Asianet Suvarna News Asianet Suvarna News

ಚುನಾವಣೆ ಗೆಲ್ಲಲು ಬಿಜೆಪಿ 3 ಗುರಿ: ಯೋಗಿಗೆ ಪದೋನ್ನತಿ!

* ಡಿ.25ರೊಳಗೆ 10.4 ಲಕ್ಷ ಬೂತ್‌ ಸಮಿತಿಗಳ ಸ್ಥಾ​ನ

* 2022ರ ಏ.6ರೊಳಗೆ ಎಲ್ಲ ರಾಜ್ಯಗಳಲ್ಲಿ ‘ಪನ್ನಾ ಪ್ರಮುಖ್‌’ ನೇಮಕ

* 2022ರ ಮೇ ಒಳಗೆ ಮೋದಿ ಮನ್‌ ಕೀ ಬಾತ್‌ ಎಲ್ಲ ಬೂತ್‌ಗಳಲ್ಲಿ ಪ್ರಸಾರ

* ಪಂಚರಾಜ್ಯ, ಇತರೆಡೆ ಗೆಲ್ಲಲು ಬಿಜೆಪಿ 3 ಗುರಿ

BJP CMs party presidents discuss upcoming elections in 5 states at national executive meeting pod
Author
Bangalore, First Published Nov 8, 2021, 7:41 AM IST

ನವದೆಹಲಿ(ನ.08): ಮುಂಬರುವ ಪಂಚರಾಜ್ಯ ಚುನಾವಣೆಗಳನ್ನು ಗೆಲ್ಲಲು ಹಾಗೂ ಪಕ್ಷ ಎಲ್ಲಿ ದುರ್ಬಲ ಆಗಿದೆಯೋ ಅಲ್ಲಿ ಸಂಘಟನೆಗಳನ್ನು ಬಲಪಡಿಸಲು ಭಾನುವಾರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ (BJP national executive meeting) 3 ಪ್ರಮುಖ ಸಂಕಲ್ಪಗಳನ್ನು ಮಾಡಲಾಗಿದೆ. ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ನಾಯಕರು ಹಾಗೂ ಕಾರ್ಯಕರ್ತರಿಗೆ ಈ ಮೂರು ಗುರಿಗಳನ್ನು ಸಾಧಿಸುವ ಸೂಚನೆ ನೀಡಿದ್ದಾರೆ.

ಇದೇ ಡಿಸೆಂಬರ್‌ 25ರ ಒಳಗೆ ದೇಶದ ಎಲ್ಲ 10.4 ಲಕ್ಷ ಮತಗಟ್ಟೆಗಳಲ್ಲಿ ಬಿಜೆಪಿ ಬೂತ್‌ ಕಮಿಟಿ (BJP Booth Committee) ರಚನೆ ಆಗಬೇಕು. 2022ರ ಏ.6ರೊಳಗೆ ‘ಪನ್ನಾ ಪ್ರಮುಖ್‌’ (ಪ್ರತಿ ಬೂತ್‌ನಲ್ಲಿನ ಮತದಾರರ ಪಟ್ಟಿಯ ಉಸ್ತುವಾರಿಗಳು) ನೇಮಕ ಆಗಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್‌ ಕೀ ಬಾತ್‌’ ರೇಡಿಯೋ ಭಾಷಣವು ದೇಶದ ಪ್ರತಿ ಮತಗಟ್ಟೆವ್ಯಾಪ್ತಿಯಲ್ಲಿ ಪ್ರಸಾರ ಆಗಿ ಮತದಾರರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಕಾರ್ಯಕಾರಿಣಿ ಸಭೆಯಲ್ಲಿ ಗುರಿ ನೀಡಲಾಯಿತು ಎಂದು ಸಭೆಯ ಬಳಿಕ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಮಾಹಿತಿ ನೀಡಿದರು.

ಗುಜರಾತ್‌ನಲ್ಲಿ ಇದರ ಪ್ರಯೋಗ ನಡೆಸಲಾಗಿದ್ದು, ಬಹುತೇಕ ಯಶಸ್ವಿ ಆಗಿದೆ. ಇದನ್ನು ಉಳಿದ ಕಡೆ ವಿಸ್ತರಿಸಲಾಗುವುದು ಎಂದರು.

ಬಿಜೆಪಿಯಿಂದ ಸರ್ವಶ್ರೇಷ್ಠ ಫಲಿತಾಂಶದ ನಿರೀಕ್ಷೆ: ನಡ್ಡಾ

5 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡುವ ವಿಶ್ವಾಸವಿದ್ದು, ಸರ್ವಶ್ರೇಷ್ಠ ಫಲಿತಾಂಶ ಇನ್ನಷ್ಟೇ ಹೊರಬರಬೇಕಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ (BJP President JP Nadda)ಹೇಳಿದ್ದಾರೆ. ಈ ಮೂಲಕ ಪಂಚರಾಜ್ಯಗಳಲ್ಲಿ ಬಿಜೆಪಿ ಜಯಗಳಿಸಲಿದೆ ಎಂಬ ಪರೋಕ್ಷ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಮುಂದಿನ ಗುರಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು ಎಂದು ಸಭೆಯ ಬಳಿಕ ನಡ್ಡಾ ಭಾಷಣದ ಬಗ್ಗೆ ಸಚಿವ ಧರ್ಮೇಂದ್ರ ಪ್ರಧಾನ್‌ ವಿವರಿಸಿದರು.

ಇದೇ ವೇಳೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತಿದ್ದರೂ ಸಾಧನೆ ಕಡಿಮೆಯೇನಿಲ್ಲ ಎಂದು ಸಮರ್ಥಿಸಿಕೊಂಡ ನಡ್ಡಾ, ‘2014ರ ಲೋಕಸಭೆ ಚುನಾವಣೆ, 2016ರ ವಿಧಾನಸಭೆ ಹಾಗೂ 2019ರ ಲೋಕಸಭೆ ಚುನಾವಣೆ ಹಾಗೂ 2021ರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗಳಿಸಿದ ಸ್ಥಾನ ಹಾಗೂ ಮತ ಗಳಿಕೆಯನ್ನು ತುಲನೆ ಮಾಡಿ. ಬಿಜೆಪಿ ಆ ರಾಜ್ಯದಲ್ಲಿ ಹೇಗೆ ಬೆಳೆದಿದೆ ಎಂದು ಗೊತ್ತಾಗುತ್ತದೆ’ ಎಂದೂ ನಡ್ಡಾ ಹೇಳಿದರು.

ಸಿಎಂ ಯೋಗಿಗೆ ಪದೋನ್ನತಿ!

ನಿರ್ಣಯಗಳನ್ನು ಮಂಡಿಸುವ ಅವಕಾಶವನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಆಡಳಿತದ ಎಲ್ಲಾ ರಾಜ್ಯಗಳ ಸಿಎಂಗಳು ವಚ್ರ್ಯುವಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯೋಗಿ ಕೂಡಾ ಹಾಗೆಯೇ ಭಾಗಿಯಾಗುವುದು ನಿಗದಿಯಾಗಿತ್ತು. ಆದರೆ ಅಂತಿಮ ಹಂತದಲ್ಲಿ ಸಭೆಯಲ್ಲಿ ಭಾಗಿಯಾದ ಯೋಗಿಗೆ, ನಿರ್ಣಯಗಳನ್ನು ಮಂಡಿಸುವ ಅವಕಾಶ ನೀಡಲಾಯಿತು.

ಸಾಮಾನ್ಯವಾಗಿ ಪಕ್ಷದ ಹಿರಿಯ, ಪ್ರಮುಖ ನಾಯಕರಿಗೆ ಈ ಅವಕಾಶ ನೀಡಲಾಗುತ್ತದೆ. ಕಳೆದ 2 ಸಭೆಯಲ್ಲಿ ರಾಜ್‌ನಾಥ್‌ಸಿಂಗ್‌ ಹೀಗೆ ನಿರ್ಣಯ ಮಂಡಿಸಿದ್ದರು. ಆದರೆ ಇದೀಗ ಯೋಗಿಗೆ ಅವಕಾಶ ನೀಡಿರುವುದು, ಪಕ್ಷದಲ್ಲಿ ಅವರ ಪದೋನ್ನತಿಯ ಸಂಕೇತ ಎಂದೇ ಬಣ್ಣಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಕೋವಿಡ್‌ ನಿರ್ವಹಣೆ ಸೇರಿದಂತೆ ಹಲವು ವಿಷಯಗಳಲ್ಲಿ ಯೋಗಿ ಅವರನ್ನು ಬಹಿರಂಗವಾಗಿಯೇ ಹೊಗಳಿದ್ದರು.

ಕಾರ್ಯಕಾರಿಣಿ ನಿರ್ಣಯಗಳು

* ಪ್ರಧಾನಿ ಮೋದಿ ನಾಯಕತ್ವದಿಂದ ದೇಶ ಕೋವಿಡ್‌ ಅನ್ನು ಯಶಸ್ವಿಯಾಗಿ ನಿರ್ವಹಿಸಿದೆ.

* ಪಂಚರಾಜ್ಯ ಚುನಾವಣೆ ಪಕ್ಷದ ಸಾಧನೆಗೆ ಮೋದಿ ಶಕ್ತಿಯುತ ನಾಯಕತ್ವವೇ ಕಾರಣ

* ವಿಪಕ್ಷಗಳು ಅವಕಾಶವಾದಿತನ ಮತ್ತು ದ್ವೇಷ ರಾಜಕಾರಣ ಪ್ರದರ್ಶಿಸುತ್ತಿವೆ. ಇದು ಖಂಡನೀಯ

* ಬಂಗಾಳದಲ್ಲಿ ಚುನಾವಣೋತ್ತರ ಯೋಜಿತ ಹಿಂಸಾಚಾರ ನಡೆದಿದೆ. ಇದಕ್ಕೆ ಕಾನೂನಿನ ಮೂಲಕವೇ ಪರಿಹಾರ

* ಜಮ್ಮು-ಕಾಶ್ಮೀರದಲ್ಲಿನ ಬದಲಾವಣೆಯ ಶಕೆ ಆರಂಭವಾಗಿದೆ. ಅಲ್ಲದೆ ಶಾಂತಿ ಮತ್ತು ಅಭಿವೃದ್ಧಿ ಗರಿಗೆದರಿವೆ

* ಪೆಟ್ರೋಲ್‌, ಡೀಸೆಲ್‌ ತೆರಿಗೆ ಇಳಿಸುವ ಮೂಲಕ ಜನಸಾಮಾನ್ಯರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ

Follow Us:
Download App:
  • android
  • ios