ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಹತ್ಯೆಗೈದ ಪಾತಕಿ ಲಾರೆನ್ಸ್ ಬಿಷ್ಟೋಯಿ ತಂಡದ ಹಿಟ್‌ ಲಿಸ್ಟ್‌ನಲ್ಲಿ ಹಿಂದೂ ದೇವತೆಗಳನ್ನು ಪದೇ ಪದೇ ಹಾಸ್ಯ ಮಾಡುವ ವಿದೂಷಕ ಮುನಾವರ್ ಫಾರುಕಿ ಇದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಹತ್ಯೆಗೈದ ಪಾತಕಿ ಲಾರೆನ್ಸ್ ಬಿಷ್ಟೋಯಿ ತಂಡದ ಹಿಟ್‌ ಲಿಸ್ಟ್‌ನಲ್ಲಿ ಹಿಂದೂ ದೇವತೆಗಳನ್ನು ಪದೇ ಪದೇ ಹಾಸ್ಯ ಮಾಡುವ ವಿದೂಷಕ ಮುನಾವರ್ ಫಾರುಕಿ ಇದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ. ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಬಂಧಿತರ ವಿಚಾರಣೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಮುನಾವರ್ 2021ರಲ್ಲಿ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವತೆಗಳ ಬಗ್ಗೆ ಅಪಹಾಸ್ಯ ಮಾಡಿದ್ದ.

ಸಲ್ಮಾನ್ ಕೇಸಲ್ಲೂ ಸಿದ್ದಿಕಿ ಹತ್ಯೆ ಶಂಕಿತನ ವಿಚಾರಣೆ:
ಸಿದ್ದಿಕಿ ಹತ್ಯೆಯಲ್ಲಿ ಭಾಗಿಯಾಗಿರುವ ಶಂಕಿತ ಶುಭಂ ಲೋನ್ಗರ್‌ನನ್ನು, ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣದಲ್ಲೂ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಸಾಕ್ಷಿಗಳ ಕೊರತೆಯಿಂದಾಗಿ ಬಿಡುಗಡೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಈ ನಡುವೆ ಸಿದ್ದಿಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹರೀಶ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಈತ ದಾಳಿಕೋರರಿಗೆ ಹಣ ನೀಡಿದ್ದ ಎನ್ನಲಾಗಿದೆ.

ಬಾಬಾ ಸಿದ್ದಿಕಿ ಪುತ್ರ ಶಾಸಕ ಜೀಶನ್‌ ಕೂಡ ಬಿಷ್ಣೋಯಿ ಹಿಟ್‌ ಲಿಸ್ಟ್‌ನಲ್ಲಿ..

ಮತ್ತೊಂದೆಡೆ ಬಾಲಿವುಡ್‌ನ ಪ್ರಸಿದ್ಧ ನಟರಿಗೆ ಅತ್ಯಾಪ್ತರಾಗಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರನ್ನು ಹತ್ಯೆಗೈದ ಪಾತಕಿ ಲಾರೆನ್ಸ್‌ ಬಿಷ್ಣೋಯಿ ತಂಡದ ಹಿಟ್‌ಲಿಸ್ಟ್‌ನಲ್ಲಿ ಸಿದ್ದಿಕಿ ಅವರ ಪುತ್ರ, ಶಾಸಕ ಜೀಶನ್‌ ಸಿದ್ದಿಕಿ ಕೂಡ ಇದ್ದರು ಎಂಬ ಮಾಹಿತಿ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಬಾಬಾ ಸಿದ್ದಿಕಿ ಹಾಗೂ ಅವರ ಪುತ್ರ ಜೀಶನ್‌ ಇಬ್ಬರನ್ನೂ ಕೊಲ್ಲಲು ತಮಗೆ ಸುಪಾರಿ ನೀಡಲಾಗಿತ್ತು. ಶನಿವಾರ ಸಂಜೆ ಇಬ್ಬರೂ ಒಂದೇ ಸ್ಥಳದಲ್ಲಿ ಸಿಗುತ್ತಾರೆ ಎಂದೂ ತಿಳಿಸಲಾಗಿತ್ತು. ಒಂದು ವೇಳೆ, ಇಬ್ಬರನ್ನೂ ಒಟ್ಟಿಗೇ ಕೊಲ್ಲಲು ಸಾಧ್ಯವಾಗದಿದ್ದರೆ ಮೊದಲು ಸಿಕ್ಕವರನ್ನು ಕೊಂದು ಬಿಡಿ ಎಂಬ ನಿರ್ದೇಶನ ಇತ್ತು ಎಂದು ಹತ್ಯೆ ಪ್ರಕರಣದ ಆರೋಪಿಗಳು ಪೊಲೀಸರ ಮುಂದೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜೀಶನ್‌ ಸಿದ್ದಿಕಿ ಮುಂಬೈನ ವಾದ್ರೆ ಪೂರ್ವ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಆಗಿದ್ದು, ವಿಧಾನಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣಕ್ಕೆ ಹಲವು ತಿಂಗಳ ಹಿಂದೆ ಅವರನ್ನು ಉಚ್ಚಾಟನೆ ಮಾಡಲಾಗಿತ್ತು.

ಸಿದ್ಧಿಕಿ ಮೇಲೆ ಗುಂಡಿನ ದಾಳಿ ಬಳಿಕ ಪೊಲೀಸರತ್ತ ಮೆಣಸಿನ ಪುಡಿ

ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಬಳಿಕ ಸಿದ್ಧಿಕಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸರ ಮೇಲೆ ಮೆಣಸಿನ ಪುಡಿ ಎರಚಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಲಾರೆನ್ಸ್‌ ಗುಂಪಿನ ಯೋಜನೆ ಪ್ರಕಾರ ದಸರಾ ಮೆರವಣಿಗೆ ಜನಸಂದಣಿ ನಡುವೆ ಸೇರಿಕೊಂಡು ಗುರ್ಮೆಲ್‌ ಬಲ್ಜಿತ್‌ ಮತ್ತು ಧರ್ಮರಾಜ್‌ ಸಿದ್ಧಿಕಿ ಮೇಲೆ ಗುಂಡಿನ ದಾಳಿ ನಡೆಸಬೇಕಿತ್ತು. ಆದರೆ ದಸರಾ ಮೆರವಣಿಗೆಯಲ್ಲಿ ಭಾರೀ ಜನಸಂದಣಿ ಕಂಡ ಆರೋಪಿ ಶಿವಕುಮಾರ್‌ ಏಕಾಏಕಿ ನಿರ್ಧಾರ ಬದಲಾಯಿಸಿದ. ಅದರಂತೆ ದಸರಾ ಮೆರವಣಿಗೆ ಭಾಗವಾಗಿ ದೊಡ್ಡಮಟ್ಟದಲ್ಲಿ ಪಟಾಕಿ ಸಿಡಿಸುತ್ತಲೇ, ಸಿದ್ಧಿಕಿ ಮೇಲೆ 6 ಗುಂಡು ಹಾರಿಸಿದ. ಜೊತೆಗೆ ಸ್ಥಳದಲ್ಲಿದ್ದ ಮೂವರೂ ಪಾತಕಿಗಳು ಪೊಲೀಸರ ಮೇಲೆ ಕಾರದ ಪುಡಿ ಎರಚಿ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ