ಲೋಕಸಭಾ ಚುನಾವಣೆಯ ಸೋಲಿನ ಹೊಣೆಯನ್ನ ಅಜಿತ್ ಹೆಗಲ ಮೇಲೆ ಹಾಕಿದ ಆರ್‌ಎಸ್‌ಎಸ್!
ಅಜಿತ್ ಪವಾರ್ ಜೊತೆಗಿನ ಮೈತ್ರಿ ಮತದಾರರ ಭಾವನೆಗಳಿಗೆ ವಿರುದ್ಧವಾಗಿತ್ತು. ಹೀಗಾಗಿ ಕಳೆದ ಬಾರಿ 23 ಸ್ಥಾನ ಗೆದ್ದಿದ್ದ ಪಕ್ಷ ಈ ಬಾರಿ 8ಕ್ಕೆ ಇಳಿಯಿತು.
ಮುಂಬೈ: ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಯ (Maharshra BJP) ಕಳಪೆ ಸಾಧನೆಗೆ ಅದು ಡಿಸಿಎಂ ಅಜಿತ್ ಪವಾರ್ (DCM Ajit Pawar) ನೇತೃತ್ವದ ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇ ಕಾರಣ ಎಂದು ಆರ್‌ಎಸ್‌ಎಸ್ (RSS) ನಂಟಿನ ಮರಾಠಿ ವಾರಪತ್ರಿಕೆ ‘ವಿವೇಕ’ ಆಕ್ಷೇಪಿಸಿದೆ. ಮೈತ್ರಿಗೆ ಸ್ಥಳೀಯರ ಕಾರ್ಯಕರ್ತರು, ನಾಯಕರ ವಿರೋಧವಿದ್ದರೂ ಬಿಜೆಪಿ ಮೈತ್ರಿ (BJP Alliance) ಮಾಡಿಕೊಂಡಿತು. ಇದು ಮತದಾರರ ಭಾವನೆಗಳಿಗೆ ವಿರುದ್ಧವಾಗಿತ್ತು. ಹೀಗಾಗಿ ಕಳೆದ ಬಾರಿ 23 ಸ್ಥಾನ ಗೆದ್ದಿದ್ದ ಪಕ್ಷ ಈ ಬಾರಿ 8ಕ್ಕೆ ಇಳಿಯಿತು. ಇನ್ನೊಂದೆಡೆ ಮಧ್ಯಪ್ರದೇಶದಲ್ಲಿ ಕಾರ್ಯಕರ್ತರು, ಸ್ಥಳೀಯರ ನಾಯಕರಿಗೆ ಮಾತಿಗೆ ಬೆಲೆ ಕೊಟ್ಟಿದ್ದಕ್ಕೆ ಮಧ್ಯಪ್ರದೇಶದಲ್ಲಿ ಬಿಜೆಪಿ ಕ್ಲೀನ್‌ಸ್ವೀಪ್ ಮಾಡಿತು ಎಂದು ಪತ್ರಿಕೆ ಹೇಳಿದೆ.
ಇತ್ತೀಚಿನ ಲೋಕಸಭಾ ಚುನಾವಣೆಯ ಕಳಪೆ ಸಾಧನೆ ಬೆನ್ನಲ್ಲೇ ಮಹಾರಾಷ್ಟ್ರದ ಪಿಂಪ್ರಿ ಚಿಚ್ವಾಡದ ಅಜಿತ್ ಪವಾರ್ ಬಣದ ಎನ್‌ಸಿಪಿಯ 24 ನಾಯಕರು ಬುಧವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ, ಶರದ್ ಪವಾರ್ ಬಣದ ಎನ್‌ಸಿಪಿ ಸೇರಿದ್ದಾರೆ. ಸ್ವತಃ ಶರದ್, ಈ ನಾಯಕರನ್ನು ಸ್ವಾಗತಿಸಿದರು. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಅಜಿತ್ ಬಣ, ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿ ಕೇವಲ 1 ಸ್ಥಾನ ಗೆದ್ದಿತ್ತು. ಆದರೆ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದ ಶರದ್ ಪವಾರ್ ಬಣದ 8 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.
ಲೋಕ ಸಮರ ಫಲಿತಾಂಶ ಎಫೆಕ್ಟ್; ಮಹಾರಾಷ್ಟ್ರ ಬಿಜೆಪಿ ರಾಜಕೀಯದಲ್ಲಿ ಭಾರೀ ಬೆಳವಣಿಗೆ
ಲೋಕಸಭಾ ಚುನಾವಣೆ ಬಳಿಕ ಮಹಾರಾಷ್ಟ್ರ ರಾಜಕಾರಣದಲ್ಲಿ ಹಲವು ಬದಲಾವಣೆಗಳು ಕಾಣುತ್ತಿವೆ. ಏಕನಾಥ್ ಶಿಂಧೆ ಸರ್ಕಾರದಲ್ಲಿ ಡಿಸಿಎಂ ಆಗಿರುವ ಅಜಿತ್ ಪವಾರ್ ವಿರುದ್ಧ ಅಸಮಾಧಾನ ಕೂಗು ಕೇಳಿ ಬರುತ್ತಿದೆ. ಲೋಕಸಭಾ ಚುನಾವಣೆಗೂ ಮುನ್ನವೇ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ, ಏಕನಾಥ್ ಶಿಂಧೆ ಬಣದ ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ರಚನೆ ಮಾಡಿಕೊಂಡು ಮಹಾಯುತಿ ಹೆಸರಿನಲ್ಲಿ ಜನರ ಮುಂದೆ ಹೋಗಿತ್ತು. ಅಜಿತ್ ಪವಾರ್ ನೇತೃತ್ವ ಬಣದ ಒಬ್ಬರು ಮಾತ್ರ ಸಂಸದರಾಗಿ ಆಯ್ಕೆಯಾಗಿದ್ದಾರೆ. ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ವಿರುದ್ಧ ಸ್ಪರ್ಧಿಸಿದ್ದ ಅಜಿತ್ ಪವಾರ್ ಪತ್ನಿ ಸುನೇತ್ರಾ ಸಹ ಸೋಲು ಕಂಡಿದ್ದಾರೆ. ಚುನಾವಣೆ ಸೋಲಿನ ಬಳಿಕ ಸುನೇತ್ರಾರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.
ಶರದ್ ಪವಾರ್ ಘರ್ ವಾಪ್ಸಿ
ಮೂಲ ಎನ್‌ಸಿಪಿ ನಾಯಕ ಶರದ್ ಪವಾರ್ ಘರ್ ವಾಪ್ಸಿ ಆರಂಭಿಸಿದ್ದಾರೆ. ಅಜಿತ್ ಪವಾರ್ ಜೊತೆ ಹೋಗಿದ್ದ ಎನ್‌ಸಿಪಿ ನಾಯಕರನ್ನು ಪಕ್ಷಕ್ಕೆ ವಾಪಸ್ ಕರೆತರುವ ಕೆಲಸವನ್ನು ತರೆಮರೆಯಲ್ಲಿ ಮಾಡ್ತಿದ್ದಾರೆ ಎಂದು ವರದಿಯಾಗಿದೆ. ಲೋಕ ಸಮರ ಫಲಿತಾಂಶದ ಬಳಿಕ ವಿಧಾನಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಶರದ್ ಪವಾರ್ ಬಣ ಸೇರಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ ತಿಂಗಳ ಹಿಂದೆಯೇ ಶರದ್ ಪವಾರ್, ತಮ್ಮ ಜೊತೆ ಹಲವು ನಾಯಕರು ಸಂಪರ್ಕದಲ್ಲಿದ್ದಾರೆ ಶರದ್ ಪವಾರ್ ಸುಳಿವು ನೀಡಿದ್ದರು.
ಮಹಾರಾಷ್ಟ್ರ ರಾಜಕಾರಣದಲ್ಲಿ ಸಂಚಲನ; ಡಿಸಿಎಂ ಅಜಿತ್ ಪವಾರ್ ಬಣದ ನಾಯಕರು ಘರ್ ವಾಪ್ಸಿ!
ಲೋಕ ಸಮರದಲ್ಲಿ ಅಘಾಡಿಗೆ 30 ಸ್ಥಾನ
ಲೋಕಸಭೆ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ 40ರಲ್ಲಿ 30 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ಬಿಗ್ ಶಾಕ್ ನೀಡಿತ್ತು. ಇನ್ನು ಡಿಸಿಎಂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ರಾಯಗಡದಲ್ಲಿ ಕೇವಲ ಒಂದು ಸ್ಥಾನವನ್ನು ಗೆದ್ದರೆ, ಶರದ್ ಪವಾರ್ ಬಣ ಎಂಟು ಸ್ಥಾನಗಳನ್ನು ಗಳಿಸಿತ್ತು.