* 4 ವರ್ಷಗಳ ಬಳಿಕ ಅಗ್ನಿವೀರರು ಏನು ಮಾಡುತ್ತಾರೆ?* ಅಗ್ನಿಪಥ ಹೆಸರಲ್ಲಿ ಶಸ್ತ್ರಸಜ್ಜಿತ ಪಡೆ ಸೃಷ್ಟಿಗೆ ಬಿಜೆಪಿ ಯತ್ನ: ಮಮತಾ* ಅವರಿಗೆಲ್ಲಾ ಶಸ್ತ್ರಾಸ್ತ್ರ ನೀಡುವ ಉದ್ದೇಶ ಬಿಜೆಪಿಯದ್ದು
ಕೋಲ್ಕತಾ(ಜೂ.21): ತನ್ನದೇ ಆದ ಶಸ್ತ್ರಸಜ್ಜಿತ ಪಡೆಯೊಂದನ್ನು ಸೃಷ್ಟಿಸುವ ಸಲುವಾಗಿ ಅಗ್ನಿಪಥ ಎಂಬ ಯೋಜನೆಯನ್ನು ಬಿಜೆಪಿ ಜಾರಿಗೊಳಿಸಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.
ಅಗ್ನಿಪಥ ಯೋಜನೆಯಡಿ 4 ವರ್ಷ ಸೇವಾವಧಿ ಮುಗಿಸಿದ ಬಳಿಕ ಅಗ್ನಿವೀರರು ಏನು ಮಾಡುತ್ತಾರೆ? ಅವರಿಗೆಲ್ಲಾ ಶಸ್ತ್ರಾಸ್ತ್ರ ನೀಡುವ ಉದ್ದೇಶವನ್ನು ಬಿಜೆಪಿ ಹೊಂದಿದೆ ಎಂದು ಪಶ್ಚಿಮ ಬಂಗಾಳ ವಿಧಾನಸಭೆ ಅಧಿವೇಶನದಲ್ಲಿ ದೂರಿದರು.
ಬಿಜೆಪಿ ಕಚೇರಿ ಕಾವಲು ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುವಾಗ ಅಗ್ನಿವೀರರಿಗೆ ಆದ್ಯತೆ ನೀಡಲಾಗುವುದು ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗೀಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಬಿಜೆಪಿ ತನ್ನ ಕಚೇರಿಗಳಲ್ಲಿ ಅಗ್ನಿವೀರರನ್ನು ವಾಚ್‌ಮನ್ ಆಗಿ ನೇಮಕ ಮಾಡಿಕೊಳ್ಳುವ ಯೋಜನೆ ಹೊಂದಿದೆಯೇ ಎಂದು ಕಿಡಿಕಾರಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದಡಿ ಸೇನೆಯನ್ನು ತರುವ ಉದ್ದೇಶದಿಂದ ಅಗ್ನಿಪಥ ಯೋಜನೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಕೂಡ ಆರೋಪ ಮಾಡಿದ್ದರು.
ಅಗ್ನಿವೀರರಿಗೆ ಮಾತ್ರ ಸೇನೆಯಲ್ಲಿ ಅವಕಾಶ
‘ಅಗ್ನಿಪಥ’ ಯೋಜನೆಯಡಿ ನಾಲ್ಕು ವರ್ಷಗಳಷ್ಟುಅಲ್ಪ ಅವಧಿಗೆ ಯುವಕರನ್ನು ಸೇನಾಪಡೆಗಳಿಗೆ ನೇಮಕ ಮಾಡಿಕೊಳ್ಳುವ ಸಂಬಂಧ ಭೂಸೇನೆ ಮಾರ್ಗಸೂಚಿ ಹಾಗೂ ನಿಯಮಾವಳಿಗಳನ್ನು ಒಳಗೊಂಡ ಅಧಿಸೂಚನೆ ಪ್ರಕಟಿಸಿದೆ. ಇದರೊಂದಿಗೆ ಭಾರತೀಯ ಸೇನೆಯ ಇತಿಹಾಸದಲ್ಲೇ ಅತ್ಯಂತ ಮಹತ್ವದ ಬದಲಾವಣೆ ತರುವ ಕೇಂದ್ರ ಸರ್ಕಾರದ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದಂತೆ ಆಗಿದೆ.
ಯೋಜನೆ ವಿರುದ್ಧ ವಿಪಕ್ಷಗಳ ಆಕ್ರೋಶ, ಯುವಕರ ಪ್ರತಿಭಟನೆ ಹೊರತಾಗಿಯೂ, ಇದೊಂದು ಕ್ರಾಂತಿಕಾರಕ ಬದಲಾವಣೆ ಎಂದು ಯೋಜನೆಯನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಈ ಅಧಿಸೂಚನೆ ಪ್ರಕಟಿಸಿದೆ. ಇದರೊಂದಿಗೆ 17 ವರ್ಷ ಆರು ತಿಂಗಳಿನಿಂದ 21ರ ವಯೋಮಾನದ ಯುವಕ/ಯುವತಿಯರ ಸೇನೆ ಸೇರುವ ಕನಸು ಸನ್ನಿಹಿತವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ನೇಮಕಾತಿ ನಡೆಸಿರದ ಹಿನ್ನೆಲೆಯಲ್ಲಿ ಈ ವರ್ಷಕ್ಕೆ ಮಾತ್ರ ಗರಿಷ್ಠ ವಯೋಮಿತಿಯನ್ನು 23ಕ್ಕೆ ವಿಸ್ತರಿಸಲಾಗಿದೆ.
ಅಗ್ನಿವೀರರಿಗೆ ಮಾತ್ರ ಅವಕಾಶ:
ಅಗ್ನಿಪಥ ಯೋಜನೆ ಜಾರಿಯೊಂದಿಗೆ, ಭೂಸೇನೆಯ ಸಾಮಾನ್ಯ ನೇಮಕಾತಿಯಲ್ಲಿ ಅಗ್ನಿವೀರರಿಗಷ್ಟೇ ಅವಕಾಶ ಇರಲಿದೆ. ಅಂದರೆ, ಅಗ್ನಿವೀರರಾಗಿ ಸೇವೆ ಸಲ್ಲಿಸದಂತಹ ವ್ಯಕ್ತಿಗಳು ಸೇನೆಯಲ್ಲಿ ಪ್ರವೇಶ ಪಡೆಯುವುದು ಇನ್ನು ಸಾಧ್ಯವಿಲ್ಲ. ಆದರೆ ಇದು ವೈದ್ಯಕೀಯ ವಿಭಾಗದಂತಹ ತಾಂತ್ರಿಕ ವಿಭಾಗಗಳಿಗೆ ಅನ್ವಯವಾಗುವುದಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ.
ನಾಲ್ಕು ವರ್ಷಗಳ ಸೇವಾವಧಿ ಸಲ್ಲಿಸಿದವರ ಪೈಕಿ ಶೇ.25 ಮಂದಿಯನ್ನು ಸೇನೆಗೆ ಸಾಮಾನ್ಯ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆದರೆ ಆ ರೀತಿ ಆಯ್ಕೆಯಾದವರಿಗೆ ದೊರೆಯುವ ಸೇವಾ ನಿಧಿಯಲ್ಲಿ ಸರ್ಕಾರ ಪಾಲು ಇರುವುದಿಲ್ಲ. ಅಂದರೆ ಶೇ.75ರಷ್ಟುಅಭ್ಯರ್ಥಿಗಳಿಗೆ 10.04 ಲಕ್ಷ ರು. (ಬಡ್ಡಿ ಹೊರತುಪಡಿಸಿ) ಪ್ಯಾಕೇಜ್ ಸಿಕ್ಕರೆ, ಸೇನೆಗೆ ಆಯ್ಕೆಯಾದವರಿಗೆ ಸೇವಾವಧಿಯಲ್ಲಿ ತಮ್ಮ ವೇತನದಿಂದ ಕಡಿತಗೊಂಡ ಮೊತ್ತವಾದ 5.02 ಲಕ್ಷ ರು. (ಬಡ್ಡಿ ಹೊರತುಪಡಿಸಿ) ಮಾತ್ರ ಸಿಗಲಿದೆ.
