ನವದೆಹಲಿ(ಮಾ.02): ಪ್ರಧಾನಿ ನರೇಂದ್ರ ಮೋದಿ ಕೊರೋನಾ ಲಸಿಕೆ ಹಾಕಿಸಿಕೊಂಡ ಬೆನ್ನಲ್ಲೇ ಬಿಜೆಪಿಯ ಎಲ್ಲ ಅರ್ಹ ಶಾಸಕರು ಹಾಗೂ ಸಂಸದರೂ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. 60 ವರ್ಷ ದಾಟಿದವರು ಹಾಗೂ ಬೇರೆ ಬೇರೆ ರೀತಿಯ ಅನಾರೋಗ್ಯವುಳ್ಳ 45 ವರ್ಷ ಮೇಲ್ಪಟ್ಟ ಶಾಸಕರು ಮತ್ತು ಸಂಸದರೆಲ್ಲ ತಮ್ಮ ತಮ್ಮ ಕ್ಷೇತ್ರದಲ್ಲಿ ಲಸಿಕೆ ಹಾಕಿಸಿಕೊಂಡು ಜನರಲ್ಲಿ ವಿಶ್ವಾಸ ಮೂಡಿಸುವಂತೆ ಪಕ್ಷ ಸೂಚನೆ ನೀಡಿದೆ ಎಂದು ಮೂಲಗಳು ಹೇಳಿವೆ.

ಅಲ್ಲದೆ, ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲಿ ಹಣ ನೀಡಿ ಲಸಿಕೆ ಪಡೆದು, ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಲಸಿಕೆ ಸಿಗುವಂತೆ ನೋಡಿಕೊಳ್ಳಿ ಎಂದೂ ಪಕ್ಷ ಸೂಚಿಸಿದೆ ಎನ್ನಲಾಗಿದೆ.

ಹೀಗಾಗಿ ಮುಂದಿನ ಒಂದು ವಾರದಲ್ಲಿ ಬಿಜೆಪಿಯ ಜನಪ್ರತಿನಿಧಿಗಳು ಎಲ್ಲೆಡೆ ಲಸಿಕೆ ಹಾಕಿಸಿಕೊಳ್ಳುವ ಸಾಧ್ಯತೆಯಿದೆ. ಸೋಮವಾರ ಈ ಕುರಿತು ಮಾತನಾಡಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ‘ಕೊರೋನಾ ವಾರಿಯರ್‌ಗಳಿಗೆ ಮೊದಲು ಲಸಿಕೆ ಸಿಗಬೇಕು, ನಂತರ ನಾವೆಲ್ಲಾ ಹಾಕಿಸಿಕೊಳ್ಳಬೇಕು ಎಂದು ಮೋದಿಜಿ ಸ್ಪಷ್ಟವಾಗಿ ಹೇಳಿದ್ದರು. ಅವರನ್ನು ಟೀಕಿಸುತ್ತಿದ್ದವರಿಗೆ ಇವತ್ತು ಉತ್ತರ ದೊರಕಿದೆ.

ನಾನು ಕೂಡ ಸರದಿಗಾಗಿ ಕಾಯುತ್ತಿದ್ದೇನೆ. ಸಚಿವರೆಲ್ಲ ಹಣ ಕೊಟ್ಟು ಲಸಿಕೆ ಹಾಕಿಸಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.