ನಕಲಿ ಮದ್ಯ ಪ್ರಕರಣ ಸಾವಿನ ಸಂಖ್ಯೆ 30ಕ್ಕೆ ಏರಿಕೆ, 'ಇಮ್ಯುನಿಟಿ ಹೆಚ್ಚಿಸಿಕೊಳ್ಳಿ' ಎಂದ ಬಿಹಾರ ಸಚಿವ!
ಬಿಹಾರದ ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ ಈವರೆಗೂ 30 ಮಂದಿ ಸಾವು ಕಂಡಿದ್ದಾರೆ. ಆದರೆ ಮಹಾಮೈತ್ರಿಕೂಟ ಸರ್ಕಾರದ ಸಚಿವ ಸಮೀರ್ ಮಹಾಸೇತ್ ಈ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಈ ಕುರಿತಾಗಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ (ಡಿ.15): ಬಿಹಾರದ ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ ಈವರೆಗೆ 30 ಸಾವು ಕಂಡಿದ್ದು, ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎನ್ನುವ ಆತಂಕವಿದೆ. ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಛಾಪ್ರಾ ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಹಲವು ಮಂದಿಯ ದೃಷ್ಟಿ ಕಳೆದುಕೊಂಡಿರುವ ವರದಿಗಳು ಬಂದಿವೆ. ಬಿಹಾರದಲ್ಲಿ ಈ ಪರಿಸ್ಥಿತಿ ಇರುವಾಗ ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಗರಂ ಆಗಿದ್ದಾರೆ. ವಿರೋಧ ಪಕ್ಷಗಳಿಗೆ ಬಾಯ್ಮುಚ್ಚಿ ಕುಳಿತುಕೊಳ್ಳುವಂತೆ ಸದನದಲ್ಲಿಯೇ ಆವಾಜ್ ಹಾಕಿದ್ದಾರೆ. ಮತ್ತೊಂದೆಡೆ ಅವರ ಸರ್ಕಾರದ ಸಚಿವ ಸಮೀರ್ ಕುಮಾರ್ ಮಹಾಸೇಥ್, ಈ ಸಾವಿನ ಕುರಿತು ಅಸಂಬದ್ಧ ಹೇಳಿಕೆ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬುಧವಾರ ಕ್ರೀಡಾ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಮಹಾಮೈತ್ರಿಕೂಟ ಸರ್ಕಾರದ ಆರ್‌ಜೆಟಿ ಕೋಟಾದ ಸಚಿವ ಸಮೀರ್ ಮಹಾಸೇಥ್, 'ಕ್ರೀಡೆ ವ್ಯಾಮೋಹ ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಶಕ್ತಿ ಹೆಚ್ಚುತ್ತದೆ. ಆಗ ವಿಷಕಾರ ಮದ್ಯ ಕುಡಿದರೂ ನೀವು ಅರಗಿಸಿಕೊಳ್ಳುತ್ತೀರಿ' ಎಂದು ಹೇಳಿದ್ದಾರೆ.
ಮಹಾಸೇಥ್ ತಮ್ಮ ಮಾತನ್ನು ಅಲ್ಲಿಗೆ ನಿಲ್ಲಿಸಿಲ್ಲ. 'ಬಿಹಾರದಲ್ಲಿ ಸಿಗುವ ಮದ್ಯವು ವಿಷವಾಗಿದೆ. ಹಾಗೇನಾದರೂ ವಿಷಕಾರಿ ಮದ್ಯವನ್ನು ಕುಡಿದು ಸಾಯವುದನ್ನು ತಪ್ಪಿಸಿಕೊಳ್ಳಬೇಕು ಎಂದು ಬಯಸಿದರೆ, ನಿಮ್ಮ ರೋಗನಿರೋಧಕ ಶಕ್ತಿ (ಇಮ್ಯುನಿಟಿ) ಹೆಚ್ಚಿಸಿಕೊಳ್ಳಿ' ಎಂದು ಅಸಂಬದ್ಧವಾಗಿ ಮಾತನಾಡಿದ್ದಾರೆ. ಈ ಹಿಂದೆ ನಕಲಿ ಮದ್ಯ ಸೇವನೆಯಿಂದ ಸಾವಿನ ಬಗ್ಗೆ ಕೇಳಿದ ಪ್ರಶ್ನೆಗೆ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಬಿಜೆಪಿಯ ಮೇಲೆಯೇ ವಾಗ್ದಾಳಿ ನಡೆಸಿದ್ದರು.
ನೀವು ಕುಡಿಯುವುದನ್ನೇ ಬಿಟ್ಟುಬಿಡಬೇಕು. ಇಲ್ಲಿಗೆ ಬರುವುದು ಮದ್ಯವಲ್ಲ, ವಿಷ. ಕ್ರೀಡೆಯಿಂದ ನೀವು ಶಕ್ತಿಯನ್ನು ಹೆಚ್ಚಿಸಿಕೊಂಡಲ್ಲಿ ಮಾತ್ರವೇ ವಿಷಕಾರಿ ಮದ್ಯವನ್ನೂ ಕುಡಿದರೂ ಅರಗಿಸಿಕೊಳ್ಳಬಹುದು. ಜನರು ಅದನ್ನು ಮಾಡಬೇಕು. ಇಲ್ಲದಿದ್ದರೆ ಮದ್ಯ ಕುಡಿಯುವುದನ್ನೇ ಬಿಡಬೇಕು. ನಮ್ಮಲ್ಲಿ ಮದ್ಯ ನಿಷೇಧವಿದೆ. ಹಾಗಿದ್ದರೂ ಕೆಲವರು ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಮಹಾಸೇಥ್ ಮಾತನಾಡಿದ್ದಾರೆ.
ಸಾವಿನ ಲೇವಡಿ ಮಾಡಿದ ಆರ್‌ಜೆಡಿ ಶಾಸಕ: ಮತ್ತೊಂದೆಡೆ, ಆರ್‌ಜೆಡಿ ಶಾಸಕ ರಾಂಬಲಿ ಚಂದ್ರವಂಶಿ ಅವರು ನಕಲಿ ಮದ್ಯದಿಂದ ಸಾವನ್ನಪ್ಪಿದ ಜನರ ಬಗ್ಗೆ ಲೇವಡಿ ಮಾಡಿದ್ದಾರೆ. ಕುಡಿತದ ಚಟದಿಂದ ಮಾತ್ರವೇ ಜನ ಸಾಯುತ್ತಿಲ್ಲ. ಬೇರೆ ಕಾಯಿಲೆಗಳು ಮತ್ತು ಅಪಘಾತಗಳಿಂದ ಜನರು ಸಾಯುತ್ತಿದ್ದಾರೆ, ಸಾಯುವುದು ಅಥವಾ ಬದುಕುವುದು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 19 ಸಾವು, ವಿಧಾನಸಭೆಯಲ್ಲಿ ಪ್ರತಿಪಕ್ಷಕ್ಕೆ ಬಾಯ್ಮುಚ್ಚಿ ಎಂದ ನಿತೀಶ್ ಕುಮಾರ್!
ಅಪ್ಪ-ಮಗ ಸಾವು: ನಕಲಿ ಮದ್ಯ ಸೇವಿಸಿ ಈವರೆಗೂ 30 ಸಾವುಗಳಾಗಿವೆ. ಇವರೆಲ್ಲರ ಹೆಸರನ್ನೂ ಕೂಡ ಸರ್ಕಾರ ಪ್ರಕಟಿಸಿದೆ. ಇದರಲ್ಲಿ ಅಪ್ಪ, ಮಗ ಜೋಡಿ ಕೂಡ ಸಾವು ಕಂಡಿದೆ. ಛಾಪ್ರಾದ ನಿವಾಸಿಗಳಾದ ದಶರತ್ ಮಹ್ತೋ ಹಾಗೂ ಕೇಸರ್ ಮಹ್ತೋ ಸಾವು ಕಂಡ ಅಪ್ಪ-ಮಗ ಜೋಡಿ.
ಬಿಹಾರದ ಬಡ ಶಾಸಕನಿಗೆ ಸಿಕ್ಕಿತು ಸರ್ಕಾರಿ ನಿವಾಸ
ನಕಲಿ ಮದ್ಯ ಸೇವಿಸಿ ಎರಡು ಡಜನ್‌ಗೂ ಹೆಚ್ಚು ಮಂದಿ ಸಾವನ್ನಪ್ಪಿದ ನಂತರ ಛಾಪ್ರಾದ ಜನರಲ್ಲಿಯೇ ಇವರ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಅವರು ನಿರಂತರವಾಗಿ ಕುಡಿಯುತ್ತಿದ್ದರು ಎನ್ನುವ ಮಾಹಿತಿ ನೀಡಿದ್ದಾರೆ.. ಎಲ್ಲಿಂದಲೂ ಅವರಿಗೆ ಮದ್ಯ ಸರಬರಾಜು ಆಗುತ್ತಿತ್ತು. ಈಗಲೂ ಕೂಡ ಛಾಪ್ರಾದಲ್ಲಿ ಸಿಗುತ್ತಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಜ್ಯದಲ್ಲಿ ಮದ್ಯ ನಿಷೇಧವಿದೆ. ಮದ್ಯ ಇಷ್ಟು ಸುಲಭವಾಗಿ ಸಿಗಲು ಸಾಧ್ಯವೇ ಇಲ್ಲ. ಹಾಗಿದ್ದತೂ ನಕಲಿ ಮದ್ಯದಿಂದ ಜನ ಸಾವು ಕಂಡಿದ್ದು ಹೇಗೆ ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ. ಬಿಹಾರದಲ್ಲಿ ಕಳೆದ ಆರು ವರ್ಷಗಳಿಂದ ಮದ್ಯ ನಿಷೇಧ ಜಾರಿಯಲ್ಲಿದೆ.