10 ನಿಮಿಷದಲ್ಲಿ ತಲುಪಲಿದೆ ಆಂಬುಲೆನ್ಸ್: ಜೀವ ಉಳಿಸುವ ಹೊಸ ಸೇವೆ ಆರಂಭಿಸಿದ ಬ್ಲಿಂಕಿಟ್
ಬ್ಲಿಂಕಿಟ್ 10 ನಿಮಿಷಗಳಲ್ಲಿ ಆಂಬುಲೆನ್ಸ್ ಸೇವೆ ಒದಗಿಸುವ ಹೊಸ ಸೇವೆಯನ್ನು ಗುರುಗ್ರಾಮ್‌ನಲ್ಲಿ ಪ್ರಾರಂಭಿಸಿದೆ. ಈ ಸೇವೆಯು ಜೀವ ಉಳಿಸುವ ಸಲಕರಣೆಗಳನ್ನು ಹೊಂದಿದ್ದು, ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ.
ತರಕಾರಿ, ದಿನಸಿ, ಹಣ್ಣು ಹಂಪಲು ಮುಂತಾದವುಗಳನ್ನು ಕೆಲ ನಿಮಿಷಗಳಲ್ಲಿ ಗ್ರಾಹಕರಿಗೆ ಪೂರೈಕೆ ಮಾಡಿ ಫೇಮಸ್ ಆಗಿರುವ ಆನ್‌ಲೈನ್ ಡೆಲಿವರಿ ಸಂಸ್ಥೆ ಬ್ಲಿಂಕಿಟ್ ಈಗ ಹೊಸ ಸೇವೆಯೊಂದನ್ನು ಶುರು ಮಾಡಿದೆ. ಇದರ ಭಾಗವಾಗಿ ಯಾರಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಬ್ಲಿಂಕಿಟ್ ಕೇವಲ 10 ನಿಮಿಷದಲ್ಲಿ ಅವರಿರುವ ಪ್ರದೇಶಕ್ಕೆ ಆಂಬುಲೆನ್ಸ್ ಕಳುಹಿಸಲಿದೆ. ಗುರುಗ್ರಾಮ್‌ನಲ್ಲಿ ಹೊಸದಾಗಿ ಈ ಯೋಜನೆಯಲ್ಲಿ ಬ್ಲಿಂಕಿಟ್ ಶುರು ಮಾಡಿದ್ದು, ಬ್ಲಿಂಕಿಟ್ ಆಪ್‌ನ ಸಿಇಒ ಅಲ್ಬಿಂದರ್ ಧಿನ್ಸ ಅವರು ಇಂದು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಐದು ಆಂಬುಲೆನ್ಸ್‌ಗಳೊಂದಿಗೆ ಇದು ಮೊದಲಿಗೆ ಗುರುಗ್ರಾಮದಲ್ಲಿ ಕಾರ್ಯ ಅರಂಭಿಸಲಿದೆ.
10 ನಿಮಿಷಗಳಲ್ಲಿ ಆಂಬ್ಯುಲೆನ್ಸ್. ನಮ್ಮ ನಗರಗಳಲ್ಲಿ ತ್ವರಿತ ಮತ್ತು ವಿಶ್ವಾಸಾರ್ಹ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸುವ ಸಮಸ್ಯೆಯನ್ನು ಪರಿಹರಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ನಾವು ನಮ್ಮ ಮೊದಲ ಹೆಜ್ಜೆ ಇಡುತ್ತಿದ್ದೇವೆ. ಮೊದಲ ಐದು ಆಂಬ್ಯುಲೆನ್ಸ್‌ಗಳು ಇಂದಿನಿಂದ ಗುರುಗ್ರಾಮ್‌ನಲ್ಲಿ ರಸ್ತೆಗಿಳಿಯಲಿವೆ. ನಾವು ಹೆಚ್ಚಿನ ಪ್ರದೇಶಗಳಿಗೆ ಸೇವೆಯನ್ನು ವಿಸ್ತರಿಸಿದಂತೆ, @letsblinkit ಅಪ್ಲಿಕೇಶನ್ ಮೂಲಕ ಬೇಸಿಕ್ ಲೈಫ್ ಸಪೋರ್ಟ್ (BLS) ಆಂಬ್ಯುಲೆನ್ಸ್ ಅನ್ನು ಬುಕ್ ಮಾಡುವ ಆಯ್ಕೆಯನ್ನು ನೀವು ನೋಡಲು ಪ್ರಾರಂಭಿಸುತ್ತೀರಿ ಎಂದು ಸಿಇಒ ಧಿನ್ಸ ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಕೇವಲ ಲಾಭದ ಗುರಿಯೊಂದಿಗೆ ಈ ಸೌಲಭ್ಯವನ್ನು ಪ್ರಾರಂಭಿಸಲಾಗಿಲ್ಲ ಎಂದು ಒತ್ತಿ ಹೇಳಿದ ಅವರು ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಪ್ರಮುಖ ನಗರಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಗುರಿ ಇದೆ ಎಂದು ಹೇಳಿದ್ದಾರೆ. ನಮ್ಮ ಆಂಬ್ಯುಲೆನ್ಸ್‌ಗಳು ಆಮ್ಲಜನಕ ಸಿಲಿಂಡರ್‌ಗಳು, ಎಇಡಿ (ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್), ಸ್ಟ್ರೆಚರ್, ಮಾನಿಟರ್, ಸಕ್ಷನ್ ಮೆಷಿನ್ ಮತ್ತು ಅಗತ್ಯ ತುರ್ತು ಔಷಧಿಗಳು ಮತ್ತು ಚುಚ್ಚುಮದ್ದು ಸೇರಿದಂತೆ ಅಗತ್ಯ ಜೀವ ಉಳಿಸುವ ಸಾಧನಗಳನ್ನು ಹೊಂದಿವೆ ಎಂದು ಅವರು ತಿಳಿಸಿದ್ದಾರೆ. ಹಾಗೆಯೇ ಪ್ರತಿ ಆಂಬ್ಯುಲೆನ್ಸ್‌ನಲ್ಲಿ ಒಬ್ಬ ವೈದ್ಯಾಧಿಕಾರಿ (paramedic), ಸಹಾಯಕ ಮತ್ತು ತರಬೇತಿ ಪಡೆದ ಚಾಲಕ ಇರುತ್ತಾರೆ ಎಂದು ಅವರು ಹೇಳಿದರು.
ಇಲ್ಲಿ ಲಾಭ ಗಳಿಸುವುದೇ ಗುರಿಯಲ್ಲ. ನಾವು ಗ್ರಾಹಕರಿಗೆ ಕೈಗೆಟುಕುವ ವೆಚ್ಚದಲ್ಲಿ ಈ ಸೇವೆಯನ್ನು ನೀಡುತ್ತೇವೆ ಮತ್ತು ದೀರ್ಘಾವಧಿಯಲ್ಲಿ ಈ ನಿರ್ಣಾಯಕ ಸಮಸ್ಯೆಯನ್ನು ನಿಜವಾಗಿಯೂ ಪರಿಹರಿಸಲು ಹೂಡಿಕೆ ಮಾಡುತ್ತೇವೆ. ನಾವು ಈ ಸೇವೆಯನ್ನು ಎಚ್ಚರಿಕೆಯಿಂದ ಹೆಚ್ಚಿಸುತ್ತಿದ್ದೇವೆ, ಏಕೆಂದರೆ ಇದು ನಮಗೆ ಮುಖ್ಯ ಮತ್ತು ಹೊಸದಾಗಿದೆ ಮುಂದಿನ ಎರಡು ವರ್ಷಗಳಲ್ಲಿ ಎಲ್ಲಾ ಪ್ರಮುಖ ನಗರಗಳಿಗೆ ಈ ಸೇವೆ ವಿಸ್ತರಿಸುವುದು ನಮ್ಮ ಗುರಿಯಾಗಿದೆ. ನಾವು ನಮ್ಮ ಕೈಲಾದಷ್ಟು ಮಾಡೋಣ ಮತ್ತು ಯಾವಾಗಲೂ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡೋಣ. ನೀವು ಯಾವಾಗ ಜೀವವನ್ನು ಉಳಿಸುತ್ತೀರಿ ಎಂದು ನಿಮಗೆ ತಿಳಿದಿಲ್ಲ, ಎಂದು ಸಿಒ ಅಲ್ಬಿಂದರ್ ಧಿನ್ಸ ತಮ್ಮ ಟ್ವಿಟ್ಟರ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.