ಕೊಲ್ಕತ್ತಾ(ಡಿ.22): ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವಿನ ರಾಜಕೀಯ ಸಮರವೀಗ ಸಾಂಸಾರಿಕ ಸಂಬಂಧಗಳಲ್ಲೂ ಬಿರುಕು ಮೂಡಿಸತೊಡಗಿದೆ. ಬಿಷ್ಣುಪುರದ ಬಿಜೆಪಿ ಸಂಸದ ಸೌಮಿತ್ರ ಖಾನ್‌ ಅವರ ಪತ್ನಿ ಸುಜಾತಾ ಮಂಡಲ್‌ ಸೋಮವಾರ ಟಿಎಂಸಿ ಸೇರ್ಪಡೆಯಾಗಿದ್ದು, ಅದರ ಬೆನ್ನಲ್ಲೇ ಆಕೆಗೆ ವಿಚ್ಛೇದನ ನೀಡಲು ಸೌಮಿತ್ರ ಖಾನ್‌ ನಿರ್ಧರಿಸಿದ್ದಾರೆ.

ಪತ್ನಿ ಟಿಎಂಸಿ ಸೇರ್ಪಡೆಯಾಗುತ್ತಿದ್ದಂತೆ ಪತ್ರಿಕಾಗೋಷ್ಠಿ ನಡೆಸಿದ ಸೌಮಿತ್ರ ಖಾನ್‌, ‘ತೃಣಮೂಲ ಕಾಂಗ್ರೆಸ್‌ ಪಕ್ಷ ನನ್ನ ಸಂಸಾರ ಒಡೆದಿದೆ. ಆಕೆಗೆ ಬಿಜೆಪಿ ಸಂಸದನ ಪತ್ನಿಯೆಂದು ಗೌರವ ಸಿಗುತ್ತಿತ್ತು. ನನ್ನ ಗೆಲುವಿನಲ್ಲಿ ಆಕೆಯ ಪಾತ್ರವೂ ಇತ್ತು. ನನ್ನ ಸಂಸಾರ ಒಡೆದವರನ್ನು ನಾನು ಕ್ಷಮಿಸುವುದಿಲ್ಲ. ಸುಜಾತಾ ನನ್ನ ಆಸ್ತಿಯನ್ನು ಬೇಕಾದರೆ ತೆಗೆದುಕೊಳ್ಳಲಿ. ಇಲ್ಲದಿದ್ದರೆ ಅದನ್ನು ಸಾರ್ವಜನಿಕರಿಗೆ ದಾನ ಮಾಡುತ್ತೇನೆ. ಈಗಲೇ ಆಕೆಗೆ ವಿಚ್ಛೇದನ ನೋಟಿಸ್‌ ಕಳಿಸುತ್ತಿದ್ದೇನೆ’ ಎಂದು ಹೇಳಿದರು.

ಇನ್ನೊಂದೆಡೆ, ಟಿಎಂಸಿ ಸೇರ್ಪಡೆಯಾಗಿ ಮಾತನಾಡಿದ ಸುಜಾತಾ ಮಂಡಲ್‌, ‘ಬಿಜೆಪಿಯಲ್ಲಿ ನನಗೆ ಗೌರವವಿರಲಿಲ್ಲ. ಅಲ್ಲಿರುವವರೆಲ್ಲ ಅವಕಾಶವಾದಿಗಳು ಮತ್ತು ಕಳಂಕಿತರು. ಅವರೆಲ್ಲ ತಮ್ಮ ಕಳಂಕ ತೊಳೆದುಕೊಳ್ಳಲು ಯಾವ ಸೋಪು ಹಾಕಿಕೊಳ್ಳುತ್ತಾರೋ ಗೊತ್ತಿಲ್ಲ. ನನ್ನ ಪತಿಗಾಗಿ ಮತ್ತು ಪಕ್ಷಕ್ಕಾಗಿ ಹೋರಾಡಿದೆ. ಲೋಕಸಭೆ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿದೆ. ಆದರೆ, ಅವರು ಬರೀ ಅವಕಾಶವಾದಿಗಳು ಎಂಬುದು ಗೊತ್ತಾಯಿತು’ ಎಂದು ವಾಗ್ದಾಳಿ ನಡೆಸಿದರು.