ರಾಯ್‌ಪುರ(ಏ.08): ಛತ್ತೀಸ್‌ಗಢದ ಬಸ್ತರ್‌ ವಲಯದಲ್ಲಿ ಕಳೆದ ಶನಿವಾರ ನಕ್ಸಲರ ಜತೆಗಿನ ಕಾಳಗದ ವೇಳೆ ಅಪರಣಗೊಂಡಿರುವ ಸಿಆರ್‌ಪಿಎಫ್‌ ಯೋಧ ರಾಕೇಶ್ವರ ಸಿಂಗ್‌ ಮನ್ಹಾಸ್‌ ಅವರ ಛಾಯಾಚಿತ್ರವನ್ನು ಮಾವೋವಾದಿಗಳು ಬುಧವಾರ ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಇವರ ಸುರಕ್ಷಿತ ಬಿಡುಗಡೆಗೆ ಮಧ್ಯಸ್ಥಿಕೆದಾರರನ್ನು ನೇಮಿಸಿ ಅವರ ಹೆಸರು ಘೋಷಿಸಬೇಕು ಎಂಬ ಷರತ್ತು ವಿಧಿಸಿದ್ದಾರೆ.

ಮಾವೋವಾದಿಗಳ ದಂಡಕಾರಣ್ಯ ವೊಶೇಷ ವಲಯ ಸಮಿತಿ ಸದಸ್ಯನೊಬ್ಬ ಈ ಕುರಿತು ಸ್ಥಳೀಯ ಪತ್ರಕರ್ತರಿಗೆ ಸಂದೇಶ ರವಾನಿಸಿದ್ದಾನೆ. ‘ಯೋಧ ಮನ್ಹಾಸ್‌ ಸುರಕ್ಷಿತವಾಗಿ ನಮ್ಮ ಬಳಿ ಇದ್ದಾರೆ’ ಎಂದು ಸಂದೇಶದಲ್ಲಿ ಹೇಳಿದ್ದಾನೆ. ಚಿತ್ರದಲ್ಲಿ ಮನ್ಹಾಸ್‌ ನೀಲಿ ತಾಡಪಾಲಿನ ಮೇಲೆ ಸಮವಸ್ತ್ರ ಧರಿಸಿ ಅರಣ್ಯದಲ್ಲಿ ಕುಳಿತಿದ್ದು ಕಂಡುಬರುತ್ತದೆ.

ಆದರೆ ಇದು ಹಳೆಯ ಚಿತ್ರ ಎಂದು ಮನ್ಹಾಸ್‌ ಕುಟುಂಬ ಹಾಗೂ ಸಹೋದ್ಯೋಗಿಗಳು ಹೇಳಿದ್ದಾರೆ. ಅಲ್ಲದೆ, ದಾಳಿ ವೇಳೆ ಮನ್ಹಾಸ್‌ ಗಾಯಗೊಂಡಿರಬಹುದು ಎಂಬ ಶಂಕೆ ಇದೆ. ಈ ಶಂಕೆ ಪುಷ್ಟೀಕರಿಸುವಂತೆ ಮನ್ಹಾಸ್‌ ದೇಹದ ಮೇಲೆ ಯಾವುದೇ ಗಾಯ ಕಂಡುಬರುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ನಡುವೆ, ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಬಸ್ತರ್‌ ವಲಯದ ಐಜಿ ಪಿ. ಸುಂದರರಾಜ್‌ ಹೇಳಿದ್ದಾರೆ.

ಏ.3ರಿಂದ ಮನ್ಹಾಸ್‌ ನಾಪತ್ತೆಯಾಗಿದ್ದು, ಅವರನ್ನು ನಕ್ಸಲರು ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದೆ.