Asianet Suvarna News Asianet Suvarna News

UP Elections: ಅಧಿಕಾರಕ್ಕೇರಿದ್ರೆ ಎಲ್ಲವೂ ಮರೆಯುತ್ತಾರೆ: ಬಿಜೆಪಿ, ಕಾಂಗ್ರೆಸ್‌, SP ಎಲ್ಲರಿಗೂ ಮಾಯಾ ಕ್ಲಾಸ್‌!

* ಉತ್ತರ ಪ್ರದೇಶ ಚುನಾವಣೆಗೆ ಪಕ್ಷಗಳ ಸಿದ್ಧತೆ

* ಪರಸ್ಪರ ವಾಗ್ದಾಳಿ ಮುಂದುವರೆಸಿದ ರಾಜಕೀಯ ನಾಯಕರು

* ಅಧಿಕಾರಕ್ಕೇರಿದ್ರೆ ಎಲ್ಲವೂ ಮರೆಯುತ್ತಾರೆ: ಬಿಜೆಪಿ, ಕಾಂಗ್ರೆಸ್‌, SP ಎಲ್ಲರಿಗೂ ಮಾಯಾವತಿ ಕ್ಲಾಸ್‌

BJP SP Congress mislead UP people with their poll promises Mayawati pod
Author
Bangalore, First Published Dec 3, 2021, 3:15 PM IST

ಲಕ್ನೋ(ಡಿ.03): ಉತ್ತರ ಪ್ರದೇಶದಲ್ಲಿ (Uttar Pradesh), ಎಲ್ಲಾ ರಾಜಕೀಯ ಪಕ್ಷಗಳು ವಿಧಾನಸಭಾ ಚುನಾವಣೆಯ ತಯಾರಿಯಲ್ಲಿ ನಿರತವಾಗಿವೆ (UP Assembly Elections 2022). ಬಿಜೆಪಿ, ಎಸ್‌ಪಿ ಸೇರಿದಂತೆ ಕಾಂಗ್ರೆಸ್ ವಿರುದ್ಧ ಬಿಎಸ್‌ಪಿ ವರಿಷ್ಠೆ ಮಾಯಾವತಿ (BSP Chief Mayawati)ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಸಾರ್ವಜನಿಕರನ್ನು ಓಲೈಸಲು ವಿರೋಧ ಪಕ್ಷಗಳು ಹೇಳುತ್ತಿರುವ ಯೋಜನೆ ಬಗ್ಗೆ ಪ್ರಸ್ತಾಪಿಸಿದ ಅವರು, ಯುಪಿಯಲ್ಲಿ ಚುನಾವಣಾ ಭರವಸೆಗಳನ್ನು ಒಂದಾದ ಬಳಿಕ ಮತ್ತೊಂದರಂತೆ ಮಾಡಲಾಗುತ್ತಿದೆ, ಅಧಿಕಾರಕ್ಕೆ ಬಂದ ನಂತರ ಅದನ್ನು ಹೆಚ್ಚಾಗಿ ಮರೆತುಬಿಡಲಾಗಿದೆ ಎಂದು ಹೇಳಿದರು.

ಎಸ್‌ಪಿ, ಬಿಜೆಪಿ ಮತ್ತು ಕಾಂಗ್ರೆಸ್‌ ಬಗ್ಗೆ ಎಚ್ಚದಿಂದಿರಿ

ಶುಕ್ರವಾರ, ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿದ್ದು, ಎಸ್‌ಪಿ-ಬಿಜೆಪಿ ಮತ್ತು ಕಾಂಗ್ರೆಸ್‌ (Congress) ವಿಚಾರವಾಗಿ ಯುಪಿ ಜನರಿಗೆ ಎಚ್ಚರವಾಗಿರುವಂತೆ ಮನವಿ ಮಾಡಿದ್ದಾರೆ. ಯುಪಿಯಲ್ಲಿ, ವಿಶೇಷವಾಗಿ ಬಿಜೆಪಿ, ಎಸ್‌ಪಿ, ಕಾಂಗ್ರೆಸ್ ಇತ್ಯಾದಿಗಳು ರಾಜ್ಯದ ಜನರನ್ನು ಓಲೈಸಲು ಮತ್ತು ದಾರಿ ತಪ್ಪಿಸುವ ಸಲುವಾಗಿ, ಪ್ರತಿದಿನವೂ ಆಮಿಷಕಾರಿ ಚುನಾವಣಾ ಭರವಸೆಗಳನ್ನು ನೀಡುತ್ತಿವೆ ಎಂದು ಅವರು ಬರೆದಿದ್ದಾರೆ. ಈ ಭರವಸೆಗಳು ಅಧಿಕಾರಕ್ಕೆ ಬಂದ ನಂತರ ಮರೆತು ಬಿಡುತ್ತಾರೆ. ಇದು ಅವರ ಈವರೆಗಿನ ಇತಿಹಾಸ. ಜನರೇ ಅವರ ಬಗ್ಗೆ ಎಚ್ಚರದಿಂದಿರಿ ಎಂದಿದ್ದಾರೆ.

ವಿಪಕ್ಷಗಳಿಗೆ ಸವಾಲು

ಇದರೊಂದಿಗೆ ಬಿಜೆಪಿ ಮತ್ತು ಎಸ್‌ಪಿ ಸಾರ್ವಜನಿಕರಿಗೆ ನೀಡುತ್ತಿರುವ ಭರವಸೆಗಳನ್ನು ತಮ್ಮ ಸರ್ಕಾರ ಇದ್ದಾಗ ಏಕೆ ಮಾಡಲಿಲ್ಲ ಎಂದು ಅವರು ತಮ್ಮ ಎರಡನೇ ಟ್ವೀಟ್‌ನಲ್ಲಿ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷವೂ ಮಹಿಳೆಯರಿಗೆ ಶೇ.40 ರಷ್ಟು ಟಿಕೆಟ್ ನೀಡುವ ಮತ್ತು ಸ್ಕೂಟಿ ಕೊಡಿಸುವ ಇತ್ಯಾದಿ ಭರವಸೆಗಳನ್ನು ನೀಡುತ್ತಿದೆ, ಅವರ ಸರ್ಕಾರಗಳಿರುವ ರಾಜ್ಯಗಳಲ್ಲಿ ಆ ಕೆಲಸವನ್ನು ಏಕೆ ಮಾಡಲಿಲ್ಲ? ಇದು ಕೂಡ ಯೋಚಿಸಬೇಕಾದ ವಿಷಯ ಎಂದಿದ್ದಾರೆ.

ಚುನಾವಣೆಗೆ 6 ತಿಂಗಳು ಮೊದಲೇ ಸಮೀಕ್ಷೆ ನಿಷೇಧಿಸಿ ಎಂದ ಮಾಯಾವತಿ

ಚುನಾವಣೆಗೆ 6 ತಿಂಗಳು ಮೊದಲೇ ಮಾಧ್ಯಮಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು  ಚುನಾವಣಾ ಆಯೋಗ ನಿಷೇಧಿಸಬೇಕು ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಆಗ್ರಹಿಸಿದ್ದಾರೆ.  ಉತ್ತರಪ್ರದೇಶ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನ್ಯೂಸ್‌ ಚಾನಲ್‌ವೊಂದು ಚುನಾವಣಾ ಪೂರ್ವ ಸಮೀಕ್ಷೆಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮುಂದಿನ 2022ರ ಚುನಾವಣೆ(2022 Assembly poll)ಯಲ್ಲಿ ರಾಜ್ಯದಲ್ಲಿ  ಬಿಜೆಪಿ ಅತೀ ಹೆಚ್ಚು ಸೀಟುಗಳನ್ನು ಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದೆ. ಈ ಸಮೀಕ್ಷೆ ಬಿಡುಗಡೆಯ ಬಳಿಕ ಮಾಯಾವತಿ ಸಮೀಕ್ಷೆಯನ್ನೇ ನಿಷೇಧಿಸಬೇಕು ಎಂಬ ಹೇಳಿಕೆ ನೀಡಿದ್ದಾರೆ.

ಕೇಂದ್ರದಲ್ಲಿಯೂ ಬಿಜೆಪಿ ನೇತೃತ್ವದ ಮೈತ್ರಿಕೂಟವಿದ್ದು, ಇವರು ಚುನಾವಣೆ ವೇಳೆ ತಮಗೆ ಪೂರಕವಾಗುವಂತೆ ಉತ್ತರ ಪ್ರದೇಶ ಸರ್ಕಾರದ ಆಡಳಿತವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಮಾಯಾವತಿ(Mayawati) ಆರೋಪಿಸಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗ(Election Commission)ಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ ಅವರು, ಮಾಧ್ಯಮಗಳು ಹಾಗೂ ಇತರ ಸಂಸ್ಥೆಗಳು ನಡೆಸುವ  ಚುನಾವಣಾ ಪೂರ್ವ ಸಮೀಕ್ಷೆಯನ್ನು ಚುನಾವಣೆ ನಡೆಯುವ 6 ತಿಂಗಳು ಮೊದಲೇ ನಿಷೇಧಿಸುವಂತೆ ಮನವಿ ಮಾಡಲಾಗುವುದು ಇದರಿಂದ ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಹೇಳಿದರು.

ಉತ್ತರಪ್ರದೇಶದ ಜನ ರಾಜ್ಯದಲ್ಲಿ ಅಧಿಕಾರವನ್ನು ಬದಲಾಯಿಸಬೇಕೆನ್ನುವ ಯೋಚನೆಯಲ್ಲಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆ ನಡೆಸುವುದನ್ನು ನಿಷೇಧಿಸುವಂತೆ ಶೀಘ್ರದಲ್ಲಿಯೇ ಚುನಾವಣಾ ಆಯೋಗಕ್ಕೆ ನಾನು ಪತ್ರ ಬರೆಯುತ್ತೇನೆ. ನಿಮಗೂ ತಿಳಿದಿರಬಹುದು. ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದ ವೇಳೆ ಸಮೀಕ್ಷೆಗಳು ಮಮತಾ ಬ್ಯಾನರ್ಜಿ( Mamata Banerjee) ಸೋಲುತ್ತಿದ್ದಾರೆ ಎಂದು ತಿಳಿಸಿದ್ದವು. ಆದರೆ ಫಲಿತಾಂಶದ ವೇಳೆ ಅದು ಸಂಪೂರ್ಣ ವಿರುದ್ಧವಾಗಿತ್ತು. ಮಮತಾ ಭಾರಿ ಬಹುಮತದೊಂದಿಗೆ ಚುನಾವಣೆಯಲ್ಲಿ ಗೆದ್ದು ಬೀಗಿದರು.  ಅಲ್ಲಿ ಅಧಿಕಾರ ಹಿಡಿಯಬೇಕೆಂದು ಬಯಸಿದ್ದ ಕೆಲವರ ಕನಸುಗಳು ಭಗ್ನಗೊಂಡವು. ಹೀಗಾಗಿ ಸಮೀಕ್ಷೆಯ ಮೂಲಕ ಜನರ ದಾರಿ ತಪ್ಪಿಸಬಾರದು ಎಂದು ಮಾಯಾವತಿ ಹೇಳಿದರು.

Follow Us:
Download App:
  • android
  • ios