ನವದೆಹಲಿ(ಜ.10): ದೇಶಾದ್ಯಂತ ಹಕ್ಕಿಜ್ವರ ವ್ಯಾಪಿಸಿದ ಆತಂಕದ ಬೆನ್ನಲ್ಲೇ, ದೇಶದ ಕುಕ್ಕುಟೋದ್ಯಮ ವಲಯಕ್ಕೆ ಭರ್ಜರಿ ಶೇ.50ರಷ್ಟುಹೊಡೆತ ಬಿದ್ದಿದೆ.

ಹಕ್ಕಿಜ್ವರಕ್ಕೆ ತುತ್ತಾದ ಕೋಳಿ ಹಾಗೂ ಇತರ ಹಕ್ಕಿಗಳನ್ನು ಮುಂಜಾಗ್ರತಾ ಕ್ರಮವಾಗಿ ಕೊಲ್ಲಲಾಗುತ್ತಿದೆ. ಇದರಿಂದ ಕುಕ್ಕುಟೋದ್ಯಮಕ್ಕೆ ಶೇ.50ರಷ್ಟುಹೊಡೆತ ಬಿದ್ದಿದೆ.

ಏತನ್ಮಧ್ಯೆ ದಿಲ್ಲಿ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿ ಮತ್ತೆ ಕಾಗೆಗಳು ಸಾವನ್ನಪ್ಪಿದ್ದು, ಪರೀಕ್ಷೆಗಾಗಿ ಅವುಗಳ ಮಾದರಿಯನ್ನು ಭೋಪಾಲ್‌ನಲ್ಲಿರುವ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಜೊತೆಗೆ ಸಾವನ್ನಪ್ಪುತ್ತಿರುವ ಹಕ್ಕಿಗಳ ಮೇಲೆ ನಿಗಾವಹಿಸಲು ವೈದ್ಯರ ನೇತೃತ್ವದಲ್ಲಿ ಜಿಲ್ಲಾ ಹಂತದಲ್ಲಿ ತಂಡ ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಮದಿಗೆ ದಿಲ್ಲಿ ಬ್ರೇಕ್‌:

ಹಕ್ಕಿಜ್ವರದ ಭೀತಿ ಹಿನ್ನೆಲೆಯಲ್ಲಿ ಮುಂದಿನ 10 ದಿನಗಳ ಕಾಲ ಜೀವಂತ ಹಕ್ಕಿಗಳ ಆಮದು ಮೇಲೆ ಶನಿವಾರ ನಿಷೇಧ ಹೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು, ಘಾಜಿಪುರ ಕುಕ್ಕುಟೋದ್ಯಮ ಮಾರುಕಟ್ಟೆಯನ್ನು ಮುಚ್ಚಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್‌ ಅವರು, ‘ದೆಹಲಿಯಲ್ಲಿ ಈವರೆಗೆ ಹಕ್ಕಿಜ್ವರ ಪ್ರಕರಣ ದಾಖಲೆಯಾಗಿಲ್ಲ. ಇತರ ರಾಜ್ಯಗಳಲ್ಲಿ ಕಂಡುಬಂದಿರುವ ಈ ಸೋಂಕಿನ ಬಗ್ಗೆ ಆತಂಕವಾಗಿದೆ ಎಂದಿದ್ದಾರೆ. ಇದರ ಬೆನ್ನಲ್ಲೇ, ದಕ್ಷಿಣ ದೆಹಲಿಯ ಪ್ರಸಿದ್ಧ ಹಾಝ್‌ ಖಾಸ್‌ ಉದ್ಯಾನವನ, ಕೆರೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಪಕ್ಷಿಗಳು ಸತ್ತು ಬಿದ್ದಿರುವುದು ಕಂಡುಬಂದಿದೆ. ಹೀಗಾಗಿ, ಆ ಎಲ್ಲಾ ಪಾರ್ಕ್ಗಳನ್ನು ಮುಚ್ಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.