ರಿಷಿ ಸುನಕ್ ಬದಲು ಅಶಿಶ್ ನೆಹ್ರಾ ಫೋಟೋ ಹಾಕಿ ಅಭಿನಂದಿಸಿದ ಬಿಜೆಪಿ ಕಾರ್ಯದರ್ಶಿ!
ಬ್ರಿಟನ್ ಪ್ರಧಾನಿಯಾಗಿ ಭಾರತೀಯ ಸಂಜಾತ ಹಾಗೂ ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಪದಗ್ರಹಣ ಮಾಡಿದ್ದಾರೆ. ರಿಷಿ ಸುನಕ್ ಹಾಗೂ ಟೀಮ್ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ನೋಡೋಕೆ ಒಂದೇ ರೀತಿಯಲ್ಲಿ ಕಾಣ್ತಾರೆ ಅನ್ನೋದು ನಿಜ. ಆದರೆ, ಬಿಜೆಪಿಯ ನಾಯಕರೊಬ್ಬರು ರಿಷಿ ಸುನಕ್‌ಗೆ ಅಭಿನಂದಿಸುವ ಭರದಲ್ಲಿ ಆಶಿಶ್ ನೆಹ್ರಾ ಅವರ ಫೋಟೋ ಹಾಕಿದ್ದಾರೆ.
ಬೆಂಗಳೂರು (ಅ. 25): ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್‌ನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬ್ರಿಟನ್‌ನ ಜನತೆಯೊಂದಿಗೆ ಭಾರತೀಯರು ಕೂಡ ಅವರಿಗೆ ಅಭಿನಂದನೆಗಳನ್ನು ಹೇಳುತ್ತಿದ್ದಾರೆ. ಇನ್ನು ಟ್ವಟರ್‌ನಲ್ಲಿ ರಿಷಿ ಸುನಕ್ ಜೊತೆ ಟೀಮ್ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ಕೂಡ ಟ್ರೆಂಡ್ ಆಗುತ್ತಿದ್ದರು. ಅದಕ್ಕೆ ಕಾರಣವೂ ಇದೆ. ರಿಷಿ ಸುನಕ್ ಹಾಗೂ ಆಶಿಶ್ ನೆಹ್ರಾ ಬಹುತೇಕ ಒಂದೇ ರೀತಿಯಲ್ಲಿ ಕಾಣುತ್ತಾರೆ. ಅದೇ ಅರ್ಥದಲ್ಲಿ ಸಾಕಷ್ಟು ತಮಾಷೆಯ ಟ್ವೀಟ್‌ಗಳು ಬರುತ್ತಿದ್ದವು. ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಹಾಗೂ ಪ್ರಧಾನಿ ಮೋದಿ ಚರ್ಚೆ ಮಾಡುತ್ತಿದ್ದ ಚಿತ್ರವನ್ನು ಎಡಿಟ್ ಮಾಡಿರುವ ವ್ಯಕ್ತಿಗಳು, ಕ್ಯಾಮರೂನ್ ಮುಖ ಇದ್ದಲ್ಲಿ ಆಶಿಶ್ ನೆಹ್ರಾ ಮುಖವಿಟ್ಟು, ಈಗಾಗಲೇ ರಿಷಿ ಸುನಕ್ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದಾರೆ ಎಂದೆಲ್ಲಾ ತಮಾಷೆ ಮಾಡಿದ್ದರು. ಜನರು ಕೂಡ ಈ ತಮಾಷೆಯನ್ನು ಎಂಜಾಯ್ ಮಾಡಿದ್ದರು. ರೋಜರ್ ಫೆಡರರ್-ಅರ್ಬಾಜ್ ಖಾನ್, ಟ್ವಿಂಕಲ್ ಖನ್ನಾ-ರವೀನಾ ಟಂಡನ್ ಕೂಡ ನೋಡೋಕೆ ಒಂದೇ ರೀತಿ ಇದ್ದಾರೆ. ಅದೇ ರೀತಿಯಲ್ಲಿ ಇದು ಹೊಸ ತರದ ಟ್ರೆಂಡ್‌ಅನ್ನು ಎಂಜಾಯ್ ಮಾಡಿದ್ದರು. ಆದರೆ, ಬಿಜೆಪಿಯ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ರಿಷಿ ಸುನಕ್ ಬದಲು ಎಡಿಟ್ ಆಗಿರುವ ಆಶಿಶ್ ನೆಹ್ರಾ ಚಿತ್ರವನ್ನೇ ಪ್ರಕಟಿಸಿ ಶುಭ ಕೋರಿದ್ದು ಪಕ್ಷಕ್ಕೆ ಮುಜುಗರ ತಂದಿದೆ.
ಇನ್ನೂ ತಮಾಷೆಯ ವಿಚಾರವೆಂದರೆ, ಅವರು ಒಂದಲ್ಲ ಎರಡು ಬಾರಿ ಇದೇ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಿರ್ದೇಶಕ ಡಾ. ಪಾರ್ಥಸಾರಥಿ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಅವರನ್ನು ಟ್ವೀಟ್‌ನಲ್ಲಿ ಅಭಿನಂದಿಸಿದ್ದಾರೆ. ಒಟ್ಟಿಗೆ ನಾಲ್ಕು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ 4ನೇ ಚಿತ್ರವು ಆಶಿಶ್ ನೆಹ್ರಾ ಎಡಿಟೆಡ್ ಚಿತ್ರವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಡಾ.ಪಾರ್ಥಸಾರಥಿ, 'ಈ ದೀಪಾವಳಿ ನಿಜಕ್ಕೂ ವಿಶೇಷವಾಗಿದೆ. ಅಯೋಧ್ಯೆಯಲ್ಲಿ ದೀಪೋತ್ಸವದ ಇತಿಹಾಸ ಮಾತ್ರವಲ್ಲದೆ ಇಂಗ್ಲೆಂಡಿನಲ್ಲೂ ಭಾರತೀಯ ರಿಷಿ ಸುನಕ್ ಇತಿಹಾಸ ನಿರ್ಮಿಸಿದ್ದಾರೆ. ರಿಷಿ ಸುನಕ್ ಇಂಗ್ಲೆಂಡ್‌ನ ಮುಂದಿನ ಪ್ರಧಾನಿಯಾಗಲಿದ್ದಾರೆ. ಶುಭಾಶಯಗಳು ಮತ್ತು ಅಭಿನಂದನೆಗಳು' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಡಾ.ಪಾರ್ಥಸಾರಥಿ ಅವರ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು, ಜನರು ಇದನ್ನೂ ಆನಂದಿಸುತ್ತಿದ್ದಾರೆ. ನೆಹ್ರಾ ಅವರ ಚಿತ್ರವನ್ನು ಸಾಮಾನ್ಯ ಜನರು ತಮಾಷೆಗಾಗಿ ಹಾಕುತ್ತಿದ್ದರು, ನೇತಾಜಿ ಅದನ್ನೇ ಹೆಕ್ಕಿ ಪೋಸ್ಟ್ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಟ್ವೀಟ್ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ. ಪಾರ್ಥಸಾರಥಿಯವರು ನಿಜವಾಗಿಯೂ ಇದನ್ನು ಮಾಡಿದ್ದಾರೆ ಎಂದು ನಂಬೋಕು ಸಾಧ್ಯವಿಲ್ಲ ಎಂದು ಕೆಲವರು ಬರೆದಿದ್ದಾರೆ.
ಬ್ರಿಟನ್ ಮುಂದಿನ ಪ್ರಧಾನಿ ರಿಷಿ ಸುನಕ್ ಜೊತೆ ಟ್ರೆಂಡ್ ಆದ ಕ್ರಿಕೆಟಿಗ ಆಶಿಶ್ ನೆಹ್ರಾ!
ಇನ್ನೊಂದು ವಿಷಯ ಏನೆಂದರೆ, ಪಾರ್ಥಸಾರಥಿ ಅವರು ಪ್ರಧಾನಿ ಮೋದಿಯವರೊಂದಿಗೆ ಹಂಚಿಕೊಂಡ ನೆಹ್ರಾ ಅವರ ಚಿತ್ರವೂ ಫೋಟೋಶಾಪ್ ಆಗಿದೆ. ಈ ಫೋಟೋದಲ್ಲಿ ಪ್ರಧಾನಿ ಮೋದಿ ಜೊತೆ ನೆಹ್ರಾ ಅಲ್ಲ, ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಇದ್ದಿದ್ದಾಗಿದೆ. ಚಿತ್ರವು 12 ನವೆಂಬರ್ 2015 ರದ್ದಾಗಿದೆ. ಆ ಸಮಯದಲ್ಲಿ ಮೋದಿ 3 ದಿನಗಳ ಕಾಲ ಬ್ರಿಟನ್ ಪ್ರವಾಸಕ್ಕೆ ಹೋಗಿದ್ದರು. ಕ್ಯಾಮರೂನ್ ಮುಖಕ್ಕೆ ನೆಹ್ರಾ ಮುಖವನ್ನು ಅಂಟಿಸಿ ಯಾರೋ ಅದ್ಭುತವಾಗಿ ಫೋಟೋಶಾಪ್ ಮಾಡಿದ್ದಾರೆ.
ರಾಜ ಚಾರ್ಲ್ಸ್ ಭೇಟಿಯಾದ ರಿಷಿ ಸುನಕ್, ಬ್ರಿಟನ್ ಪ್ರಧಾನಿಯಾಗಿ ಪದಗ್ರಹಣ!
ಪಾರ್ಥಸಾರಥಿ ಅವರ ಟ್ವೀಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಹಾಗೂ ಲೈಕ್‌ಗಳು ಬಂದಿದ್ದು, 'ಅವರು ತಮಾಷೆಗಾಗಗಿ ಮಾಡಿದ್ದಾರೋ ಇಲ್ಲವೇ ಗಂಭೀರವಾಗಿಯೇ ಇದನ್ನು ಪೋಸ್ಟ್ ಮಾಡಿದ್ದಾರೋ ಎನ್ನುವುದು ತಿಳಿಯುತ್ತಿಲ್ಲವಲ್ಲ' ಎಂದು ಬರೆದಿದ್ದಾರೆ. ಇನ್ನೂ ಅಚ್ಚರಿ ಎಂದರೆ, ಈ ಟ್ವೀಟ್ ಮಾಡಿ ಅಂದಾಜು ಒಂದು ದಿನವಾಗಿದ್ದರೂ ಅವರು ಡಿಲೀಟ್ ಮಾಡುವ ಗೋಜಿಗೆ ಹೋಗಿಲ್ಲ.