ಚೆನ್ನೈ(ಮಾ.22):  ಪಂಚ ರಾಜ್ಯಗಳ ಚುನಾವಣೆ ಗೆಲ್ಲಲು ಅವಿರತ ಪ್ರಯತ್ನ ಮಾಡುತ್ತಿರುವ ಬಿಜೆಪಿ ಒಂದೊಂದೆ ರಾಜ್ಯಗಳಲ್ಲಿ ಪ್ರಣಾಲಿಕೆ ಬಿಡುಗಡೆ ಮಾಡುತ್ತಿದೆ. ಪಶ್ಚಿಮ ಬಂಗಾಳ, ಅಸ್ಸಾಂ ಬಳಿಕ ಇದೀಗ ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಚೆನ್ನೈ ಬಿಜೆಪಿ ಕಚೇರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.

ಉಚಿತ ಶಿಕ್ಷಣ, ಆರೋಗ್ಯ,ಅಭಿವೃದ್ಧಿ: ಬಂಗಾಳ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ!

ತಮಿಳುನಾಡು ಮತದಾರರಿಗೆ ಬಿಜೆಪಿ ಭರ್ಜರಿ ಭರವಸೆಗಳನ್ನು ನೀಡಿದೆ. ಬರೋಬ್ಬರಿ 50 ಲಕ್ಷ ಉದ್ಯೋಗ ಸೃಷ್ಟಿ, ಮೀನುಗಾರರಿಗೆ ವಾರ್ಷಿಕ 6,000 ರೂಪಾಯಿ ಧನಸಹಾಯ ಸೇರಿದಂತೆ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಹೇಳಿದೆ. ಈ ಬಾರಿಯ ತಮಿಳುನಾಡಿನಲ್ಲಿ ಬಿಜೆಪಿ ಕೂಟದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರವು ವಿಶ್ವಾಸವಿದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

 

ಬಿಜೆಪಿ ಪ್ರಣಾಳಿಕೆಯ ಪ್ರಮುಖಾಂಶ:

  • 50 ಲಕ್ಷ ಉದ್ಯೋಗ ಸೃಷ್ಟಿ ಗುರಿ
  • ಮೀನುಗಾರರಿಗೆ ವಾರ್ಷಿಕ 6,000 ರೂಪಾಯಿ ಧನಸಹಾಯ
  • ಉದ್ಯಮ, ಕೈಗಾರಿಕೆಯಲ್ಲಿ ದಕ್ಷಿಣ ಭಾರತದ ಅಗ್ರಸ್ಥಾನದ ರಾಜ್ಯವನ್ನಾಗಿ ಮಾಡುವ ಭರವಸೆ
  • 12 ಲಕ್ಷ ಏಕರೆ ಪಂಚಮಿ ಭೂಮಿ ಮರು ವಶಪಡಿಸಿಕೊಂಡು ತಮಿಳುನಾಡು ಪರಿಶಿಷ್ಠ ಜಾತಿಗೆ ಹಸ್ತಾಂತರ
  • ಹಿಂದೂ ದೇವಾಲಯಗಳ ಆಡಳಿತವನ್ನು ಹಿಂದೂ ವಿದ್ವಾಂಸರು ಮತ್ತು ಸಂತರು ಒಳಗೊಂಡ ಪ್ರತ್ಯೇಕ ಮಂಡಳಿಗೆ ಹಸ್ತಾಂತರಿಸಲಾಗುವುದು.
  • 18 ರಿಂದ 20 ವರ್ಷದ ಹೆಣ್ಣುಮಕ್ಕಳಿಗೆ ಉಚಿತ ಡ್ರೈವಿಂಗ್ ಲೈಸೆನ್ಸ್
  • 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ  ಉಚಿತ ಟ್ಯಾಬ್ಲೆಟ್ ನೀಡಲಾಗುವುದು
  • ಕೃಷಿಗೆ ಪ್ರತ್ಯೇಕ ಬಜೆಟ್
  • ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪನೆ ಹಾಗೂ ಉಚಿತ ಚಿಕಿತ್ಸೆ

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಎಪ್ರಿಲ್ 6 ರಂದು ಚುನಾವಣೆ ನಡೆಯಲಿದೆ. ಮೇ.02ರಂದು ಫಲಿತಾಂಶ ಹೊರಬೀಳಲಿದೆ.