ಇಡೀ ಗ್ರಾಮವನ್ನೇ ಕತ್ತಲಲ್ಲಿಡುತ್ತಿದ್ದ ಇಲೆಕ್ಟ್ರಿಷಿಯನ್ ಗೆಳತಿಯ ಭೇಟಿ ಮಾಡಲು ಇಡೀ ಗ್ರಾಮಕ್ಕೆ ಪವರ್ ಕಟ್ ಬಿಹಾರದ ಪೂರ್ಣಿಮಾ ಜಿಲ್ಲೆಯ ಗ್ರಾಮದಲ್ಲಿ ಘಟನೆ
ಬಿಹಾರ: ಪ್ರೀತಿಯಲ್ಲಿ ಬಿದ್ದವರು ಹುಚ್ಚರಾಗಿರುತ್ತಾರೆ ಎಂಬ ಮಾತುಗಳನ್ನು ನಾವು ನೀವು ಆಗಾಗ ಕೇಳಿರುತ್ತೇವೆ. ಆದರೆ ಈ ಮಾತನ್ನು ಅಕ್ಷರಶಃ ಸಾಬೀತುಪಡಿಸುವ ಘಟನೆಯೊಂದು ಬಿಹಾರದಲ್ಲಿ(Bihar) ನಡೆದಿದೆ. ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಭೇಟಿಯಾಗುವ ಸಲುವಾಗಿ ಇಡೀ ಗ್ರಾಮವನ್ನೇ ಕತ್ತಲಲ್ಲಿರಿಸಿದ್ದಾನೆ. ಬಿಹಾರದ ಪೂರ್ಣಿಮಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಹುಶಃ ಈ ಇಲೆಕ್ಟ್ರಿಷಿಯನ್ ಒಂದು ಸಲ ಹೀಗೆ ಮಾಡಿದರೆ ಸಿಕ್ಕಿ ಬೀಳುತ್ತಿರಲಿಲ್ಲವೇನೋ ಆದರೆ ಈತ ಇದೇ ಆಟವನ್ನು ಮತ್ತೆ ಮತ್ತೆ ಆಡಿದ್ದಾನೆ. ಇದರಿಂದ ಪೂರ್ಣಿಮಾ (Purnia) ಜಿಲ್ಲೆಯ ಗಣೇಶ್‌ಪುರ (Ganeshpura) ಗ್ರಾಮದ ಜನ ಕತ್ತಲಲ್ಲಿ ಪರದಾಡುವಂತಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದಲೂ ಗ್ರಾಮದಲ್ಲಿ ಇದೇ ಪರಿಸ್ಥಿತಿ ಇತ್ತು ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಮಧ್ಯೆ ಪಕ್ಕದ ಗ್ರಾಮದಲ್ಲಿ ಈ ರೀತಿ ವಿದ್ಯುತ್ ಆಗಾಗ ಕೈ ಕೊಡುವ ಯಾವ ಸಮಸ್ಯೆಯೂ ಇಲ್ಲ ಎಂಬುದು ತಿಳಿದು ಬಂದಿದೆ. ಹೀಗಾಗಿ ನಮ್ಮ ಗ್ರಾಮದಲ್ಲಿ ಮಾತ್ರ ಏಕೆ ಈ ಸಮಸ್ಯೆ ಎಂದು ಚರ್ಚಿಸಲು ಶುರು ಮಾಡಿ ನಿಜವಾದ ಕಾರಣ ತಿಳಿಯಲು ಹೊರಟ ಗ್ರಾಮಸ್ಥರಿಗೆ ಕೊನೆಗೂ ತಮ್ಮ ಗ್ರಾಮವನ್ನು ಕತ್ತಲಲ್ಲಿಟ್ಟಿರುವುದು ಓರ್ವ ಇಲೆಕ್ಟ್ರಿಷಿಯನ್ (electrician) ಎಂಬುದು ಅರಿವಿಗೆ ಬಂದು ಶಾಕ್‌ಗೆ ಒಳಗಾಗಿದ್ದಾರೆ. ನಂತರ ಸತ್ಯದ ಅರಿವಾದ ಗ್ರಾಮಸ್ಥರು ಈತ ಏಕೆ ಇಡೀ ಗ್ರಾಮಕ್ಕೆ ಆಗಾಗ ವಿದ್ಯುತ್ ಕಡಿತಗೊಳಿಸುತ್ತಿದ್ದಾನೆ ಎಂಬುದನ್ನು ತಿಳಿಯಲು ಅವನನ್ನು ಹಿಂಬಾಲಿಸಿ ರೆಡ್ ಹ್ಯಾಂಡ್ (Red-hand)ಆಗಿ ಹಿಡಿಯಲು ಪ್ಲಾನ್ ಮಾಡಿದ್ದಾರೆ. ಹಾಗೆಯೇ ಗ್ರಾಮದಲ್ಲಿ ವಿದ್ಯುತ್ ಕಡಿತಗೊಂಡಂತೆ (Power Cut) ಗ್ರಾಮಸ್ಥರು ಈತನ ಹಿಂದೆ ಬಿದ್ದಿದ್ದು ಈತ ಎಲ್ಲಿ ಹೋಗುತ್ತಾನೆ ಎಂದು ಹಿಂಬಾಲಿಸಿದ್ದಾರೆ. ಈ ವೇಳೆ ಗ್ರಾಮದ ಶಾಲೆಯೊಂದರಲ್ಲಿ ಈತ ತನ್ನ ಗೆಳತಿಯೊಂದಿಗೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.
ವಧುವಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಭಗ್ನಪ್ರೇಮಿ
ಕೇವಲ ತನ್ನ ಹುಚ್ಚಿಗೆ ಇಡೀ ಗ್ರಾಮವನ್ನೇ ಕತ್ತಲಲ್ಲಿಟ್ಟು ತೊಂದರೆಗೀಡು ಮಾಡುತ್ತಿದ್ದ ಇಲೆಕ್ಟ್ರಿಷಿಯನ್ ವರ್ತನೆಯಿಂದ ಸಿಟ್ಟುಗೊಂಡ ಗ್ರಾಮದ ಜನ ಸಿಕ್ಕಿಬಿದ್ದ ಆತನಿಗೆ ಚೆನ್ನಾಗಿ ಬಾರಿಸಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಆತನ ಮೆರವಣಿಗೆ ಮಾಡಿದ್ದಾರೆ. ಬರೀ ಇಷ್ಟೇ ಅಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾದ ಗ್ರಾಮಸ್ಥರು ಸರಪಂಚ್ ಹಾಗೂ ಇತರ ಗ್ರಾಮಸಭೆ ಸದಸ್ಯರ ಸಮ್ಮುಖದಲ್ಲಿ ಆತನ ಗೆಳತಿಯೊಂದಿಗೆ ಆತನಿಗೆ ವಿವಾಹವನ್ನು ಮಾಡಿದ್ದಾರೆ.
ತನ್ನ ಗೆಳತಿಯ ಭೇಟಿಗಾಗಿ ಇಡೀ ಗ್ರಾಮಕ್ಕೆ ವಿದ್ಯುತ್ ಕಡಿತಗೊಳಿಸುತ್ತಿದ್ದ ಇಲೆಕ್ಟ್ರಿಷಿಯನ್ ಗ್ರಾಮದ ಸರಪಂಚ್ ಹಾಗೂ ಗ್ರಾಮ ಪಂಚಾಯತ್‌ನ ಸದಸ್ಯರ ಸಮ್ಮುಖದಲ್ಲಿ ತನ್ನ ಗೆಳತಿಯನ್ನು ಮದುವೆಯಾಗಿದ್ದಾನೆ ಎಂದು ಗ್ರಾಮಸ್ಥ ಮಾರಾರ್ ರಾಮ್ ಮುರ್ಮು ಗುರುವಾರ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಎಲೆಕ್ಟ್ರಿಷಿಯನ್ ವಿರುದ್ಧ ಯಾವುದೇ ಪೊಲೀಸ್ ಕೇಸ್ ದಾಖಲಿಸಿಲ್ಲ ಮತ್ತು ದೂರು ಬಂದರೆ ಮಾತ್ರ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಫ್ರಾನ್ಸ್‌ನ ಪುರುಷರನ್ನು ಅತ್ಯಂತ ರೋಮ್ಯಾಂಟಿಕ್ ಎಂದು ಹೇಳುವುದು ಯಾಕೆ ?