-ಪ್ರಕರಣ ಸಿಬಿಐಗೆ ವರ್ಗಾಯಿಸಲು ಶಾ ಆಗ್ರಹ-ಟಿಎಂಸಿಯೇ ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡುತ್ತಿದೆ: ಶಾ ಕಿಡಿ-ವಿವಾದ ಸೃಷ್ಟಿಗೆ ಬಿಜೆಪಿಯೇ ಹತ್ಯೆ ನಡೆಸಿದೆ: ಟಿಎಂಸಿ ಶಂಕೆ

ಕೋಲ್ಕತಾ(ಜ.07): ಕೇಂದ್ರ ಗೃಹ ಸಚಿವ ಅಮಿತ್‌ ಶಾ ಎರಡು ದಿನಗಳ ಬಂಗಾಳದ ಭೇಟಿಯ ಸಂದರ್ಭದಲ್ಲೇ ಕೋಲ್ಕತಾದ ಕಾಶಿಪುರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಅರ್ಜುನ್‌ ಚೌರಸಿಯಾ ನಿಗೂಢವಾಗಿ ಸಾವನ್ನಪ್ಪಿದ್ದು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸಾವಿನ ಪ್ರಕರಣವನ್ನು ತನಿಖೆ ನಡೆಸಲು ಸಿಬಿಐಗೆ ವರ್ಗಾಯಿಸಬೇಕು ಎಂದು ಅಮಿತ್‌ ಶಾ ಆಗ್ರಹಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಾ, ಶುಕ್ರವಾರ ಮೃತ ಚೌರಸಿಯಾ ಮನೆಗೆ ಭೇಟಿ ನೀಡಿದ್ದು, ‘ಬಂಗಾಳದಲ್ಲಿ ಹಿಂಸಾಚಾರ ಸಂಸ್ಕೃತಿ ಹಾಗೂ ಭಯದ ಮನೋವಿಕಾರ ಹೆಚ್ಚಾಗಿದೆ. ಟಿಎಂಸಿ ಸರ್ಕಾರ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆಸುತ್ತಿದೆ’ ಎಂದು ಕಿಡಿಕಾರಿದ್ದಾರೆ.

‘ಗುರುವಾರ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಮೂರನೇ ಬಾರಿ ಅಧಿಕಾರಾವಧಿಯ ಮೊದಲ ವರ್ಷದ ಸಂಭ್ರಮವನ್ನು ಆಚರಿಸಿಕೊಂಡ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತನ ನಿಗೂಢ ಸಾವು ವರದಿಯಾಗಿದೆ. ಗೃಹ ಸಚಿವಾಲಯವು ಈ ಸಾವನ್ನು ಗಂಭೀರವಾಗಿ ಪರಿಗಣಿಸಲಿದೆ’ ಎಂದು ಶಾ ಭರವಸೆ ನೀಡಿದ್ದಾರೆ. ಈ ಭೀಕರ ಅಪರಾಧ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ನಡುವೆ ಟಿಎಂಸಿ ಶಾಸಕ ಆಟಿನ್‌ ಘೋಷ್‌ ಕೂಡಾ ಮೃತರ ಮನೆಗೆ ಭೇಟಿ ಕೊಟ್ಟಿದ್ದು, ‘ಚೌರಸಿಯಾ ಟಿಎಂಸಿ ಪರವಾಗಿ ನಗರಪಾಲಿಕೆ ಚುನಾವಣೆಯಲ್ಲಿ ಪ್ರಚಾರ ನಡೆಸಿ ಬಿಜೆಪಿಗರ ಕೋಪಕ್ಕೆ ಕಾರಣವಾಗಿದ್ದ ಎಂದು ಹೇಳಿಕೆ ನೀಡಿದ್ದಾರೆ. ಶಾ ಭೇಟಿಯ ಸಮಯದಲ್ಲಿ ರಾಜ್ಯದಲ್ಲಿ ವಿವಾದ ಸೃಷ್ಟಿಸಲು ಸ್ಥಳೀಯ ಬಿಜೆಪಿ ನಾಯಕರೇ ಹತ್ಯೆಯಲ್ಲಿ ಶಾಮೀಲಾಗಿರಬಹುದು ಎಂದು ಶಂಕಿಸಿದ್ದಾರೆ.