* ದೇಶದಲ್ಲಿ ಸದ್ದು ಮಾಡುತ್ತಿದೆ ಮಸೀದಿ, ಮಂದಿರ ವಿವಾದ* ವಿವಾದಗಳ ಮಧ್ಯೆ ಕಾನ್ಪುರ ಮೇಯರ್ ಶಾಕಿಂಗ್ ಹೇಳಿಕೆ* ಮಂದಿರಗಳ ಒತ್ತುವರಿ ಮಾಡಿ, ಮನೆ, ಅಂಗಡಿ ನಿರ್ಮಾಣ

ಕಾನ್ಪುರ(ಮೇ.29): ಉತ್ತರ ಪ್ರದೇಶ ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳಲ್ಲಿ ಕಾಶಿ, ಮಥುರಾ, ದೆಹಲಿಯ ಜಾಮಾ ಮಸೀದಿಗೆ ಸಂಬಂಧಿಸಿದಂತೆ ಎರಡು ಪಕ್ಷಗಳ ನಡುವೆ ವಿವಾದ ಹೆಚ್ಚಾಗುತ್ತಿದೆ. ಆದರೆ ಈಗ ಈ ವಿಚಾರವಾಗಿ ಕಾನ್ಪುರ ಮೇಯರ್ ಪ್ರಮೀಳಾ ಪಾಂಡೆ ನಗರದಲ್ಲಿ ಹೊಸ ಹೇಳಿಕೆ ಮೂಲಕ ಚರ್ಚೆ ಹುಟ್ಟು ಹಾಕಿದ್ದಾರೆ. ಮುಸ್ಲಿಂ ಪ್ರದೇಶಗಳಲ್ಲಿ ಒಟ್ಟು 124 ದೇವಾಲಯಗಳನ್ನು ಕಬಳಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲ, ಅಲ್ಲಿ ಒಂದೋ ಅಂಗಡಿಗಳನ್ನು ನಿರ್ಮಿಸಲಾಗಿದೆ ಅಥವಾ ಜನರು ದೇವಸ್ಥಾನವನ್ನು ಮುಚ್ಚಿಕೊಂಡು ವಾಸಿಸಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ದೇವಾಲಯಗಳನ್ನು ಮುಕ್ತಗೊಳಿಸಿ, ಮರಳಿ ಪಡೆದ ಬಳಿಕ ಮತ್ತೆ ಅಲ್ಲಿ ಪೂಜೆಯನ್ನು ಪ್ರಾರಂಭಿಸಲಾಗುವುದು ಎಂದು ಮೇಯರ್ ಹೇಳಿದ್ದಾರೆ

ಶನಿವಾರ ಹಲವು ಪ್ರದೇಶಗಳಿಗೆ ಭೇಟಿ 

ನಗರದ ಮೇಯರ್ ಪ್ರಮೀಳಾ ಪಾಂಡೆ ಅವರು ಎಸಿಪಿ ಅನ್ವರ್‌ಗಂಜ್ ಅವರೊಂದಿಗೆ ಶನಿವಾರ ನಗರದ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಾದ ಚಮನ್‌ಗಂಜ್, ಬೆಕಾಂಗಂಜ್, ದಲೇಲ್‌ಪುರವಾ, ಬಜಾರಿಯಾ ಮತ್ತು ಕರ್ನಲ್‌ಗಂಜ್‌ಗೆ ಭೇಟಿ ನೀಡಿದರು. ಈ ಸಮಯದಲ್ಲಿ ಅಲ್ಲಿ ಹಲವು ದೇವಸ್ಥಾನಗಳು ತೀರಾ ಹದಗೆಟ್ಟ ಸ್ಥಿತಿಯಲ್ಲಿ ಕಂಡುಬಂದರೆ, ಇನ್ನೊಂದೆಡೆ ಹಲವು ದೇವಸ್ಥಾನಗಳ ವಿಗ್ರಹಗಳು ಕಣ್ಮರೆಯಾಗಿದ್ದವು. ಇಲ್ಲಿನ ಹಲವು ಪುರಾತನ ದೇವಾಲಯಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ತಿಳಿಸಿದರು. ಬಹುತೇಕ ಕಡೆ ಅಂಗಡಿಗಳನ್ನು ತೆರೆಯಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ನಗರಸಭೆಗೆ ಮೇಯರ್ ಆದೇಶ

ಶನಿವಾರದ ಈ ಭೇಟಿಯಲ್ಲಿ, ಮೇಯರ್ ಚಾಂದ್ ಬಿರಿಯಾನಿ ಮತ್ತು ಬಾಬಾ ಬಿರಿಯಾನಿ ಅಂಗಡಿಯನ್ನು ತಲುಪಿದರು ಮತ್ತು ಇಲ್ಲಿ ಹಿಂದೆ ದೇವಸ್ಥಾನವಿತ್ತು, ಅದರಲ್ಲಿ ಬಿರಿಯಾನಿ ಅಂಗಡಿ ನಡೆಸಲಾಗುತ್ತಿದೆ ಎಂದು ಹೇಳಿದರು. ಇದಾದ ಬಳಿಕ ನಗರಸಭೆಗೆ ಆದೇಶ ಹೊರಡಿಸಿ, ಈ ಪ್ರದೇಶಗಳಲ್ಲಿ ಮುಚ್ಚಿರುವ ಅಥವಾ ಒತ್ತುವರಿ ಮಾಡಿಕೊಂಡಿರುವ ದೇವಸ್ಥಾನಗಳನ್ನು ಆದಷ್ಟು ಬೇಗ ಒತ್ತುವರಿಯಿಂದ ಮುಕ್ತಗೊಳಿಸಬೇಕು. ಈ ಮೂಲಕ ದೇವಸ್ಥಾನಗಳಲ್ಲಿ ಮತ್ತೆ ಪೂಜೆ ಆರಂಭಿಸಬೇಕು. ದೇವಸ್ಥಾನ ರಕ್ಷಣೆಯ ಹೆಸರಿನಲ್ಲಿ ಸದನದಲ್ಲಿ ಠರಾವು ಕೂಡ ಪಾಸು ಮಾಡುವುದಾಗಿ ಮೇಯರ್ ಹೇಳಿದರು.

ರಾಜಕೀಯವಾಗಿ ಜನರನ್ನು ವಿಭಜಿಸಲಾಗುತ್ತಿದೆ

ಮೇಯರ್ ಹೇಳಿಕೆ ಹಾಗೂ ಭೇಟಿ ಬಳಿಕ ನಗರ ಖಾಜಿ ಹೇಳಿಕೆಯೂ ಬಂದಿದೆ. ದೇಶದಾದ್ಯಂತ ಎಲ್ಲೆಲ್ಲಿ ಮಂದಿರ ಅಥವಾ ಮಸೀದಿ ಇದೆಯೋ ಅಲ್ಲಿ ಯಾರೂ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಪ್ರಸ್ತುತ, ಯಾವುದೇ ಪ್ರದೇಶದಲ್ಲಿ ದೇವಸ್ಥಾನ ಅಸ್ತಿತ್ವದಲ್ಲಿದ್ದರೆ, ಅಲ್ಲಿ ಯಾರೂ ಪೂಜೆ ಮಾಡುವುದನ್ನು ತಡೆಯುವುದಿಲ್ಲ. ಇಂತಹ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ಜನರನ್ನು ಒಡೆಯುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಮೊಘಲರು ಅಧಿಕಾರದಲ್ಲಿದ್ದಾಗ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಿದ್ದರು ಹಾಗಾಗಿ ಈಗ ಮತ್ತೆ ದೇವಸ್ಥಾನ ಮಾಡುತ್ತೇವೆ ಎಂದು ಮೇಯರ್ ಪ್ರಮೀಳಾ ಪಾಂಡೆ ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಹೇಳಿದರು.