ಲಸಿಕೆ ರಾಜಕೀಯ: ಮತ್ತೆ ಕಿಡಿ ಕಾರಿದ ರಾಹುಲ್: ನಿಮ್ಮ ಸಮಸ್ಯೆ ಏನೆಂದ ಬಿಜೆಪಿ!
* ಭಾರತದಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನ ಸಂಬಂಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನೆ
* ಕೇಂದ್ರದ ವಿರುದ್ಧ ಕಿಡಿ ಕಾರಿದ್ದ ರಾಹುಲ್ ಗಾಂಧಿ
* ರಾಹುಲ್ ಪ್ರಶ್ನೆಗೆ ಬಿಜೆಪಿ ತಿರುಗೇಟು
ನವದೆಹಲಿ(ಜು.24): ಭಾರತದಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನ ಸಂಬಂಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಿರಂತರವಾಗಿ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಶನಿವಾರ ಈ ಸಂಬಂಧ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ 'ಇದರಲ್ಲಿ, ಜನರ ಜೀವನ ಸರತಿ ಸಾಲಿನಲ್ಲಿದೆ. ಕೇಂದ್ರ ಸರ್ಕಾರ ಯಾವುದೇ ಸಮಯ ಮಿತಿಯನ್ನು ಒಪ್ಪಿಕೊಳ್ಳುವುದಿಲ್ಲ. ಕೊಟ್ಟ ಮಾತನ್ನು ತಪ್ಪುವುದಕ್ಕೆ ಇದು ಸೂಕ್ತ ಉದಾಹರಣೆ ಎಂದಿದ್ದಾರೆ.
ಬಿಜೆಪಿ ಉತ್ತರ
ರಾಹುಲ್ ಗಾಂಧಿಯ ಈ ಟ್ವೀಟ್‌ಗೆ ಉತ್ತರಿಸಿರುವ ಬಿಜೆಪಿ ನಾಯಕ, ಮಾಹಿತಿ ಮತ್ತು ಐಟಿ ಇಲಾಖೆಯ ರಾಷ್ಟ್ರೀಯ ಸಹ-ಉಸ್ತುವಾರಿ ಅಮಿತ್ ಮಾಳವೀಯ ಅವರು ಲಸಿಕೆ ಕುರಿತು ಸರ್ಕಾರ ಸಂಸತ್ತಿನಲ್ಲಿ ನೀಡಿದ ಉತ್ತರದ ಪ್ರತಿಯನ್ನು ಟ್ವೀಟ್ ಮಾಡಿ ರಾಹುಲ್, ನೀವು ಓದಬಹುದೇ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ "2021ರೊಳಗೆ 18ವರ್ಷದ ಒಳಗಿನ ಎಲ್ಲರಿಗೂ ಲಸಿಕೆ ಹಾಕುವ ನಿರೀಕ್ಷೆಯಿದೆ." ಆರೋಗ್ಯ ಸಚಿವರು ಸಂಸತ್ತಿನಲ್ಲಿ ನೀಡಿದ ಪ್ರತಿಕ್ರಿಯೆಯ ಭಾಗ ಇದು. ನೀವು ಅಧಿವೇಶನಕ್ಕೆ ಹಾಜರಾಗಲಿಲ್ಲ ಅಥವಾ ನಿಮಗೆ ಅರ್ಥವಾಗಲಿಲ್ಲವೇ? ನಿಜವಾದ ಸಮಸ್ಯೆ ಏನು? ಎಂದೂ ಪ್ರಶ್ನಿಸಿದ್ದಾರೆ.
ಪ್ರಶ್ನೆ ಕೇಳಿದ್ದ ರಾಹುಲ್ ಗಾಂಧಿ ಹಾಗೂ ತೃಣಮೂಲ ಕಾಂಗ್ರೆಸ್
ರಾಹುಲ್ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ಮುಖಂಡ ಮಾಲಾ ರೈ ಅವರು 2021 ರ ಅಂತ್ಯದ ವೇಳೆಗೆ ಎಲ್ಲ ವಯಸ್ಕರಿಗೆ ಲಸಿಕೆ ಹಾಕಲು ಸರ್ಕಾರಕ್ಕೆ ಸಾಧ್ಯವಾಗುತ್ತದೆಯೇ ಎಂದು ಲೋಕಸಭೆಯಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಲಿಖಿತ ಉತ್ತರ ನೀಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಡಾ.ಭಾರ್ತಿ ಪ್ರವೀಣ್ ಪವಾರ್ ಅವರು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಫಲಾನುಭವಿಗಳ ಲಸಿಕೆ ಅಭಿಯಾನ 2021 ರ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ. ಆಗಸ್ಟ್ 2021 ಮತ್ತು ಡಿಸೆಂಬರ್ 2021 ರ ನಡುವೆ ಒಟ್ಟು 135 ಕೋಟಿ ಡೋಸ್ ಕೋವಿಡ್ -19 ಲಸಿಕೆಗಳು ಲಭ್ಯವಿವೆ ಎಂದು ಅಂದಾಜಿಸಲಾಗಿದೆ.