ನವದೆಹಲಿ(ಜ.31): ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮತ್ತು 6 ಪತ್ರಕರ್ತರ ವಿರುದ್ಧ ಎಫ್‌ಐಆರ್‌ ದಾಖಲಾಗಿರುವ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪ್ರಧಾನ ಕಾರ‍್ಯದರ್ಶಿ ಪ್ರಿಯಾಂಕಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮತ್ತು ಆಡಳಿತಾರೂಢ ಬಿಜೆಪಿ ಪ್ರಜಾಪ್ರಭುತ್ವದ ಘನತೆಗೆ ಮಸಿ ಬಳಿಯುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಿಯಾಂಕಾ ಗಾಂಧಿ, ‘ಜನಪ್ರತಿನಿಧಿಗಳು ಮತ್ತು ಪತ್ರಕರ್ತರ ವಿರುದ್ಧ ಬಿಜೆಪಿ ಎಫ್‌ಐಆರ್‌ ದಾಖಲಿಸಿರುವುದು ತೀರಾ ಆತಂಕಕಾರಿ. ಪ್ರಜಾಪ್ರಭುತ್ವವನ್ನು ಗೌರವಿಸುವುದು ಸರ್ಕಾರದ ವಿಶೇಷಾಧಿಕಾರ ಅಲ್ಲ ಅದರ ಜವಾಬ್ದಾರಿ. ಆದರೆ ಈಗಿನ ಭಯದ ವಾತಾವರಣ ಪ್ರಜಾಪ್ರಭುತ್ವಕ್ಕೆ ವಿಷ ಹಾಕಿದಂತಿದೆ’ ಎಂದು ಕಿಡಿಕಾರಿದ್ದಾರೆ.

ಗಣರಾಜ್ಯೋತ್ಸವದಂದು ರೈತರು ನಡೆಸಿದ ಟ್ರ್ಯಾಕ್ಟರ್‌ ರಾರ‍ಯಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಶಿ ತರೂರ್‌ ಮತ್ತು ರಾಜ್‌ದೀಪ್‌ ಸರದೇಸಾಯಿ ಸೇರಿದಂತೆ 6 ಜನ ಪತ್ರಕರ್ತರ ವಿರುದ್ಧ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶ ಪೊಲೀಸರು ದೇಶದ್ರೋಹ ಸೇರಿದಂತೆ ಹಲವು ಪ್ರಕರಣ ದಾಖಲಿಸಿದ್ದಾರೆ