ಪ್ರಧಾನಿ ಸ್ಥಾನಕ್ಕೆ ಖರ್ಗೆ ಹೆಸರಿಗೆ ನನ್ನ ತಕರಾರಿಲ್ಲ, ನನಗೆ ಇಂಡಿಯಾ ಕೂಟದ ಸಂಚಾಲಕ ಹುದ್ದೆಯೂ ಬೇಡ: ನಿತೀಶ್ ಕುಮಾರ್
ಪ್ರಧಾನಿ ಸ್ಥಾನಕ್ಕೆ ಖರ್ಗೆ ಹೆಸರಿಗೆ ನನ್ನ ತಕರಾರಿಲ್ಲ. ನನಗೆ ಇಂಡಿಯಾ ಕೂಟದ ಸಂಚಾಲಕ ಹುದ್ದೆಯೂ ಬೇಡ. ಯಾವುದೇ ಅಸಮಾಧಾನ, ಬೇಸರ ಇಲ್ಲ ಜೆಡಿಯು ನಾಯಕ ನಿತೀಶ್.
ಪಾಟ್ನಾ (ಡಿ.26): ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿ ಎಂದು ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಹಾಗೂ ಆಪ್ ನೇತಾರ ಅರವಿಂದ ಕೇಜ್ರಿವಾಲ್ ಮಾಡಿದ ಶಿಫಾರಸಿನಿಂದ ಬೇಸತ್ತಿದ್ದರು ಎನ್ನಲಾದ ಜೆಡಿಯು ಮುಖಂಡ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮೌನ ಮುರಿದಿದ್ದಾರೆ. ‘ನಾನು ಕೂಟದ ಸಂಚಾಲಕ ಹುದ್ದೆ ಪಡೆಯುವ ಆಸೆ ವ್ಯಕ್ತಪಡಿಸಿಲ್ಲ ಹಾಗೂ ಖರ್ಗೆ ಹೆಸರು ಶಿಫಾರಸು ಆಗಿದ್ದಕ್ಕೆ ಯಾವುದೇ ಅಸಮಾಧಾನ ಹೊಂದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದಿನ ಪ್ರಧಾನಿ ಯಾರಾಗಬೇಕು? ಕರ್ನಾಟಕದಲ್ಲಿ ಮೋದಿಗೆ ಶೇ.65ರಷ್ಟು ಮತ!
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸ್ಪಷ್ಟನೆ ನೀಡಿದ ಅವರು, ‘ನನಗೆ ಯಾವುದೇ ಬೇಸರ (ಮಾಯೂಸಿ) ಹಾಗೂ ಅಸಮಾಧಾನ (ನಾರಾಜ್‌ಗಿ) ಇಲ್ಲ. ಇಂಡಿಯಾ ಕೂಟದ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ವಿಷಯ ಚರ್ಚೆಗೆ ಬಂದಾಗ, ನನಗೆ ಯಾವುದೇ ಆಸಕ್ತಿ ಇಲ್ಲ ಎಂದು ಹೇಳಿದೆ. ಆಗ ಇನ್ನೊಂದು ಹೆಸರು (ಖರ್ಗೆ) ಪ್ರಸ್ತಾಪವಾಯಿತು. ಆಗ ಅದಕ್ಕೆ ನನ್ನ ಸಹಮತವಿದೆ ಎಂದು ಹೇಳಿದೆ’ ಎಂದು ವಿವರಿಸಿದರು.
ಇನ್ನು ಇಂಡಿಯಾ ಕೂಟದ ಅಂಗಪಕ್ಷಗಳ ನಡುವೆ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆದಾಗ ‘ಬೇಗ ಸೀಟು ಹಂಚಿಕೆ ನಡೆಯಬೇಕು. ಏಕೆಂದರೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದೆ. ಶೀಘ್ರದಲ್ಲೇ ಸೀಟು ಹಂಚಿಕೆ ಆಗುವ ವಿಶ್ವಾಸವಿದೆ’ ಎಂದರು.
ಮುಂಬೈನಲ್ಲಿ ನಟ ಕಮಾಲ್ ಆರ್ ಖಾನ್ ಅರೆಸ್ಟ್, ನಾನು ಸತ್ತರೆ ಅದು ಕೊಲೆಯೆಂದು ತಿಳಿದುಕೊಳ್ಳಿ ಎಂದು ಟ್ವೀಟ್!
ಇತ್ತೀಚೆಗೆ ಖರ್ಗೆ ಹೆಸರು ಪ್ರಧಾನಿ ಹುದ್ದೆಗೆ ಪ್ರಸ್ತಾಪವಾಗಿದ್ದರಿಂದ ನಿತೀಶ್ ಹಾಗೂ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರು ಇಂಡಿಯಾ ಕೂಟದ ಸಭೆಯಿಂದ ಹೊರನಡೆದಿದ್ದರು ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.