ಬಿಜೆಪಿಯಲ್ಲಿ ತಳಮಳಗಳು ಶುರುವಾಗಿದೆ. ಇತ್ತೀಚೆಗೆ ರಾಜ್ಯಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದಿಂದ ಗೆದ್ದ ಹರ್ದೀಪ್ ಸಿಂಗ್ ಪುರಿ ಇದೀಗ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪುರಿ ರಾಜೀನಾಮೆ ಅಂಗೀಕರಿಸಲಾಗಿದೆ.
ನವದೆಹಲಿ (ನ.15) ಕೇಂದ್ರ ಬಿಜೆಪಿಯಲ್ಲಿ ಕೋಲಾಹಲ ಶುರುವಾಗಿದೆ. ಇತ್ತೀಚೆಗಷ್ಟೇ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಗೆಲುವು ಕಂಡಿದ್ದ ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ದಿಢೀರ್ ರಾಜೀನಾಮೆ ನೀಡಿದ್ದಾರೆ. ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಹರ್ದೀಪ್ ಸಿಂಗ್ ಪುರಿ ತಮ್ಮ ರಾಜ್ಯಸಭಾ ಸಂಸದ ಸ್ಥಾನಕ್ಕೆ ನೀಡಿದ ರಾಜೀನಾಮೆ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಹರ್ದೀಪ್ ಸಿಂಗ್ ಪುರಿ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.
ಪುರಿ ರಾಜೀನಾಮೆಯಿಂದ ಬಿಜೆಪಿಯಲ್ಲಿ ತಳಮಳ
ರಾಜ್ಯ ಸಭಾ ಚುನಾವಣೆಯಲ್ಲಿ ಹರ್ದೀಪ್ ಸಿಂಗ್ ಪುರಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಪ್ರತಿಸ್ಪರ್ಧಿಗಳಿಬ್ಬರ ನಾಮಪತ್ರ ತಿರಸ್ಕೃತಗೊಂಡಿದ್ದ ಕಾರಣ ಯಾವುದೇ ಅಡ್ಡಿ ಆತಂಕವಿಲ್ಲದೆ ಗೆಲುವು ದಾಖಲಾಗಿತ್ತು. ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ರಾಜ್ಯಸಭಾ ಸಂಸದ ಸ್ಥಾನಕ್ಕೆ ನೀಡಿದ ರಾಜೀನಾಮೆಯಿಂದ ಇದೀಗ ಬಿಜೆಪಿಯಲ್ಲಿ ಭಾರಿ ಚರ್ಚೆಗಳು ಶುರುವಾಗಿದೆ. ಪುರಿಯಿಂದ ತೆರವಾಗಿರುವ ಸ್ಥಾನಕ್ಕೆ ಇದೀಗ ಪೈಪೋಟಿಗಳು ಶುರುವಾಗಿದೆ.
ವಿದೇಶಾಂಗ ಕಾರ್ಯದರ್ಶಿಯಿಂದ ಸಚಿವ
ಭಾರತೀಯ ವಿದೇಶಾಂಗ ಕಾರ್ಯದರ್ಶಿಯಾಗಿ ವೃತ್ತಿ ಆರಂಭಿಸಿದ ಹರ್ದೀಪ್ ಸಿಂಗ್ ಪುರಿ ಬ್ರೆಜಿಲ್ ರಾಯಭಾರಿಯಾಗಿ, ಶ್ರೀಲಂಕಾ, ಯುಕೆ ಹೈಕಮಿಶನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2014ರಲ್ಲಿ ಹರ್ದೀಪ್ ಸಿಂಗ್ ಪುರಿ ಭಾರತೀಯ ಜನತಾ ಪಾರ್ಟಿ ಸೇರಿಕೊಂಡು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡರು. ರಾಷ್ಟ್ರೀಯ ಭದ್ರತಾ ವಿಚಾರದಲ್ಲಿ ಬಿಜೆಪಿ ತೆಗೆದುಕೊಂಡ ನಿರ್ಧಾರಗಳಿಂದ ಪ್ರೇರಿತವಾಗಿ ಹರ್ದೀಪ್ ಸಿಂಗ್ ಪುರಿ ಬಿಜೆಪಿ ಸೇರಿಕೊಂಡರು. 2017ರಲ್ಲಿ ವೆಂಕಯ್ಯ ನಾಯ್ಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಈ ವೆಂಕಯ್ಯ ನಾಯ್ಡು ಅವರಿಂದ ತೆರವಾದ ವಸತಿ ಹಾಗೂ ನಗರ ವ್ಯವಹಾರ ಸಚಿವರಾಗಿ ಹರ್ದೀಪ್ ಸಿಂಗ್ ಪುರಿ ಜವಾಬ್ದಾರಿ ವಹಿಸಿಕೊಂಡಿದ್ದರು.
ಅಮೃತರದಿಂದ ಸೋಲು ಕಂಡಿದ್ದ ಪುರಿ
ಬಳಿಕ ಸತತವಾಗಿ ಮೋದಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2019ರಲ್ಲಿ ಅಮೃತಸರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಹರ್ದೀಪ್ ಸಿಂಗ್ ಪುರಿ ಸೋಲು ಕಂಡಿದ್ದರು. ಕಾಂಗ್ರೆಸ್ನ ಗುರ್ಜೀತ್ ಸಿಂಗ್ ವಿರುದ್ದ ಸೋಲು ಕಂಡಿದ್ದರು.
ಹರ್ದೀಪ್ ಸಿಂಗ್ ಪುರಿ ರಾಜೀನಾಮೆಗೆ ಕಾರಣ ಸ್ಪಷ್ಟವಾಗಿಲ್ಲ. ದಿಢೀರ್ ರಾಜೀನಾಮೆ ನೀಡಿದ್ದು ಯಾಕೆ ಅನ್ನೋ ಪ್ರಶ್ನೆಗಳು ಎದುರಾಗಿದೆ. ಪಂಜಾಬ್ ಚುನಾವಣೆ ಜವಾಬ್ದಾರಿಗಳಿಂದ ಹರ್ದೀಪ್ ಸಿಂಗ್ ಪುರಿ ರಾಜೀನಾಮೆ ನೀಡಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಆದರೆ ಈ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಹೊರಬಂದಿಲ್ಲ.














