ಚೆನ್ನೈ(ಸೆ.19): ಕಳೆದೆರಡು ದಿನಗ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ 70ನೇ ಹುಟ್ಟುಹಬ್ಬ ಸಂಭ್ರಮ. ಜಗತ್ತಿನೆಲ್ಲೆಡೆಯಿಂದ ಪಿಎಂ ಮೋದಿಗೆ ಶುಭಾಶಯದ ಮಹಾಪೂರವೇ ಹರಿದು ಬಂದಿದೆಯಾದರೂ, ಕೊರೋನಾತಂಕದ ನಡುವೆ ಈ ಮಹಾಮಾರಿ ನಿಗ್ರಹಿಸಲು ಜಾರಿಗೊಳಿಸಲಾದ ಕ್ರಮವನ್ನು ಪಾಲಿಸಿ ಇದೇ ನನ್ನ ಹುಟ್ಟುಹಬ್ಬಕ್ಕೆ ಕೊಡುಗೆ ಎಂದು ಮೋದಿ ಹೇಳಿದ್ದಾರೆ. ಹೀಗಿದ್ದರೂ ದೇಶದ ವಿವಿದೆಡೆ ಅಭಿಮಾನಿ ಹಾಗೂ ಬಿಜೆಪಿ ಕಾರ್ಯಕರ್ತರು ಅವರ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.

ಆದರೀಗ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಬಿಜೆಪಿ ಕಾರ್ಯಕರ್ತರು ಪಿಎಂ ಮೋದಿ ಹುಟ್ಟುಹಬ್ಬ ಸಂಭ್ರಮವನ್ನಾಚರಿಸಿದ್ದು ಈ ವೇಳೆ ಗ್ಯಾಸ್ ಬಲೂನ್‌ಗಳನ್ನು ತಂದಿದ್ದರು. ಆದರೆ ದುರಾದೃಷ್ಟವಶಾತ್ ಈ ಗ್ಯಾಸ್ ಬಲೂನ್ ಸ್ಪೋಟಗೊಂಡು 3 ಕಾರ್ಯಕರ್ತರು ಗಾಯಗೊಂಡಿದ್ದಾರೆ. 

ಹೌದು ಸೆಪ್ಟೆಂಬರ್ 17ರಂದು ನಡೆದ ಈ ದುರಂತದ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ. ಪಟಾಕಿಗೆ ಹಚ್ಚಲಾದ ಬೆಂಕಿಯಿಂದಾಗಿ ಗ್ಯಾಸ್ ಬಲೂನ್ ಸಿಡಿದಿದೆ. ಈ ಸ್ಫೋಟದಿಂದ ಅಲ್ಲಿ ನೆರೆದಿದ್ದವರಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ ಈ ಸಂಭ್ರಮಾಚರಣೆಗೆ ಅನುಮತಿ ಪಡೆದಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಮೋದಿ ಹುಟ್ಟುಹಬ್ಬ ಪ್ರಯುಕ್ತ ಬಿಜೆಪಿಯ ಕೃಷಿ ತಂಡ ಎರಡು ಸಾವಿರ ಬಲೂನ್‌ಗಳನ್ನು ತಂದಿತ್ತೆನ್ನಲಾಗಿದೆ.