ಮುಂಬೈ(ನ.27): ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಲ್ಲಿ ವಿಫಲವಾಗಿರುವ ಬಿಜೆಪಿಯಲ್ಲಿ ಇದೀಗ ಅಸಮಾಧಾನದ ಬೇಗುದಿ ಹೊಗೆಯಾಡುತ್ತಿದೆ. ಸರ್ಕಾರ ರಚಿಸಲು ಎನ್‌ಸಿಪಿ ಯ ಅಜಿತ್ ಪವಾರ್ ಬೆಂಬಲ ಪಡೆದಿದ್ದಕ್ಕೆ ಕೆಲವು ಬಿಜೆಪಿ ನಾಯಕರು ಅಸಮಾಧಾನ ಹೊರಗೆಡವಿದ್ದಾರೆ.

ಕೇವಲ ಸರ್ಕಾರ ರಚಿಸುವ ಏಕೈಕ ಉದ್ದೇಶದಿಂಧ ಭ್ರಷ್ಟಾಚಾರ ಆರೋಪ ಹೊತ್ತಿರುವ ಅಜಿತ್ ಪವಾರ್ ಬೆಂಬಲ ಪಡೆದಿದ್ದು ಸರಿಯಲ್ಲ ಎಂದು ಬಿಜೆಪಿ ನಾಯಕ ಏಕನಾಥ್ ಖಡ್ಸೆ ಅಭಿಪ್ರಾಯಪಟ್ಟಿದ್ದಾರೆ.

'ಮಂತ್ರಾಲಯದ 6ನೇ ಮಹಡಿಯ ಸೂರ್ಯಯಾನ ದೆಹಲಿಯಲ್ಲಿ ಲ್ಯಾಂಡ್ ಆಗಲಿದೆ'!

ಯಾರ ವಿರುದ್ಧ ದೇವೇಂದ್ರ ಫಡ್ನವೀಸ್ 2014ರಲ್ಲಿ ಭ್ರಷ್ಟಚಾರದ ತನಿಖೆಗೆ ಆದೇಶಿಸಿದ್ದರೋ, ಅವರೊಂದಿಗೆ ಸೇರಿ 2019 ರಲ್ಲಿ ಸರ್ಕಾರ ರಚಿಸಲು ಮುಂದಾಗಿದ್ದು ವಿಪರ್ಯಾಸ ಎಂದು ಖಡ್ಸೆ ಹರಿಹಾಯ್ದಿದ್ದಾರೆ.

ಅಲ್ಲದೇ ಅಜಿತ್ ಪವಾರ್ ಅವರನ್ನು ನಂಬಿದ್ದು ಕೂಡ ದೇವೇಂದ್ರ ಫಡ್ನವೀಸ್ ಅವರ ಪ್ರಮಾದ ಎಂದು ಖಡ್ಸೆ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಗೆ ಸೆಟ್ ಬ್ಯಾಕ್: ರಾಜೀನಾಮೆ ನೀಡಿ ಅಜಿತ್ ಪವಾರ್ ಕಮ್ ಬ್ಯಾಕ್!

ವಿಪಕ್ಷದಲ್ಲಿ ಕುಳಿತರೂ ಪರವಾಗಿಲ್ಲ, ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳದ ನಡೆಯನ್ನು ರಾಜ್ಯ ಬಿಜೆಪಿ ನಾಯಕರು ಪ್ರದರ್ಶಿಸಬೇಕಿತ್ತು ಎಂದು ಖಡ್ಸೆ ಸ್ವಪಕ್ಷೀಯ ನಾಯಕರ ವಿರುದ್ಧ ಕೆಂಡ ಕಾರಿದ್ದಾರೆ.