ನವದೆಹಲಿ(ಫೆ.22): ಆಕ್ರೋಶಕ್ಕೆ ಕಾರಣವಾಗಿರುವ ಮೂರು ಕೃಷಿ ಕಾಯ್ದೆಗಳ ಲಾಭದ ಕುರಿತು ರೈತ ಸಮುದಾಯಕ್ಕೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾಯ್ದೆ ವಿರೋಧಿಸಿ ದೆಹಲಿ ಸೇರಿದಂತೆ ದೇಶಾದ್ಯಂತ ರೈತ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲೇ ಪ್ರಧಾನಿ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಭಾನುವಾರ ಇಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಕೃಷಿ ಕಾಯ್ದೆ ಕುರಿತು ರೈತರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ. ಹೀಗಾಗಿ ಪಕ್ಷದ ನಾಯಕರು, ಕೃಷಿ ಕಾಯ್ದೆ ಜಾರಿಯಿಂದಾಗಿ ಆಗುವ ಲಾಭಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಸೂಚಿಸಿದರು.

ಇದೇ ವೇಳೆ ಕೃಷಿ ಕಾಯ್ದೆಯಲ್ಲಿ ಅಮೂಲಾಗ್ರ ಸುಧಾರಣೆ ತಂದ ಕಾರಣಕ್ಕೆ ಮತ್ತು ದೇಶದಲ್ಲಿ ಕೋವಿಡ್‌ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವ ಗೊತ್ತುವಳಿಯನ್ನು ಸಭೆ ಅಂಗೀಕರಿಸಿತು. ಸಭೆಯ ಆರಂಭದಲ್ಲಿ, ದೇಶಾದ್ಯಂತ ಕೋವಿಡ್‌ಗೆ ಬಲಿಯಾದವರನ್ನು ಸ್ಮರಿಸಿ ಮೌನಾಚರಣೆ ನಡೆಸಲಾಯಿತು.

ಸಭೆಯಲ್ಲಿ ಕೃಷಿ ಕಾಯ್ದೆ, ಆತ್ಮನಿರ್ಭರ ಭಾರತ ಮತ್ತು ಮುಂಬರುವ 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಕುರಿತು ಚರ್ಚಿಸಲಾಯಿತು.