಿಂದ ಎರಡನೇ ಡೋಸ್ ಪಡೆದ ಇಪ್ಪತ್ತೆಂಟು ದಿನಗಳವರೆಗೆ ಲಸಿಕೆ ಪಡೆದವರು ರಕ್ತದಾನ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ರಕ್ತದಾನ ಯಾಕೆ ಸಾಧ್ಯವಿಲ್ಲ?
ಇನ್ನು ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯುವ ಮಧ್ಯೆ ಸುಮಾರು 28 ದಿನಗಳ ಅಂತರವಿರುತ್ತದೆ. ಹೀಗಿರುವಾಗ ರಕ್ತದಾನ ಮಾಡಲು ಸಾಧ್ಯವಿಲ್ಲದ ಅವಧಿ ಕನಿಷ್ಟ 57 ದಿನಗಳಾಗುತ್ತದೆ. ಲಸಿಕೆ ಪಡೆದ ಬಳಿಕ ಜ್ವರ, ಮೈ-ಕೈ ನೋವು ಸೇರಿ ಇತರ ಕೆಲ ಅಡ್ಡ ಪರಿಣಾಮಗಳು ಕಂಡು ಬರುತ್ತವೆ. ಈ ನಿಟ್ಟಿನಲ್ಲಿ ಲಸಿಕೆ ಪಡೆದ 28 ದಿನಗಳವವರೆಗೆ ರಕ್ತದಾನ ಮಾಡುವುದು ಸೂಕ್ತವಲ್ಲ ಎಂದು ಮಂಡಳಿ ತಿಳಿಸಿದೆ.
ಏಪ್ರಿಲ್ 1 ರಿಂದ 18 ವರ್ಷ ಮೇಲಿನವರಿಗೆ ಲಸಿಕೆ
ಇನ್ನು ಏಪ್ರಿಲ್ 1 ರಿಂದ 45ರ್ಷಕ್ಕಿಂತ ಮೇಲಿನವರಿಗೆ ಸರ್ಕಾರ ಲಸಿಕೆ ಪಡೆಯಲು ಅನುಮತಿ ನೀಡಿದೆ. ಕೊರೋನಾ ಎರಡನೇ ಅಲೆ ದಾಳಿ ಇಟ್ಟ ಸಂದರ್ಭದಲ್ಲಿ ಮಹಾಮಾರಿ ತಡೆಯುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರ ಸೂಕ್ತವಾಗಿದೆ ಎಂದು ವೈದ್ಯರು ಇದನ್ನು ಸಮರ್ಥಿಸಿದ್ದಾರೆ. ಹೀಗಿದ್ದರೂ ಬ್ಲಡ್ ಬ್ಯಾಂಕ್ ಅಧಿಕಾರಿಗಳು ಮಾತ್ರ ರಕ್ತದ ಕೊರತೆ ಎದುರಾದ ಪರಿಣಾಮ ಕೊಂಚ ಚಿಂತೆಗೋಡಾಗಿದ್ದಾರೆ.
ಕೊಪ್ಪಳ ಬ್ಲಡ್ ಬ್ಯಾಂಕ್ ಈಗ ಬೆಸ್ವ್: ಪ್ರಶಸ್ತಿಗೆ ಭಾಜನ
ಇಂತಹ ಪರಿಸ್ಥಿತಿ ನಡುವೆಯೇ ಮೇ 1ರಿಂದ ಮತ್ತೆ ಹದಿನೆಂಟು ವರ್ಷಕ್ಕಿಂತ ಮೇಲಿನವರಿಗೆ ಲಸಿಕೆ ಅಭಿಯಾನ ಆರಂಭವಾಗಲಿದೆ. ಹೀಗಿರುವಾಗ ರಕ್ತದಾನ ಮಾಡದಿದ್ದಲ್ಲಿ ಮುಂದಿನ ಎರಡು ಮೂರು ತಿಂಗಳವರೆಗೆ ದೇಶದಲ್ಲಿ ರಕ್ತದ ಕೊರತೆ ಎದುರಾಗುವ ಲಕ್ಷಣಗಳು ಗಾಢವಾಗಿದೆ. ಈಗಾಗಲೇ ಆಕ್ಸಿಜನ್, ಔಷಧ ಇಲ್ಲದೇ ಜನರು ಪ್ರಾಣ ಬಿಡುತ್ತಿರುವ ಸಂದರ್ಭದಲ್ಲಿ ರಕ್ತದ ಕೊರತೆ ಎದುರಾದರೆ ಗಾಯದ ಮೇಲೆ ಬರೆ ಎಳೆದಂತಾಗಲಿದೆ. ಹೀಗಾಗಿ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಲು ಮರೆಯದಿರಿ.
ಒಂದು ಹೆಜ್ಜೆಯಿಂದ ಉಳಿಯಲಿದೆ ಹಲವರ ಪ್ರಾಣ
ಕೊರೋನಾ ಪೀಡಿತರು, ಅಪಘಾತಕ್ಕೀಡಾದವರು, ಬ್ಲಡ್ ಕ್ಯಾನ್ಸರ್ ಸೇರಿ ಇತರ ಕಾಯಿಲೆಗಳಿಂದ ಬಳಲುತ್ತಿರುವ ಅನೇಕರಿಗೆ ರಕ್ತದ ಅವಶ್ಯಕತೆ ಎದುರಾಗುತ್ತದೆ. ಹೀಗಿರುವಾಗ ರಕ್ತದಾನ ಮಾಡುವುದರಿಂದ, ನಮ್ಮ ಒಂದು ನಡೆಯಿಂದ ದೇಶದಲ್ಲಿ ರಕ್ತದ ಕೊರತೆ ನಿವಾರಣೆಯಾಗಲಿದೆ, ಇದರಿಂದ ಅನೇಕರ ಪ್ರಾಣ ಉಳಿಯಲಿದೆ. ಹೀಗಾಗಿ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಲು ಮರೆಯದಿರೋಣ.