* ನಾರ್ತ್ ಈಸ್ಟ್‌ ಡೆಮಾಕ್ರೆಟಿಕ್‌ ಅಲೈಯನ್ಸ್‌ನ ಸಮನ್ವಯಕಾರ, ಬಿಜೆಪಿ ನಾಯಕ ಬಿಸ್ವಾ ಅಸ್ಸಾಂನ ನೂತನ ಸಿಎಂ* ನೂತನ ಮುಖ್ಯಮಂತ್ರಿಗಳಿಗೆ ಅಧಿಕಾರ ಗೌಪ್ಯತೆಯ ಪ್ರತಿಜ್ಞಾ ವಿಧಿ* 2014ರಲ್ಲಿ ಕೈ ಪಾಳಯ ಬಿಟ್ಟು, ಬಿಜೆಪಿಗೆ ಸೇರಿದ್ದ ಬಿಸ್ವಾ

ಗುವಾಹಟಿ(ಮೇ.10): ನಾರ್ತ್ ಈಸ್ಟ್‌ ಡೆಮಾಕ್ರೆಟಿಕ್‌ ಅಲೈಯನ್ಸ್‌ನ ಸಮನ್ವಯಕಾರ, ಬಿಜೆಪಿ ನಾಯಕ ಹಿಮಂತ ಬಿಸ್ವ ಶರ್ಮಾ, ಅಸ್ಸಾಂನ ನೂನತ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಜಗದೀಶ್ ಮುಖಿ ಅವರು ನೂತನ ಮುಖ್ಯಮಂತ್ರಿಗಳಿಗೆ ಅಧಿಕಾರ ಗೌಪ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ತ್ರಿಪುರ ಮುಖ್ಯಮಂತ್ರಿ ಬಿಪ್ಲಾಬ್ ದೇವ್, ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ, ಮಣಿಪುರ ಸಿಎಂ ಎನ್. ಬಿರೆನ್ ಸಿಂಗ್ ಮತ್ತು ನಾಗಾಲ್ಯಾಂಡ್ ಸಿಎಂ ನೀಫಿಯು ರಿಯೊ ಹಾಗೂ ಇತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕಾಂಗ್ರೆಸ್‌ ಪಕ್ಷದ ನಾಯಕರಾಗಿದ್ದ ಹಿಮಂತ 2014ರಲ್ಲಿ ಕೈ ಪಾಳಯ ಬಿಟ್ಟು, ಬಿಜೆಪಿಗೆ ಸೇರಿದ್ದರು. 

ಅಸ್ಸಾಂ ನೂತನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮಾ ಆಯ್ಕೆ!

ವಿದ್ಯಾರ್ಥಿ ನಾಯಕ:

ಎಲ್‌ಎಲ್‌ಬಿ ಮತ್ತು ಪಿಎಚ್‌ಡಿ ಪದವೀಧರರಾದ ಶರ್ಮಾ, ಆರಂಭದಲ್ಲಿ ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡವರು. ಆಲ್‌ ಅಸ್ಸಾಂ ಸ್ಟೂಡೆಂಟ್ಸ್‌ ಯೂನಿಯನ್‌ ಮೂಲಕ ರಾಜಕೀಯ ಪ್ರವೇಶಿಸಿದ ಶರ್ಮಾ, ಅದರಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. 1996ರಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಸೇರಿದ ಜಲುಕಬ್ರಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ ಸೋಲುಕಂಡಿದ್ದರು. ಆದರೆ ಮುಂದೆ 2001, 2006, 2011ರಲ್ಲಿ ಸತತವಾಗಿ ಇದೇ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. 2002ರಲ್ಲಿ ಕೃಷಿ ಖಾತೆ ರಾಜ್ಯ ಸಚಿವರಾಗಿ, 2006ರಲ್ಲಿ ಆರೋಗ್ಯ ಖಾತೆ, 2011ರಲ್ಲಿ ಆರೋಗ್ಯ ಮತ್ತು ಶಿಕ್ಷಾಣ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದರು.

2014ರಲ್ಲಿ ಅಂದಿನ ಸಿಎಂ ತರುಣ್‌ ಗೊಗೋಯ್‌ ವಿರುದ್ಧ ಬಂಡೆದ್ದ ಶರ್ಮಾ, ಶಾಸಕ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದರು. ಜೊತೆಗೆ ತಮ್ಮ 28 ಬೆಂಬಲಿಗರ ರಾಜೀನಾಮೆಯನ್ನೂ ಕೊಡಿಸಿದರು. ನಂತರ 2015ರಲ್ಲಿ ಬಿಜೆಪಿ ಸೇರಿ 2016ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದರು. ಆಗ ಸಿಎಂ ರೇಸ್‌ನಲ್ಲಿ ಇದ್ದರೂ, ಬಿಜೆಪಿ ಹೈಕಮಾಂಡರ್‌ ಸೋನೋವಾಲ್‌ ಅವರಿಗೆ ಮಣೆ ಹಾಕಿ, ಶರ್ಮಾಗೆ ಮತ್ತೆ ಆರೋಗ್ಯ ಖಾತೆ ದಯಪಾಲಿಸಿತ್ತು. ಆದರೆ ಇದೀಗ 5 ವರ್ಷದ ಬಳಿಕ ಅವರಿಗೆ ಸಿಎಂ ಹುದ್ದೆ ಒಲಿದುಬಂದಿದೆ.