ನವದೆಹಲಿ, [ಡಿ.23]: 2018ರಲ್ಲಿ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಬಿಜೆಪಿಯನ್ನು ಮಹಾರಾಷ್ಟ್ರದಲ್ಲಿ ಶಿವಸೇನೆ  ICU ಸೇರುವಂತೆ ಮಾಡಿತ್ತು. 

ಜಾರ್ಖಂಡ್ ಎಕ್ಸಿಟ್ ಪೋಲ್ ಅಚ್ಚರಿ, ಹೀಗಾದ್ರೆ ಮುಂದೇನು?

ಮಹಾರಾಷ್ಟ್ರ ಕಳೆದುಕೊಂಡ ಚಿಂತೆಯಲ್ಲಿದ್ದ ಬಿಜೆಪಿಗೆ ಇದೀಗ ಜಾರ್ಖಂಡ್ ಅಸೆಂಬ್ಲಿ ಚುನಾವಣೆಯ ಫಲಿತಾಂಶ ವೆಂಟಿಲೇಟರ್ ಮೂಲಕ ಉಸಿರಾಡುವಂತೆ ಮಾಡಿದೆ.

ನಡೆಯದ ಮೋ-ಶಾದಾಟ: ಜಾರ್ಖಂಡ್‌ನಲ್ಲಿ ಜಾರಿ ಬಿದ್ದ ಬಿಜೆಪಿ; 'ಕೈ' ಹಿಡಿದ ಮತದಾರ

2014ರಲ್ಲಿ ಬಿಜೆಪಿ ಆಡಳಿತದಲ್ಲಿದ್ದ ಬಿಜೆಪಿ, 2019ರ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲುಕಂಡಿದ್ದು, ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸರಳ ಬಹುಮತ ಪಡೆದಿದೆ. 

ಜಾರ್ಖಂಡ್‌ನಲ್ಲಿ ಜಾರಿ ಬಿದ್ದ ಬಿಜೆಪಿ


ಒಟ್ಟು 81 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಮೈತ್ರಿಕೂಟ 47ರಲ್ಲಿ ಗೆದ್ದರೆ, ಬಿಜೆಪಿ 25 ಸ್ಥಾನಗಳಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ ಬಿಜೆಪಿ 37 ಸೀಟುಗಳಲ್ಲಿ ಗೆದ್ದು ಅಧಿಕಾರ ಹಿಡಿದಿತ್ತು. ಆದ್ರೆ, ಇದೀಗ ಬಿಜೆಪಿ ತೆಕ್ಕೆಯಲ್ಲಿದ್ದ ಜಾರ್ಖಂಡ್ ಅನ್ನು ಕಾಂಗ್ರೆಸ್ ಮೈತ್ರಿಕೂಟ ಕಸಿದುಕೊಂಡಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿದ್ದ ಮೋದಿ ಟೀಂ, ವಿಧಾನಸಭೆ ಚುನಾವಣೆಗಳಲ್ಲಿ ಮಾತ್ರ ಸೋಲಿನ ಹಾದಿ ಹಿಡಿಯುತ್ತಿದೆ. 

ನಿಧಾನವಾಗಿ ಕರಗುತ್ತಿದೆ ಕೇಸರಿ ಸಾಮ್ರಾಜ್ಯ


ದೇಶಾದ್ಯಂತ ವ್ಯಾಪಿಸಿದ್ದ ಕೇಸರಿ ಸಾಮ್ರಾಜ್ಯ, ನಿಧಾನವಾಗಿ ಕರಗುತ್ತಿದೆ. ಕಳೆದ 12 ತಿಂಗಳ ಅವಧಿಯಲ್ಲಿ 5ನೇ ರಾಜ್ಯ ಬಿಜೆಪಿಯ ತೆಕ್ಕೆಯಿಂದ ಕೈ ಜಾರಿದೆ. 2014ರಲ್ಲಿ ಕೇಂದ್ರದಲ್ಲಿ ಮೊದಲ ಬಾರಿಗೆ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಈಶಾನ್ಯ ರಾಜ್ಯಗಳಿಂದ ಆರಂಭವಾಗಿ ದೇಶದೆಲ್ಲೆಡೆ ಬಿಜೆಪಿ ಅಲೆ ಎದ್ದಿತ್ತು.  ಕಾಂಗ್ರೆಸ್, ಎಸ್ಪಿ, ಬಿಎಸ್ಪಿ, ಎನ್‌ಸಿಪಿ, ಆರ್‌ಜೆಡಿ, ಎಡಪಕ್ಷಗಳು ಸೇರಿದಂತೆ ಘಟಾನುಘಟಿಗಳೇ ಮೋದಿ ಮುಂದೆ ಹೇಳ ಹೆಸರಿಲ್ಲದಂತಾಗಿದ್ದವು. ಇದೇ ಜೋಶ್ ನಲ್ಲಿ 'ಕಾಂಗ್ರೆಸ್ ಮುಕ್ತ್ ಭಾರತ್’ ಮುನ್ನುಗ್ಗಿತು. ಆದ್ರೆ, ವಿಧಾನಸಭೆ ಚುನಾವಣೆಗಳಲ್ಲಿ ಕಮಲ ಮುದುಡಲಾರಂಭಿಸಿದೆ.

ಬಿಜೆಪಿ ತೆಕ್ಕೆಯಿಂದ ಜಾರಿದ ರಾಜ್ಯಗಳು 


ಕಳೆದ 12 ತಿಂಗಳ  ಅಂತರದಲ್ಲಿ ಬಿಜೆಪಿ ಕೈತಪ್ಪಿದ ರಾಜ್ಯಗಳು ಯಾವ್ಯಾವು ಅಂತ ನೋಡೋದಾದ್ರೆ, ರಾಜಸ್ಥಾನದಲ್ಲಿ ವಸುಂಧರಾ ರಾಜೆ, ಮಧ್ಯ ಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್, ಛತ್ತೀಸ್‌ಗಢದಲ್ಲಿ ರಮಣ್ ಸಿಂಗ್, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಇದೀಗ ಜಾರ್ಖಂಡ್‌ನಲ್ಲಿ ರಘುಬರ್‌ ದಾಸ್‌ ಸರ್ಕಾರ ಪತನಗೊಂಡಿದೆ.

ಕರ್ನಾಟಕದಲ್ಲಿ ಸೋತು ಗೆದ್ದ ಬಿಜೆಪಿ


ಹೌದು....2018ರ ಕರ್ನಾಟಕ ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿರಲಿಲ್ಲ. ಇದರಿಂದ ಬಿಜೆಪಿಯನ್ನು ದೂರವಿಡುವ ಒಂದೇ ಒಂದು ಕಾರಣಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿಕೊಂಡಿದ್ದವು. ಆದ್ರೆ, ಒಳಜಗಳ ಕಾರಣದಿಂದ ಒಂದು ವರ್ಷದಲ್ಲಿ ಮೈತ್ರಿ ಪತನಗೊಂಡಿತು. ಇದರ ಲಾಭ ಪಡೆದುಕೊಂಡ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಸೆಳೆದು ಬೈ ಎಲೆಕ್ಷನ್ ನಲ್ಲಿ ಗೆದ್ದು ಬೀಗಿ ಸರ್ಕಾರವನ್ನು ಸೇಫ್ ಮಾಡಿಕೊಂಡಿತು.

ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಪಂಚ್


 2019ರ ಲೋಕಸಭಾ ಚುನಾವಣೆಯ ಸೆಮಿಫೈನಲ್‌ ಎಂದೇ ಪರಿಗಣಿತವಾಗಿದ್ದ ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಫೀನಿಕ್ಸ್‌ನಂತೆ ಎದ್ದು ನಿಂತು ಬಿಜೆಪಿಗೆ ಎಚ್ಚರಿಕೆ ನೀಡಿತು. 2018ರ ನಂತರ ಮಧ್ಯಪ್ರದೇಶ, ಛತ್ತೀಸಗಢ, ರಾಜಸ್ಥಾನದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಈ ಮೂಲಕ ಬಿಜೆಪಿಯ ಕಾಂಗ್ರೆಸ್ ಮುಕ್ತ್ ಭಾರತ್ ಎನ್ನುವ ಸೌಂಡ್ ಕಡಿಮೆಯಾಗತೊಡಗಿತು. 

ಮಹಾರಾಷ್ಟ್ರದಲ್ಲಿ ಅಧಿಕಾರ ಕಳೆದುಕೊಂಡ ಬಿಜಿಪಿ 


2019ರಲ್ಲಿ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲೂ ಬಿಜೆಪಿ ಸಾಧನೆ ಗಣನೀಯವಾಗಿರಲಿಲ್ಲ. ಬಿಜೆಪಿ ನಡೆಗೆ ಮುನಿಸಿಕೊಂಡ ಶಿವಸೇನೆ ಕೊನೆಗೆ ಬಿಜೆಪಿ ವಿರೋಧಿ ಪಕ್ಷಗಳಾದ ಕಾಂಗ್ರೆಸ್ ಹಾಗೂ NCP ಜತೆ ಸೇರಿಕೊಂಡು ಸರ್ಕಾರ ರಚಿಸಿತು. ಈ ಮೂಲಕ ಬಿಜೆಪಿ ಮಹಾರಾಷ್ಟ್ರವನ್ನೂ ಸಹ ಕಳೆದಕೊಳ್ಳಬೇಕಾಯ್ತು.

ಹಂತ-ಹಂತವಾಗಿ ಬಾಡುತ್ತಿರುವ ಕಮಲ


ಇದು ನೂರಕ್ಕೆ ನೂರರಷ್ಟು ಸತ್ಯ.... 2014ರಿಂದ 2018ರ ವರಗೆ ಭಾರತ ಭೂಪಟವನ್ನು ಹಿಡಿದು ನೋಡಿದಾಗ ಎಲ್ಲಾ ಕೇಸರಿಮಯವೇ ಆಗಿತ್ತು. ಮೋದಿ-ಶಾ  ಜೋಡೆತ್ತು ಹೋದಲೆಲ್ಲ ಅಭೂತ ಪೂರ್ವವಾಗಿ  ಗೆದ್ದು ಬೀಗಿತ್ತು. ಇದೇ ಫುಲ್ ಜೋಶ್ ನಲ್ಲಿದ್ದ ಬಿಜೆಪಿ 'ಕಾಂಗ್ರೆಸ್ ಮುಕ್ತ್ ಭಾರತ್' ಎನ್ನುವ ಘೋಷಣೆಯೊಂದಿಗೆ ಮುನ್ನುಗ್ಗಿತು. ಆದ್ರೆ, 2018ರಲ್ಲಿ ಎದುರಾದ ಪಂಚ ರಾಜ್ಯಗಳ ವಿಧಾನಸಭೆಯಲ್ಲಿ ಕಮಲ ಮುದುಡಿತು. ಬಳಿಕ 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ NDA ಮತ್ತೆ ಅಧಿಕಾರಕ್ಕೆ ಬಂದ್ರೂ ಸಹ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಸೋಲಿನ ಹಾದಿಯಲ್ಲಿ ಸಾಗುತ್ತಿದೆ.  

ಒಟ್ಟಿನಲ್ಲಿ ಮೋದಿ-ಶಾ ಜೋಡೆತ್ತುಗಳ ಸಾಂಘಿಕ ಹೋರಾಟ, ತಂತ್ರಗಳು ಅಸೆಂಬ್ಲಿ ಚುನಾವಣೆಯಲ್ಲಿ ವರ್ಕೌಟ್ ಆಗುತ್ತಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾದಂತಾಗಿದ್ದು, ಕಳೆದ ಒಂದುವರೆ ವರ್ಷದಲ್ಲಿ ಕಮಲ ನಿಧಾನವಾಗಿ ಸೊರಗಲಾರಂಭಿಸಿದೆ.