Asianet Suvarna News Asianet Suvarna News

ಒಬಿಸಿ ಮೀಸಲು ಅಧಿಕಾರ ರಾಜ್ಯಕ್ಕೆ: ಒಟ್ಟಾರೆ ಮೀಸಲು 50% ಮಿತಿ ದಾಟುವಂತಿಲ್ಲ!

* ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆ ಪಾಸ್‌

* ಒಬಿಸಿ ಮೀಸಲು ಅಧಿಕಾರ ರಾಜ್ಯಕ್ಕೆ

* 50% ಮೀಸಲು ಮಿತಿ ರದ್ದತಿಗೆ ಕೇಂದ್ರ ನಕಾರ

Bill on OBC list political move states can not breach 50pc cap on quota pod
Author
Bangalore, First Published Aug 11, 2021, 4:57 PM IST
  • Facebook
  • Twitter
  • Whatsapp

ನವದೆಹಲಿ(ಆ.11): ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯನ್ನು ತಯಾರಿಸುವ ಹಕ್ಕನ್ನು ರಾಜ್ಯಗಳಿಗೆ ಮರಳಿಸುವ ಮಹತ್ವದ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆ ಮಂಗಳವಾರ ಸಂಜೆ ಸರ್ವಾನುಮತದ ಅನುಮೋದನೆ ನೀಡಿದೆ. ಇನ್ನು ರಾಜ್ಯಸಭೆಯಲ್ಲಿ ಮಾತ್ರ ವಿಧೇಯಕ ಅಂಗೀಕಾರಗೊಳ್ಳುವುದು ಬಾಕಿ ಉಳಿದಿದೆ. ಅಲ್ಲಿ ಕೂಡ ಅಂಗೀಕಾರವಾದರೆ ಇನ್ನು ಮುಂದೆ ಸ್ಥಳೀಯ ಆದ್ಯತೆಗೆ ಅನುಗುಣವಾಗಿ, ಸಮುದಾಯಗಳನ್ನು ಒಬಿಸಿ ಪಟ್ಟಿಗೆ ಸೇರಿಸುವ ಅಧಿಕಾರವನ್ನು ರಾಜ್ಯಗಳು ಪಡೆಯಲಿವೆ.

ಪೆಗಾಸಸ್‌ ಹಾಗೂ ಕೃಷಿ ಕಾಯ್ದೆಯ 4 ವಾರಗಳ ಕೋಲಾಹಲದ ಬಳಿಕ ಇದೇ ಮೊದಲ ಬಾರಿ ಲೋಕಸಭೆ ಕಲಾಪ ಮಂಗಳವಾರ ಸುಗಮವಾಗಿ ನಡೆಯಿತು. ರಾಜ್ಯಗಳ ಹಿತ ಕಾಯುವ ವಿಧೇಯಕವಾದ ಕಾರಣ ಪ್ರತಿಪಕ್ಷಗಳೂ ಕಲಾಪಕ್ಕೆ ಸಹಕರಿಸಿದವು. ಸುದೀರ್ಘ ಚರ್ಚೆ ಬಳಿಕ ಸಂಜೆ ನಡೆದ ಮತದಾನದಲ್ಲಿ ವಿಧೇಯಕದ ಪರ 385 ಮತಗಳು ಬಿದ್ದವು. ಯಾವ ಸದಸ್ಯರೂ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ವಿಪಕ್ಷಗಳ ಸದಸ್ಯರು ಮಂಡಿಸಿದ ಕೆಲವು ತಿದ್ದುಪಡಿಗಳನ್ನು ಸದನ ತಿರಸ್ಕರಿಸಿತು.

ಸಾಂವಿಧಾನಿಕ ತಿದ್ದುಪಡಿ ಮಸೂದೆಯಾದ ಕಾರಣ ಮೂರನೇ ಎರಡರಷ್ಟುಸದಸ್ಯರ ಬೆಂಬಲ ವಿಧೇಯಕಕ್ಕೆ ಅಗತ್ಯವಾಗಿತ್ತು.

ವಿಪಕ್ಷಗಳ ಬೆಂಬಲ:

ಸೋಮವಾರದ ಮಂಡಿಸಲಾಗಿದ್ದ ಈ ಮಹತ್ವದ 127ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ-2021ಕ್ಕೆ ವಿಪಕ್ಷಗಳು ಬೆಂಬಲ ವ್ಯಕ್ತಪಡಿಸಿದವು. ಆದರೆ, ‘ಮೀಸಲಾತಿ ಶೇ.50ರಷ್ಟುವೀರಬಾರದು’ ಎಂಬ 30 ವರ್ಷದ ಹಿಂದಿನ ಅಂಶವನ್ನು ತೆಗೆದು ಹಾಕಬೇಕು ಎಂದು ಕಾಂಗ್ರೆಸ್‌ ಸೇರಿದಂತೆ ಇನ್ನಿತರ ವಿಪಕ್ಷಗಳ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದವು.

ಆದರೆ, ಇದಕ್ಕೆ ಉತ್ತರಿಸಿದ ಕೇಂದ್ರ ಸಮಾಜ ಕಲ್ಯಾಣ ಸಚಿವ ವೀರೇಂದ್ರಕುಮಾರ್‌, ‘ವಿಪಕ್ಷಗಳ ಸದಸ್ಯರ ಭಾವನೆ ನನಗೆ ಅರ್ಥವಾಗುತ್ತದೆ. ಮೀಸಲು ಶೇ.50ರಷ್ಟುಮೀರಬಾರದು ಎಂಬ ಅಂಶವನ್ನು ತೆಗೆದುಹಾಕುವುದು ಅಷ್ಟುಸುಲಭವಲ್ಲ. ಕೋರ್ಟ್‌ಗಳು ಕೂಡ ಶೇ.50 ಮೀರಕೂಡದು ಎಂದು ತೀರ್ಪುಗಳಲ್ಲಿ ಹೇಳಿವೆ. ಇದಕ್ಕೆ ಸವಿಸ್ತಾರ ಚರ್ಚೆಯ ಅಗತ್ಯವಿದೆ’ ಎಂದು ಹೇಳಿ ವಿಪಕ್ಷಗಳ ಬೇಡಿಕೆ ತಳ್ಳಿಹಾಕಿದರು.

‘127ನೇ ತಿದ್ದುಪಡಿ ಮಸೂದೆಯು ಐತಿಹಾಸಿಕವಾಗಿದ್ದು, ಇದರಿಂದ 671 ಜಾತಿಗಳಿಗೆ ಲಾಭವಾಗಲಿದೆ. ಅಲ್ಲದೆ ಹಿಂದುಳಿದ ವರ್ಗಗಳ ಪಟ್ಟಿತಯಾರಿಸುವ ಅಧಿಕಾರ ರಾಜ್ಯಗಳಲ್ಲೇ ಉಳಿಯುವುದರಿಂದ ಹಲವು ಸಮುದಾಯಗಳು ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಪಡೆಯಲು ಅನುಕೂಲವಾಗಲಿದೆ’ ಎಂದರು.

ವಿವಾದ ಏನು?:

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ರಚಿಸುವ ಸಲುವಾಗಿ ಕೇಂದ್ರ ಸರ್ಕಾರ 2018ರಲ್ಲಿ ಸಂವಿಧಾನಕ್ಕೆ 102ನೇ ತಿದ್ದುಪಡಿ ತರುವ ಮೂಲಕ 338ಬಿ, 342ಎ ಮತ್ತು 366(26ಸಿ)ವಿಧಿಯಲ್ಲಿ ಕೆಲ ಬದಲಾವಣೆ ಮಾಡಿತ್ತು. ಈ ಪೈಕಿ 338ಬಿ ವಿಧಿಯು ರಾಷ್ಟ್ರೀಯ ಹಿಂದುಳಿದ ಆಯೋಗದ ಅಧಿಕಾರ, ಕರ್ತವ್ಯ ಮೊದಲಾವುಗಳನ್ನು ವಿವರಿಸುತ್ತಿತ್ತು. ಇನ್ನು 342ಎ ಯಾವುದೇ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವ ರಾಷ್ಟ್ರಪತಿಗಳ ಅಧಿಕಾರ ವಿವರಿಸುತ್ತಿತ್ತು. 366 (26ಸಿ) ವಿಧಿಯು, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರು ಯಾರು ಎಂಬುದನ್ನು ವಿವರಿಸುತ್ತಿತ್ತು.

ಆದರೆ ಮಹಾರಾಷ್ಟ್ರದ ಮರಾಠಾ ಮೀಸಲು ಪ್ರಕರಣದ ತೀರ್ಪು ನೀಡುವ ಸಂವಿಧಾನದ 342ಎ ವಿಧಿಯನ್ನು ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದ ಸುಪ್ರೀಂಕೋರ್ಟ್‌, ಒಬಿಸಿ ಪಟ್ಟಿಸಿದ್ಧಪಡಿಸುವ ಅಧಿಕಾರ ಕೇವಲ ರಾಷ್ಟ್ರಪತಿಗಳಿಗೆ ಮಾತ್ರ ಇದೆ. ರಾಜ್ಯಗಳಿಗೆ ಈ ಅಧಿಕಾರ ಇಲ್ಲ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಮರಾಠ ಸಮುದಾಯಕ್ಕೆ ನೀಡಿದ್ದ ಮೀಸಲು ರದ್ದುಪಡಿಸಬೇಕು ಎಂದು ಆದೇಶ ಹೊರಡಿಸಿತ್ತು.

ಪ್ರಕರಣದ ವಿಚಾರಣೆ ವೇಳೆ, 342ಎ ವಿಧಿಯನ್ನು ಕೇವಲ ರಾಷ್ಟ್ರೀಯ ಹಿಂದುಳಿದ ಆಯೋಗದ ರಚನೆಗಾಗಿ ಮಾಡಿದ್ದು. ಇದರಿಂದ ಒಬಿಸಿ ಪಟ್ಟಿರಚಿಸುವ ರಾಜ್ಯಗಳ ಅಧಿಕಾರ ಮೊಟಕುಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ವಾದಿಸಿದ್ದರೂ, ಅದನ್ನು ಸುಪ್ರೀಂಕೋರ್ಟ್‌ ಒಪ್ಪಿರಲಿಲ್ಲ.

ಬಳಿಕ 342ಎ ವಿಧಿ ಕುರಿತ ವ್ಯಾಖ್ಯಾನವನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಮೂಲಕ ಪ್ರಶ್ನಿಸಿತ್ತಾದರೂ, ಅದನ್ನು ನ್ಯಾಯಾಲಯ ವಜಾ ಮಾಡಿತ್ತು. ಹೀಗಾಗಿ ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದವು. ಕೇಂದ್ರ ಸರ್ಕಾರ ರಾಜ್ಯಗಳ ಹಕ್ಕನ್ನು ಮೊಟಕುಗೊಳಿಸಿದೆ ಎಂದು ಟೀಕಿಸಿದ್ದವು. ಈ ಹಿನ್ನೆಲೆಯಲ್ಲಿ ಹೊಸ ಸಂವಿಧಾನ ತಿದ್ದುಪಡಿ ಮೂಲಕ ವಿಷಯದ ಬಗ್ಗೆ ಸ್ಪಷ್ಟತೆ ನೀಡಿ, ಒಬಿಸಿ ಪಟ್ಟಿರಚಿಸುವ ಹಕ್ಕನ್ನು ಮರಳಿ ರಾಜ್ಯಗಳಿಗೆ ಕಲ್ಪಿಸುವ ಸಲುವಾಗಿ ಇದೀಗ ಕೇಂದ್ರ ಸರ್ಕಾರ ಸಾಂವಿಧಾನ ತಿದ್ದುಪಡಿ ಮಸೂದೆ ಮಂಡಿಸಿದೆ.

ಗೊಂದಲ ನಿವಾರಿಸಿದ ತಿದ್ದುಪಡಿ ಮಸೂದೆ

ಒಬಿಸಿ ಪಟ್ಟಿಗೆ ಜಾತಿಗಳನ್ನು ಸೇರಿಸುವ ಅಧಿಕಾರ ವಾಸ್ತವವಾಗಿ ರಾಜ್ಯಗಳ ಬಳಿಯೇ ಇತ್ತು. ಆದರೆ, ಇತ್ತೀಚೆಗೆ ಮಹಾರಾಷ್ಟ್ರದ ಮರಾಠ ಮೀಸಲು ಪ್ರಕರಣದ ತೀರ್ಪು ನೀಡುವಾಗ ಸುಪ್ರೀಂಕೋರ್ಟ್‌ ಸಂವಿಧಾನದ 342ಎ ವಿಧಿಯನ್ನು ತನ್ನದೇ ರೀತಿಯಲ್ಲಿ ವ್ಯಾಖ್ಯಾನಿಸಿ, ಒಬಿಸಿ ಪಟ್ಟಿಸಿದ್ಧಪಡಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಮಾತ್ರ ಇದೆ, ರಾಜ್ಯಗಳಿಗೆ ಇಲ್ಲ ಎಂದಿತ್ತು. ಇದರಿಂದ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಗೊಂದಲ ನಿವಾರಿಸಲು ಸರ್ಕಾರ ಸಾಂವಿಧಾನಿಕ ತಿದ್ದುಪಡಿ ಮಸೂದೆ ತಂದಿದೆ.

ಪ್ರಯೋಜನ ಏನು?

ರಾಷ್ಟ್ರೀಯ ಒಬಿಸಿ ಪಟ್ಟಿಯಲ್ಲಿ ಸದ್ಯ 5000ಕ್ಕೂ ಹೆಚ್ಚು ಜಾತಿಗಳಿವೆ. ಆದರೆ, ರಾಜ್ಯಗಳಲ್ಲಿ ಇನ್ನೂ ಅನೇಕ ಹಿಂದುಳಿದ ಜಾತಿ, ವರ್ಗಗಳಿದ್ದು, ಅವುಗಳನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಆಗಾಗ ಹೋರಾಟಗಳು ನಡೆಯುತ್ತವೆ. ಕರ್ನಾಟಕದಲ್ಲೂ ಪಂಚಮಸಾಲಿ ಹಾಗೂ ಒಕ್ಕಲಿಗರಿಂದ ಹೋರಾಟ ನಡೆಯುತ್ತಿದೆ. ಆದರೆ, ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ ಎಂದು ಸರ್ಕಾರಗಳು ಭಾವಿಸಿರುವುದರಿಂದ ರಾಜ್ಯಗಳು ಈ ವಿಷಯದಲ್ಲಿ ತೀರ್ಮಾನ ಕೈಗೊಳ್ಳುತ್ತಿರಲಿಲ್ಲ. ಇನ್ನುಮುಂದೆ ರಾಜ್ಯಗಳೇ ತಮ್ಮಲ್ಲಿರುವ ಹಿಂದುಳಿದ ಜಾತಿಗಳನ್ನು ಗುರುತಿಸಿ ಒಬಿಸಿ ಮೀಸಲು ಪಟ್ಟಿಗೆ ಸೇರ್ಪಡೆ ಮಾಡಬಹುದಾಗಿದೆ.

Follow Us:
Download App:
  • android
  • ios