ಮಾರ್ಚ್ 23 ರಂದು ಗೋವಾದಲ್ಲಿ ಹೊಸ ಸರ್ಕಾರ ಪ್ರಮೋದ್ ಸಾವಂತ್ ಎರಡನೇ ಬಾರಿಗೆ ಸಿಎಂ ಸಾಧ್ಯತೆ ಸರ್ಕಾರ ರಚನೆಗೆ ಗೋವಾದಲ್ಲಿ ಭರ್ಜರಿ ತಯಾರಿ
ಪಣಜಿ(ಮಾ.20) : ಗೋವಾದಲ್ಲಿ ಬಿಜೆಪಿ, ಸರ್ಕಾರ ರಚಿಸಲು ಸಿದ್ಧವಾಗಿದ್ದು ಮಾ. 23ರಂದು (ಬುಧವಾರ) ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.‘ಇತ್ತೀಚೆಗೆ ಹೈಕಮಾಂಡ್ ಪ್ರಮೋದ್ ಸಾವಂತ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಒಪ್ಪಿಗೆ ಸೂಚಿಸಿದ್ದು, 23ರಂದು ಮುಖ್ಯಮಂತ್ರಿ ಸೇರಿ ಹಲವು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ’ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ್ ಶೇಟ್ ತನವಡೆ ಮಾಹಿತಿ ನೀಡಿ, ‘ಕೇಂದ್ರೀಯ ವೀಕ್ಷಕರಾದ ನರೇಂದ್ರ ಸಿಂಗ್ ತೋಮರ್ ಮತ್ತು ಎಲ್. ಮುರುಗನ್ ಬುಧವಾರ ಗೋವಾ ತಲುಪಲಿದ್ದು ಅಂದೇ ಔಪಚಾರಿಕವಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ’ ಎಂದು ತಿಳಿಸಿದ್ದಾರೆ.ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಪಕ್ಷೇತರರು, ಎಂಜಿಪಿ ಬೆಂಬಲವೂ ಪಕ್ಷಕ್ಕಿದೆ.
ಗೋವಾ ಸರ್ಕಾರ ರಚನೆಯಲ್ಲಿ ವಿಳಂಬ, ಕಾಂಗ್ರೆಸ್ ನಡೆಯಿಂದ ಬಿಜೆಪಿಗೆ ಶಾಕ್?
ಮತ್ತೆ ಬಿಜೆಪಿ ಅಧಿಕಾರಕ್ಕೇರಿಸಿದ ಸಾವಂತ್
ಗೋವಾದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಸಿಎಂ ಪ್ರಮೋದ್ ಸಾವಂತ್ ಯಶಸ್ವಿಯಾಗಿದ್ದಾರೆ. 2017ರಲ್ಲಿ ಮನೋಹರ್ ಪರ್ರಿಕ್ಕರ್ ಸರ್ಕಾರ ರಚನೆ ವೇಳೆ ಗೋವಾ ವಿಧಾನಸಭೆಯ ಸ್ಪೀಕರ್ ಆಗಿದ್ದ ಪ್ರಮೋದ್ ಸಾವಂತ್, 2019ರ ಮಾಚ್‌ರ್‍ನಲ್ಲಿ ಪರ್ರಿಕ್ಕರ್ ನಿಧನದ ನಂತರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಮೂಲತಃ ಆಯುರ್ವೇದ ವೈದ್ಯರಾಗಿರುವ 48 ವರ್ಷದ ಡಾ.ಸಾವಂತ್ ಆರ್‌ಎಸ್‌ಎಸ್ ಕಾರ್ಯಕರ್ತರೂ ಹೌದು. ಸಂಖಾಲಿಮ್ ಕ್ಷೇತ್ರದಿಂದ 2012ರಿಂದ ಸತತವಾಗಿ ಗೆಲ್ಲುತ್ತಿರುವ ಸಾವಂತ್ ಇದೀಗ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ.
4 ರಾಜ್ಯಗಳ ಸಂಪುಟ ರಚನೆಗೆಸ್ವತಃ ಮೋದಿ ಮಾಸ್ಟರ್‌ಪ್ಲಾನ್
ಇತ್ತೀಚಿನ ಪಂಚರಾಜ್ಯ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಮರಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಇದೀಗ ಸಚಿವರ ಆಯ್ಕೆಗೆ ಭವಿಷ್ಯದ ಮಾಸ್ಟರ್ ಪ್ಲಾನ್ ಹೆಣೆದಿದೆ. 2024ರಲ್ಲೂ ಕೇಂದ್ರದಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವಂತಾಗಬೇಕು ಎಂಬ ಉದ್ದೇಶದಿಂದ ಯುವ ನಾಯಕರಿಗೆ ಆದ್ಯತೆ ನೀಡುವುದೂ ಸೇರಿದಂತೆ 4 ರಾಜ್ಯಗಳ ಸಚಿವ ಸಂಪುಟ ರಚನೆಯನ್ನು ಬಹಳ ಲೆಕ್ಕಾಚಾರದಿಂದ ಮಾಡಲು ಯೋಜಿಸಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಇದಕ್ಕೆ ರೂಪುರೇಷೆಗಳನ್ನು ಹಾಕಿಕೊಟ್ಟಿದ್ದು, ಅದರಂತೆಯೇ ಪ್ರಕ್ರಿಯೆ ಆರಂಭವಾಗಿದೆ ಎಂದು ರಾಷ್ಟ್ರಮಟ್ಟದ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
Election Result ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜೀನಾಮೆ, ಮುಂದಿನ ಸಿಎಂ ಯಾರು?
ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರದಲ್ಲಿ ನೂತನ ಸಚಿವರ ಆಯ್ಕೆ ವೇಳೆ ಜಾತಿ, ವಲಯವಾರು ಪ್ರಾತಿನಿಧ್ಯ, ಎಸ್‌ಸಿ/ಎಸ್‌ಟಿ, ಒಬಿಸಿಗೆ ಪ್ರಾತಿನಿಧ್ಯ, ಮಹಿಳೆಯರು, ಶೈಕ್ಷಣಿಕ ಹಿನ್ನೆಲೆ ಮತ್ತು ವಿಶೇಷವಾಗಿ ಯುವ ಸಮೂಹವನ್ನು ಗಮನದಲ್ಲಿಟ್ಟುಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ಉತ್ತರಪ್ರದೇಶ, ಮಣಿಪುರ, ಉತ್ತರಾಖಂಡ ಮತ್ತು ಗೋವಾ ರಾಜ್ಯಗಳಲ್ಲಿ ಗೆದ್ದ ಎಲ್ಲಾ ಅಭ್ಯರ್ಥಿಗಳ ಪೂರ್ಣ ವಿವರ ರವಾನಿಸುವಂತೆ ದಿಲ್ಲಿ ನಾಯಕರು ನಾಲ್ಕೂ ರಾಜ್ಯಗಳ ಪಕ್ಷದ ಘಟಕಗಳಿಗೆ ಸೂಚಿಸಿದ್ದಾರೆ.
ಅದರಲ್ಲೂ, ‘ಸಂಪುಟಕ್ಕೆ ಯುವಕರ ಆಯ್ಕೆ ವೇಳೆ ಮುಂದಿನ 25 ವರ್ಷದಲ್ಲಿ ಅವರು ರಾಜ್ಯದಲ್ಲಿ ಪಕ್ಷದ ಹೊಸ ನಾಯಕತ್ವ ಒದಗಿಸುವಂಥ ಶಕ್ತಿ ಹೊಂದಿರಬೇಕು. ಅಂಥವರಿಗೆ ಆದ್ಯತೆ ನೀಡಬೇಕು’ ಎಂದು ಇತ್ತೀಚೆಗೆ ಈ ಕುರಿತು ನಡೆದ ಸಭೆಯಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸಂಪುಟಕ್ಕೂ ಇಂಥದೇ ಸೂತ್ರ?
ಅನೇಕ ದಿನಗಳಿಂದ ಸದ್ದು ಮಾಡುತ್ತಿರುವ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವೇಳೆಯೂ ಹೊಸ ಮುಖಗಳು, ಭವಿಷ್ಯದ ನಾಯಕರಾಗಬಲ್ಲವರಿಗೆ ಮಣೆ ಹಾಕುವ ಮೂಲಕ ಬಿಜೆಪಿ ಹೈಕಮಾಂಡ್ ದೂರದೃಷ್ಟಿಯ ಸೂತ್ರ ಅಳವಡಿಸಿಕೊಳ್ಳುತ್ತದೆಯೇ ಎಂಬ ಕುತೂಹಲ ಗರಿಗೆದರಿದೆ. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಅದಕ್ಕಾಗಿ ಪಕ್ಷ ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ. ಹಾಲಿ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಮಾಸಾಂತ್ಯಕ್ಕೆ ಅದು ಮುಕ್ತಾಯಗೊಳ್ಳಲಿದೆ. ಆ ನಂತರ ಸಂಪುಟ ಕಸರತ್ತು ಚುರುಕಾಗುವ ನಿರೀಕ್ಷೆ ಇದ್ದು, ಕೆಲ ಹಿರಿಯರನ್ನು ಕೈಬಿಡುವ ಸಾಧ್ಯತೆ ಬಗ್ಗೆ ಈಗಾಗಲೇ ಗುಸುಗುಸು ದಟ್ಟವಾಗಿದೆ.
