ಪಟ್ನಾ(ಜ.25): ಸರ್ಕಾರಿ ಶಾಲೆಗೆ ಮಕ್ಕಳು ಬರುತ್ತಿಲ್ಲ ಎಂಬುದು ಕರ್ನಾಟಕದಲ್ಲಿ ಮಾತ್ರ ಇರುವ ಸಮಸ್ಯೆಯಲ್ಲ. ಬದಲಾಗಿ ದೇಶದಲ್ಲಿಯೇ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಕೊರತೆ ಇದೆ.

ಬಿಹಾರದ ಶಾಲೆಯೊಂದರಲ್ಲಿ ಒಬ್ಬಳೇ ವಿದ್ಯಾರ್ಥಿನಿಗೆ ಇಬ್ಬರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಆಕೆಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಒಬ್ಬ ಅಡುಗೆಯವರಿದ್ದಾರೆ. ಗಯಾ ಜಿಲ್ಲೆಯಿಂದ 22 ಕಿಮೀ ದಕ್ಷಿಣದಲ್ಲಿರುವ ಮನ್ಸಭಿಗಾ ಸರ್ಕಾರಿ ಶಾಲೆ ಸದ್ಯ ತನ್ನಲ್ಲಿರುವ ವಿದ್ಯಾರ್ಥಿ, ಶಿಕ್ಷಕರ ಸಂಖ್ಯೆಯಿಂದಲೇ ಸುದ್ದಿಯಾಗಿದೆ.

ಭಾರತಕ್ಕೂ ಕೊರೋನಾ ವೈರಸ್‌ ಲಗ್ಗೆ? 80 ಜನರ ಮೇಲೆ ನಿಗಾ!

ಒಂದು ಅಡುಗೆ ಕೋಣೆಯೂ ಸೇರಿ ನಾಲ್ಕು ಕೊಠಡಿಗಳಿರುವ ಶಾಲೆಯಲ್ಲಿ ಒಬ್ಬಳೇ ಬಾಲಕಿ ಪಾಠ ಕೇಳುತ್ತಾಳೆ. ಇಬ್ಬರು ಶಿಕ್ಷಕರ ವೇತನಕ್ಕೆ ಸರ್ಕಾರ ಪ್ರತೀ ತಿಂಗಳು 58 ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದು, ಅಡುಗೆಯವರಿಗಾಗಿ 1500 ವ್ಯಯಿಸುತ್ತಿದೆ.

ಸ್ಥಳೀಯವಾಗಿ ಹಲವಾರು ಖಾಸಗಿ ಶಾಲೆಗಳಿರುವುದರಿಂದ ಜನರು ಗುಣಮಟ್ಟದ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಇದೊಂದು ಹಳೆಯ ಶಾಲೆಯಾಗಿದ್ದು ಯಾರೂ ಮಕ್ಕಳನ್ನು ದಾಖಲಿಸುತ್ತಿಲ್ಲ ಎಂದು ಚಿರೇಲಿ ಪಂಚಾಯತ್‌ನ ಧರ್ಮರಾಜ್ ಪಸ್ವಾನ್ ಹೇಳಿದ್ದಾರೆ.

ಮೋದಿ ಹತ್ಯೆ ಸಂಚಿನ ಕೇಸ್‌ NIA ತೆಕ್ಕೆಗೆ!

ಗ್ರಾಮದಲ್ಲಿ 30ರಿಂದ 35 ಮನೆಗಳಿದ್ದು, ಎಲ್ಲರೂ ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಶಾಲೆಯಲ್ಲಿ ಹಲಿಯುತ್ತಿರುವ ಜಾವ್ನಿ ಕುಮಾರಿ ಎಂಬಾಕೆಗೆ ಇಬ್ಬರು ಶಿಕ್ಷಕರ ವಿಶೇಷ ಕಾಳಜಿ ಸಿಗುತ್ತಿದೆ.  ಕೆಲವೊಮ್ಮೆ ಮಧ್ಯಾಹ್ನದ ಊಟವನ್ನು ಪಕ್ಕದ ಹೋಟೆಲಿನಿಂದಲೂ ತರಲಾಗುತ್ತದೆ. ಆಕೆ ಒಬ್ಬಳೇ ಇರುವುದರಿಂದ ಅಡುಗೆ ಮಾಡುವ ಬದಲು ಹೋಟೆಲ್‌ನಿಂದಲೂ ತರಿಸಿಕೊಳ್ಳುತ್ತಾರೆ.

9 ವಿದ್ಯಾರ್ಥಿಗಳ ಅಡ್ಮಿಷನ್ ಮಾಡಿಸಿದ್ದರೂ ಒಬ್ಬಳೇ ವಿದ್ಯಾರ್ಥಿನಿ  ಶಾಲೆಗೆ ಬರುತ್ತಿದ್ದಾಳೆ. ಸ್ವಲ್ಪ ಸಮಯದ ನಂತರ ಆಕೆಯೂ ಶಾಲೆಗೆ ಬರುವುದನ್ನು ನಿಲ್ಲಿಸಬಹುದು. ನಮ್ಮಿಂದಾಗುವಷ್ಟು ಕಲಿಸಿ ಆಕೆಯನ್ನು ಪರೀಕ್ಷೆಗೆ ಸಿದ್ಧಗೊಳಿಸುತ್ತೇವೆ ಎಂದು ಅಲ್ಲಿನ ಶಿಕ್ಷಕಿ ಪ್ರಿಯಾಂಕ ಕುಮಾರಿ ತಿಳಿಸಿದ್ದಾರೆ. ಸತ್ಯೇಂದ್ರ ಪ್ರಸಾದ್ ಎಂಬವರು ಇಲ್ಲಿ ಪ್ರಾಂಶುಪಾಲರಾಗಿದ್ದಾರೆ.