ಬೆಂಗಳೂರು (ಅ. 23): ಬಿಹಾರ ಚುನಾವಣೆಗೆ ಮತದಾನದ ದಿನಾಂಕ ಹತ್ತಿರ ಬರುತ್ತಿದ್ದಂತೆ ಲಾಲು ಪುತ್ರ ತೇಜಸ್ವಿ ಯಾದವ್‌ ಸಭೆಗೆ ಜನಸಾಗರ ಹರಿದು ಬರುತ್ತಿದೆ. ಸರ್ಕಾರ ಬಂದ ಒಂದು ಗಂಟೆಯಲ್ಲಿ ಮೊದಲ ಸಂಪುಟ ಸಭೆ ನಡೆಸಿ ಹತ್ತು ಲಕ್ಷ ಉದ್ಯೋಗ ಕೊಡುವ ತೇಜಸ್ವಿ ಜುಮ್ಲಾ ಕೆಲಸ ಮಾಡುತ್ತಿದೆ.

ಈಗಿನ ಯುವಜನತೆ 'ಕೇಸರಿ' ಯತ್ತ ವಾಲುತ್ತಿರುವುದೇಕೆ?

ಇದಕ್ಕೆ ಬದಲಾಗಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಭೆಗಳಲ್ಲಿ ಕಡಿಮೆ ಜನ ಕಾಣುತ್ತಿದ್ದಾರೆ. ಈಗ ಬಿಜೆಪಿ ಮತ್ತು ಜೆಡಿಯು ಜನಬೆಂಬಲಕ್ಕಾಗಿ ಮೋದಿ ಸಭೆ ಮೇಲೆ ನಿರೀಕ್ಷೆ ಇಟ್ಟುಕೊಂಡಿದೆ. ಒಂದು ವೇಳೆ ಚಿರಾಗ್‌ ಪಾಸ್ವಾನ್‌ ಮತ್ತು ತೇಜಸ್ವಿ ಯಾದವ್‌ ಇನ್ನಷ್ಟು ಹತ್ತಿರ ಬಂದರೆ ಜೆಡಿಯು ಜೊತೆ ಬಿಜೆಪಿಯೂ ಮತ ವರ್ಗಾವಣೆಯ ಸಂಕಷ್ಟಎದುರಿಸಲಿದೆ. ಬಿಜೆಪಿ ಮತ್ತು ನಿತೀಶ್‌, ಲಾಲು ಇಲ್ಲದೇ ಪುತ್ರನ ಆಟ ನಡೆಯೋಲ್ಲ ಎಂದು ಕೊಂಡಿದ್ದವು. ಆದರೆ ಗ್ರೌಂಡ್‌ನಿಂದ ಬರುತ್ತಿರುವ ವರದಿಗಳು ಬೇರೆಯೇ ಸಂಕೇತ ಕೊಡುತ್ತಿವೆ

ಬೆಳಗಾವಿ ಟಿಕೆಟ್‌ ಯಾರಿಗೆ?

ಉಪ ಚುನಾವಣೆಗಳು ಮುಗಿದ ನಂತರ ಅತಿ ಹೆಚ್ಚು ಕುತೂಹಲ ಇರುವುದು ಬೆಳಗಾವಿ ಬಿಜೆಪಿ ಟಿಕೆಟ್‌ ಬಗ್ಗೆ. ಸುರೇಶ್‌ ಅಂಗಡಿ ಕುಟುಂಬದವರು ಪತ್ನಿ ಮಂಗಳಾ ಅಥವಾ ಪುತ್ರಿ ಶ್ರದ್ಧಾಗೆ ಟಿಕೆಟ್‌ ಕೊಡುವಂತೆ ಕೇಳಿದ್ದಾರೆ. ಆದರೆ ಅನಂತಕುಮಾರ್‌, ಮನೋಹರ ಪರ್ರಿಕರ್‌ ಕುಟುಂಬಕ್ಕೆ ಟಿಕೆಟ್‌ ನಿರಾಕರಿಸಿದ ಮೇಲೆ ಅಂಗಡಿ ಕುಟುಂಬಕ್ಕೆ ಕೊಡುತ್ತಾರಾ ಎನ್ನುವುದು ಪ್ರಶ್ನೆ.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ತಮ್ಮ ಪುತ್ರ ಅಮರನಾಥ್‌ಗೆ ಟಿಕೆಟ್‌ ಕೇಳುತ್ತಿದ್ದರೆ, ಶಾಸಕರಾದ ಅಭಯ ಪಾಟೀಲ್‌, ಬೆನಕೆ ಯಾದವಾದ್‌ ಮತ್ತು ಆನಂದ ಮಾಮನಿ, ವಕೀಲ ಮೃತ್ಯುಂಜಯ ಜಿರಲಿಗೆ ಟಿಕೆಟ್‌ ಕೇಳುತ್ತಿದ್ದಾರೆ. ಜಿರಲಿ ಪಂಚಮಸಾಲಿ ಸಮುದಾಯದವರು. ಇನ್ನು ರಮೇಶ್‌ ಕತ್ತಿ ಮತ್ತು ಪ್ರಭಾಕರ ಕೋರೆ ಇಬ್ಬರಿಗೂ ಕೂಡ ಆಸಕ್ತಿಯಿದೆ. ಆದರೆ ಯಾರ ಬಳಿಯೂ ಇನ್ನೂ ಮಾತಾಡಲಿಲ್ಲ. ಇನ್ನು ಕಾಂಗ್ರೆಸ್‌ನಿಂದ ಫೈಟ್‌ ಆಗಬೇಕಾದರೆ ಚಿಕ್ಕೋಡಿಯ ಪ್ರಕಾಶ್‌ ಹುಕ್ಕೇರಿ ಕಣಕ್ಕೆ ಇಳಿಯುವ ಸಾಧ್ಯತೆ ಜಾಸ್ತಿ ಇದೆ.

.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

'ಇಂಡಿಯಾ ಗೇಟ್' ದೆಹಲಿಯಿಂದ ಕಂಡ ರಾಜಕಾರಣ