ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ವೇದಿಕೆ ಸಜ್ಜಾಗಿದೆ. ದೇಶ ವಿದೇಶದ ಗಣ್ಯರು ಅಯೋಧ್ಯೆಗೆ ಆಗಮಿಸಿದ್ದಾರೆ. ಈ ನಡುವೆ ಸಾದ್ವಿ ರಿತಂಬರಾ ಹಾಗೂ ಉಮಾಭಾರತಿಯ ಚಿತ್ರಗಳು ವೈರಲ್‌ ಆಗಿದೆ. 

ಅಯೋಧ್ಯೆ (ಜ.22): ಅಯೋಧ್ಯೆಯಲ್ಲಿ ಶ್ರೀರಾಮ ದೀಪಾವಳಿ ನಡೆಯುತ್ತಿದೆ. ದೇಶ ವಿದೇಶಗಳ ಗಣ್ಯರು ಅಯೋಧ್ಯೆಯಲ್ಲಿ ಬೀಡುಬಿಟ್ಟಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿ, ಶ್ರೀರಾಮನ ನೂತನ ವಿಗ್ರಹಕ್ಕೆ ಅರ್ಪಿಸಲಿರುವ ಬೆಳ್ಳಿ ಛತ್ರ ಹಾಗೂ ರೇಷ್ಮೆ ವಸ್ತ್ರವನ್ನು ಹಿಡಿದು ಪ್ರಾಣ ಪ್ರತಿಷ್ಠಾಪನೆ ಕಾರ್ಯಕಮದಲ್ಲಿ ತೊಡಗಿಕೊಂಡಿದ್ದಾರೆ. ಅಮಿತಾಬ್‌ ಬಚ್ಛನ್‌, ರಜನಿಕಾಂತ್‌, ಚಿರಂಜೀವಿ, ದೇಶದ ಪ್ರಮುಖ ಕೈಗಾರಿಕೋದ್ಯಮಿ ಮುಖೇಶ್‌ ಅಂಬಾನಿ, ನೀತಾ ಅಂಬಾನಿ ಆಗಮಿಸಿದ್ದಾರೆ. ಈ ನಡುವೆ ಅಯೋಧ್ಯೆಯ ಐತಿಹಾಸಿಕ ಮಂದಿರದ ಎದುರು ಬಿಜೆಪಿಯ ಹಿರಿಯ ನಾಯಕಿ ಹಾಗೂ ರಾಮ ಮಂದಿರದ ಆಂದೋಲನಕ್ಕಾಗಿ ದೊಡ್ಡ ಮಟ್ಟದಲ್ಲಿ ಭಾಗಿಯಾಗಿದ್ದ ಉಮಾ ಭಾರತಿ ಹಾಗೂ ಸಾದ್ವಿ ರಿತಂಬರಾ ಅವರು ಭಾವುಕವಾಗಿ ಅಪ್ಪಿಕೊಂಡಿದ್ದಾರೆ. ಈ ಚಿತ್ರವೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್‌ ಸಿಂಗ್‌ ಅವರಂತೆ, ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ವಿಚಾರವಾಗಿ ಯಾವುದಕ್ಕೂ ಸಿದ್ಧ ಎಂದು ಸಾರ್ವಜನಿಕವಾಗಿ ಇಬ್ಬರು ನಾಯಕಿಯರು ಘೋಷಿಸಿಕೊಂಡಿದ್ದರು.

ಅಯೋಧ್ಯೆಯ ಶ್ರೀರಾಮ ಮಂದಿರದ ಎದುರು ಬಂದಾಗ ಇಬ್ಬರೂ ಭಾವುಕವಾಗಿ ತಬ್ಬಿಕೊಂಡರು. ಈ ವೇಳೆ ಸಾಧ್ವಿ ರಿತಂಬರಾ ಅವರು ಕಣ್ಣೀರು ಕೂಡ ಹಾಕಿದರು. ಅದರೊಂದಿಗೆ ದೀರ್ಘಕಾಲದಿಂದ ನಡೆದ ಹೋರಾಟಕ್ಕೆ ಸಿಕ್ಕ ಜಯ ಅವರ ಮುಖದಲ್ಲಿ ಕಾಣುತ್ತಿತ್ತು.

ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಇಬ್ಬರ ಮೇಲೂ ಸಿಬಿಐ ಕೇಸ್‌ ಹಾಕಿದೆ. ಅದರೊಂದಿಗೆ ಬಿಜೆಪಿ ಹಾಗೂ ಹಿರಿಯ ಹಿಂದು ಹೋರಾಟಗಾರರಾದ ಎಲ್‌ಕೆ ಆಡ್ವಾಣಿ, ಮುರಳಿ ಮನೋಹರ್‌ ಜೋಶಿ, ವಿನಯ್‌ ಕಟಿಯಾರ್‌, ಅಶೋಕ್‌ ಸಿಂಘಾಲ್‌, ಗಿರಿರಾಜ್‌ ಕಿಶೋರ್‌ ಹಾಗೂ ವಿಷ್ಣು ಹರಿ ದಾಲ್ಮಿಯಾ ಅವರ ಮೇಲೂ ಕೇಸ್‌ ಹಾಕಲಾಗಿತ್ತು. 2020ರ ಸೆಪ್ಟಬರ್‌ 30 ರಿಂದ ವಿಶೇಷ ಕೋರ್ಟ್‌ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎಲ್ಲರನ್ನೂ ಖುಲಾಸೆಗೊಳಿಸಿತ್ತು.

Scroll to load tweet…