ನಿನ್ನೆ ದೇಶದಲ್ಲಿ 30,800 ಜನರಿಗೆ ಕೊರೋನಾ, 503 ಸಾವು
ಕೊರೋನಾ ವೈರಸ್ ವ್ಯಾಪಿಸುತ್ತಿರುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿದೆ. ಭಾನುವಾರ ಪುನಃ ದಾಖಲೆಯ 30,871 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗುವುದರೊಂದಿಗೆ ಸೋಂಕಿತರ ಸಂಖ್ಯೆ 8,74,882ಕ್ಕೆ ಏರಿಕೆಯಾಗಿದೆ.
ನವದೆಹಲಿ(ಜು.13): ಕೊರೋನಾ ವೈರಸ್ ವ್ಯಾಪಿಸುತ್ತಿರುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿದೆ. ಭಾನುವಾರ ಪುನಃ ದಾಖಲೆಯ 30,871 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗುವುದರೊಂದಿಗೆ ಸೋಂಕಿತರ ಸಂಖ್ಯೆ 8,74,882ಕ್ಕೆ ಏರಿಕೆಯಾಗಿದೆ.
ಕೊರೋನಾ ವೈರಸ್ ದೇಶದಲ್ಲಿ ಒಂದೇ ದಿನ 503 ಜನರನ್ನು ಬಲಿಪಡೆದಿದೆ. ಹೀಗಾಗಿ ಮೃತರ ಸಂಖ್ಯೆ 23,149ಕ್ಕೆ ತಲುಪಿದೆ. ಕಳೆದ ಎರಡು ದಿನಗಳ ಅಂತರದಲ್ಲಿ ಸುಮಾರು 60 ಸಾವಿರ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ.
ಬೆಂಗ್ಳೂರಲ್ಲಿ 1525 ಮಂದಿಗೆ ಸೋಂಕು: 16 ದಿನದ ಕಂದಮ್ಮ ಬಲಿ, ಮೃತರ ಸಂಖ್ಯೆ 274ಕ್ಕೆ ಏರಿಕೆ
ಇನ್ನು ಮಹಾರಾಷ್ಟ್ರದಲ್ಲಿ ಭಾನುವಾರ ಮತ್ತೆ 7,827 ಜನಕ್ಕೆ ಸೋಂಕು ತಗುಲಿದ್ದು, ಪ್ರಕರಣಗಳ ಸಂಖ್ಯೆ 2.54 ಲಕ್ಷಕ್ಕೆ ಹೆಚ್ಚಳಗೊಂಡಿದೆ. ಅದೇ ರೀತಿ ದೆಹಲಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 1.12 ಲಕ್ಷಕ್ಕೆ ಹಾಗೂ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 1.38 ಲಕ್ಷಕ್ಕೆ ಏರಿಕೆಯಾಗಿದೆ.
ಇನ್ನೊಂದೆಡೆ ದೇಶದೆಲ್ಲೆಡೆ 20,040 ಮಂದಿ ಕೊರೋನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 5,52,629ಕ್ಕೆ ವೃದ್ಧಿಯಾಗಿದೆ.
35 ಲಕ್ಷದತ್ತ ಅಮೆರಿಕ ಕೊರೋನಾ ಸೋಂಕು
ಅಮೆರಿಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 35 ಲಕ್ಷದ ಗಡಿಗೆ ಸಮೀಪಿಸಿದೆ. ವಲ್ಡೋರ್ ಮೀಟರ್‌ನ ಪ್ರಕಾರ ಅಮೆರಿಕದಲ್ಲಿ ಶನಿವಾರ 61,719 ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 33.55 ಲಕ್ಷಕ್ಕೆ ಏರಿಕೆ ಆಗಿದೆ. ಒಂದು ವೇಳೆ ಸೋಂಕಿನ ಪ್ರಮಾಣ ಇದೇ ಗತಿಯಲ್ಲಿ ಮುಂದುವರಿದರೆ ಒಂದೆರಡು ದಿನದಲ್ಲೇ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 35 ಲಕ್ಷ ದಾಟುವ ಸಾಧ್ಯತೆ ಇದೆ. ಇನ್ನು ಅಮೆರಿಕದಲ್ಲಿ ಕೊರೋನಾಗೆ ಮತ್ತೆ 732 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 1.37ಲಕ್ಷಕ್ಕೆ ಏರಿಕೆ ಆಗಿದೆ.