ದೆಹಲಿಯಲ್ಲಿ ಪ್ರವಾಹ, ಸಿಎಂ ಪ್ರವಾಸ: ಅರವಿಂದ್ ಕೇಜ್ರಿವಾಲ್ ಬೆಂಗಳೂರು ಸಭೆ ಟೀಕಿಸಿದ ಬಿಜೆಪಿ!
ಎರಡು ದಿನಗಳ ಪ್ರತಿಪಕ್ಷಗಳ ಸಭೆಗಾಗಿ ಬೆಂಗಳೂರಿಗೆ ಬಂದಿರುವ ಅರವಿಂದ್ ಕೇಜ್ರಿವಾಲ್‌ರನ್ನು ಬಿಜೆಪಿ ಟೀಕಿಸಿದೆ. ಒಂದೆಡೆ ದೆಹಲಿ ಪ್ರವಾಹದಲ್ಲಿ ನಡುವಿನಲ್ಲಿದ್ದರೆ, ಸಿಎಂ ಕೇಜ್ರಿವಾಲ್ ಪ್ರವಾಸದ ಮೂಡ್‌ನಲ್ಲಿದ್ದಾರೆ ಎಂದು ಟೀಕಿಸಿದೆ.
ನವದೆಹಲಿ (ಜು.17): ಮುಂಬರಲು ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳ ಸಿದ್ಧತೆ ಹೇಗಿರಬೇಕು ಎನ್ನುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ನಡೆಸುತ್ತಿರುವ 2ನೇ ಸಭೆ ಬೆಂಗಳೂರಿನಲ್ಲಿ ನಿಗದಿಯಾಗಿದೆ. ಈಗಾಗಲೇ ವಿರೋಧ ಪಕ್ಷಗಳ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಬೆಂಗಳೂರಿಗೆ ಆಗಮಿಸಿದ್ದಾರೆ. ಇದನ್ನು ದೆಹಲಿ ಬಿಜೆಪಿ ಕಟುವಾಗಿ ಟೀಕಿಸಿದೆ. ಯಮುನಾ ನದಿ ಅಪಾಯದ ಮಟ್ಟ ಮೀರಿದ್ದರಿಂದ ಇಡೀ ದೆಹಲಿ ನೀರಿನಲ್ಲಿ ಮುಳುಗಿಹೋಗಿದೆ. ಇಂಥ ಸಂದರ್ಭದಲ್ಲಿ ರಾಜ್ಯ ಮುಖ್ಯಮಂತ್ರಿಯಾಗಿ ಜನರ ನೆರವಿಗೆ, ಅವರ ಪರಿಹಾರ ಕಾರ್ಯಗಳ ಮೇಲ್ವಿಚಾರಣೆಯನ್ನು ಮಾಡಬೇಕು. ಆದರೆ, ಸಿಎಂ ಸಮಸ್ಯೆಗಳನ್ನು ಕಡೆಗಣಿಸಿ ರಾಜ್ಯದ ಹೊರಗೆ ತಿರುಗಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿ ಸಿಎಂ ಸಾರ್ವಜನಿಕರ ಸಮಸ್ಯೆಗಳನ್ನು ಕಡೆಗಣಿಸಿ ವಿರೋಧ ಪಕ್ಷಗಳ ಸಭೆಗೆ ಹಾಜರಾಗಿದ್ದಾರೆ ಎಂದು ಬಿಜೆಪಿ ಮುಖಂಡ ವೀರೇಂದ್ರ ಸಚ್‌ದೇವ್ ಆರೋಪಿಸಿದ್ದಾರೆ. ಒಬ್ಬ ಭ್ರಷ್ಟ ವ್ಯಕ್ತಿ ಇಡೀ ಭ್ರಷ್ಟರ ಸೈನ್ಯವನ್ನು ಭೇಟಿಯಾಗಲು ಹೋಗಿದ್ದಾನೆ ಎಂದು ಅವರು ಟೀಕಿಸಿದ್ದಾರೆ.
ದೆಹಲಿಯ ಜನರು ಪ್ರವಾಹದಿಂದ ತೊಂದರೆಗೆ ಒಳಗಾಗಿರುವ ಸಮಯದಲ್ಲಿ ಕೇಜ್ರಿವಾಲ್ ಬೆಂಗಳೂರಿಗೆ ಹೋಗಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ವಿಷ್ಣು ಮಿತ್ತಲ್ ಆರೋಪಿಸಿದ್ದಾರೆ. ಇದೇ ಆಪ್ ಪ್ರಧಾನಮಂತ್ರಿ ದ್ವಿಪಕ್ಷೀಯ ಸಭೆಗೆ ಫ್ರಾನ್ಸ್‌ಗೆ ಹೋಗಿದ್ದನ್ನು ಪ್ರಶ್ನೆ ಮಾಡಿತ್ತು. ಈಗ ದೆಹಲಿ ಪರಿಸ್ಥಿತಿ ಇನ್ನೂ ಸಹಜ ಸ್ಥಿತಿಗೆ ಬರುವ ಮುನ್ನವೇ ರಾಜಕಾರಣಕ್ಕೆ ಇಳಿದಿದ್ದಾರೆ ಇದು ಪಕ್ಷದ ದ್ವಂದ್ವ ನೀತಿಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಯಮುನೆ ಅಬ್ಬರ ಇಳಿಕೆ: ದಿಲ್ಲಿ ನಿಟ್ಟುಸಿರು; ಪರಿಹಾರ ಕೆಂದ್ರಗಳಿಂದ ಮನೆಗಳಿಗೆ ಹೊರಟ ಜನ
ದೆಹಲಿ ಜನರನ್ನು ಕಷ್ಟದಲ್ಲಿ ಬಿಟ್ಟು, ದುಷ್ಟರ ಗುಂಪಿಗೆ ಸೇರಿರುವ ಭ್ರಷ್ಟ ಕೇಜ್ರಿವಾಲ್ ಅವರನ್ನು ದೆಹಲಿ ಜನತೆ ಕ್ಷಮಿಸುವುದಿಲ್ಲ ಎಂದು ಕುಲ್ಜಿತ್ ಸಿಂಗ್ ಚಹಾಲ್ ಟ್ವೀಟ್ ಮಾಡಿದ್ದಾರೆ.
ಯಮುನಾ ನದಿಯ ನೀರಿನ ಮಟ್ಟ ಏರಿಕೆಯಿಂದ ದೆಹಲಿಯ ಜನರು ತೊಂದರೆ ಅನುಭವಿಸುತ್ತಿರುವ ಸಮಯದಲ್ಲಿ ಕೇಜ್ರಿವಾಲ್ ದೆಹಲಿಯಿಂದ ನಾಪತ್ತೆಯಾಗಿದ್ದಾರೆ ಎಂದು ಬಿಜೆಪಿ ನಾಯಕ ಪ್ರವೀಣ್ ಸಾಹೇಬ್ ಸಿಂಗ್ ಆರೋಪಿಸಿದ್ದಾರೆ. ಕೇಜ್ರಿವಾಲ್ ದೆಹಲಿ ಜನರ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ಈ ವಿಚಾರವೇ ತೋರಿಸುತ್ತದೆ ಎಂದು ಅವರು ಬರೆದಿದ್ದಾರೆ.
ಉತ್ತರ ಭಾರತದ ಜಲಪ್ರಳಯ, ನದಿ ಎಂದಿಗೂ ತನ್ನ ದಾರಿ ಮರೆಯುವುದಿಲ್ಲ; ಯಮುನೆಯ ಹಳೇ ಫೋಟೋ ವೈರಲ್
ದೆಹಲಿ ಪ್ರವಾಹದಲ್ಲಿ ಮುಳುಗಿರುವಾಗ ರಾಜಕೀಯ ಮಾಡಲು ಹೊರಟಿದ್ದೇಕೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್.ಪಿ.ಸಿಂಗ್ ಪ್ರಶ್ನಿಸಿದ್ದಾರೆ.