ಜೆಡಿಯು ಪಕ್ಷಾಧ್ಯಕ್ಷ ನಿತೀಶ್‌ ಕುಮಾರ್‌ ಅವರು ಎನ್‌ಡಿಎ ಕೂಟದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದು, 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ. ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆ.

ಬಿಹಾರ (ನ.20): ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಎನ್‌ಡಿಎ ಕೂಟದ ನಾಯಕರಾಗಿ ಜೆಡಿಯು ಪಕ್ಷಾಧ್ಯಕ್ಷ ನಿತೀಶ್‌ ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಇವರು 10ನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. 

ಪಟನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಇತರ ಕೇಂದ್ರ ಸಚಿವರು ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಸರ್ವಾನುಮತದಿಮದ ಆಯ್ಕೆ:

ನಿತೀಶ್‌ರನ್ನು ಕೂಟದ ನಾಯಕರನ್ನಾಗಿಸುವ ಪ್ರಸ್ತಾಪವನ್ನು ಜೆಡಿಯುನ ವಿಜಯ್‌ ಚೌಧರಿ ಸಲ್ಲಿಸಿದ್ದು, ಬಿಜೆಪಿ ನಾಯಕರಾದ ಸಾಮ್ರಾಟ್‌ ಚೌಧರಿ ಮತ್ತು ವಿಜಯ್‌ ಸಿನ್ಹಾ ಬೆಂಬಲಿಸಿದರು. ಬಳಿಕ ಔಪಚಾರಿಕವಾಗಿ ನಿತೀಶ್‌ರನ್ನು ತಮ್ಮ ನಾಯಕ ಎಂದು ಎನ್‌ಡಿಎ ಘೋಷಿಸಿತು.

ಎನ್‌ಡಿಎ ನಾಯಕನಾಗಿ ಆಯ್ಕೆಯಾಗುತ್ತಿದ್ದಂತೆ ನಿತೀಶ್‌, ರಾಜ್ಯಪಾಲ ಆರಿಫ್‌ ಮೊಹೊಮ್ಮದ್‌ ಖಾನ್‌ ಅವರನ್ನು ಭೇಟಿಯಾಗಿ ಹಾಲಿ ಇರುವ ಸಿಎಂ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದರು. ಇದನ್ನು ರಾಜ್ಯಪಾಲರು ಅಂಗೀಕರಿಸಿದರು. ಈ ವೇಳೆ, ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌, ಆರ್‌ಎಲ್‌ಎಂ ಅಧ್ಯಕ್ಷ ಉಪೇಂದ್ರ ಕುಶ್ವಾಹ, ಉತ್ತರಪ್ರದೇಶ ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ಕೂಡ ಅವರ ಜತೆಗಿದ್ದರು. ನಿತೀಶ್‌, ಎಲ್ಲಾ ಎನ್‌ಡಿಎ ಕ್ಷೇತ್ರಗಳಿಂದ ಗೆದ್ದ ಅಭ್ಯರ್ಥಿಗಳು ಹಾಗೂ ವಿವಿಧ ಪಕ್ಷಗಳ ಬೆಂಬಲ ಪತ್ರವನ್ನೂ ರಾಜ್ಯಪಾಲರಿಗೆ ಸಲ್ಲಿಸಿದರು.ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಕೂಟ 243ರಲ್ಲಿ 202 ಸೀಟುಗಳನ್ನು ಗೆದ್ದಿತ್ತು.