ಬೆಂಗಳೂರು (ಅ. 23): ಯಾವುದೇ ಸಿದ್ಧಾಂತ ವಿಚಾರಧಾರೆ ಅತಿ ಎನ್ನಿಸುವಷ್ಟುಅಳವಡಿಕೆಯಾದಾಗ ಸಾಮಾನ್ಯ ಜನಮಾನಸ ಅದರ ಇನ್ನೊಂದು ಬದಿಗೆ ನೋಡುವುದು ಸಾಮಾನ್ಯ ಸಾಮಾಜಿಕ ಪ್ರಕ್ರಿಯೆ. ಅತಿರೇಕದ ಸಮಾಜವಾದದ ನಂತರದ ಸೋವಿಯತ್‌, ಅತಿರೇಕದ ರಾಷ್ಟ್ರವಾದದ ನಂತರದ ಜರ್ಮನಿಯನ್ನು ಅಧ್ಯಯನ ಮಾಡಿದರೆ ಸಿದ್ಧಾಂತಗಳನ್ನು ಜನರು ಒಪ್ಪಿ ಅಪ್ಪಿಕೊಳ್ಳುವುದು, ನಂತರ ಕ್ರಮೇಣ ಭ್ರಮನಿರಸನಗೊಂಡು ಮತ್ತೊಂದು ಕಡೆ ನೋಡತೊಡಗುವುದು ಹೊಸದೇನಲ್ಲ ಎಂದು ಅರ್ಥವಾಗುತ್ತದೆ.

ಕಳೆದ 4 ವರ್ಷಗಳಲ್ಲಿ ಕೆಂಪು ಬಂಗಾಳ ಕೇಸರಿ ಆಗುತ್ತಿರುವುದನ್ನು ಇದೇ ಪರಿಪ್ರೇಕ್ಷ್ಯದಿಂದ ನೋಡಬೇಕಾಗುತ್ತದೆ. ಕೇರಳದಲ್ಲಿ ಬಿಜೆಪಿಯ ಅಸ್ತಿತ್ವ ಇರದೇ ಇದ್ದರೂ 50 ವರ್ಷಗಳಿಂದ ಸಂಘದ ಚಟುವಟಿಕೆ ಜೋರಾಗಿತ್ತು. ಆದರೆ ಅದು ಯಾವುದೂ ಇರದಿದ್ದ ಬಂಗಾಳದಲ್ಲಿ 2019ರ ಲೋಕಸಭೆಯಲ್ಲಿ ತೃಣಮೂಲ 43% ವೋಟು, 22 ಸೀಟು ಪಡೆದರೆ ಬಿಜೆಪಿಗೆ ಸಿಕ್ಕಿದ್ದು 40% ವೋಟು, 18 ಸೀಟು.

ಹೀಗಾಗಿ ಮುಂದಿನ ವರ್ಷದ ಬಂಗಾಳದ ವಿಧಾನಸಭಾ ಚುನಾವಣೆ ಕೂಡ ಮಮತಾ ವರ್ಸಸ್‌ ಕೇಸರಿ ನಡುವೆ ನಡೆಯಲಿದೆ. ಅಲ್ಲಿ ಈಗ ಕೆಂಪು ಪಾರ್ಟಿಗಳು, ಕಾಂಗ್ರೆಸ್‌ ಎಲ್ಲವೂ ಗೌಣ. ಕೆಲವರು ಹೇಳುವ ಪ್ರಕಾರ, ಈ ದಶಕದ ಅತ್ಯಂತ ರಕ್ತಸಿಕ್ತ ಚುನಾವಣೆ ಬಂಗಾಳದಲ್ಲಿ ಮುಂದಿನ ವರ್ಷ ನಡೆಯಲಿದೆ.

ಮೋದಿ ಸಂಪುಟಕ್ಕೆ ದೊಡ್ಡ ಹೊಡೆತ ಕೊಡುತ್ತಿದೆ ಘಟಾನುಗಟಿಗಳ ವಿದಾಯ

ಈಗ ಕೇಸರಿ ಒಂದು ಫ್ಯಾಷನ್‌

ಭಾರತದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನಡೆಯುವುದು ಚುನಾವಣಾ ಕಾದಾಟ ಮಾತ್ರ. ಇಬ್ಬರ ಆರ್ಥಿಕ ನಿಲುವುಗಳೂ ಒಂದೇ. ಧರ್ಮದ ವ್ಯಾಖ್ಯೆ ಬೇರೆ ಬೇರೆ ಇದ್ದರೂ ತುಂಬಾ ವೈಚಾರಿಕ ಕಿತ್ತಾಟ ಇಲ್ಲ. ಜಗಳ ಇರುವುದು ಮೇಲ್ನೋಟಕ್ಕೆ ಮಾತುಗಳಲ್ಲಿ ಮಾತ್ರ. ಆದರೆ ಕೇಸರಿಗೆ ಸೈದ್ಧಾಂತಿಕ ತಿಕ್ಕಾಟ ಕೊಡುವ ಶಕ್ತಿ ಇರುವುದು ಕಮ್ಯುನಿಸ್ಟರಿಗೆ ಮಾತ್ರ. ಅದರ ಅರ್ಥ ಎಡ ರಾಜಕೀಯ ಪಕ್ಷಗಳಾದ ಸಿಪಿಐ, ಸಿಪಿಎಂಗಲ್ಲ. ಬದಲಾಗಿ ಹಿಂದುತ್ವವನ್ನು ವಿರೋಧಿ​ಸುವ ನೇರ ರಾಜಕೀಯದಲ್ಲಿ ಇಲ್ಲದ ಸಮೂಹಕ್ಕೆ.

ಒಂದು ಕಾಲದಲ್ಲಿ ದೇಶದ ಯುವಕರ ಮೇಲೆ ಸಮಾಜವಾದ, ಕಮ್ಯುನಿಸ್ಟ್‌ ಕ್ರಾಂತಿಯ ಪ್ರಭಾವ ಇತ್ತು. ಆ ಜಾಗದಲ್ಲಿ ಈಗ ಬಲಪಂಥೀಯ ಸಂಘದ ರಾಷ್ಟ್ರವಾದದ ಸಿದ್ಧಾಂತ ಬಂದು ಕುಳಿತಿದೆ. ಒಂದು ಕಾಲದಲ್ಲಿ ಚೆಗುವೆರಾ ಫೋಟೋ ಹಾಕಿಕೊಂಡು ಸಮಾಜವಾದಿ ಕಮ್ಯುನಿಸ್ಟ್‌ ಕ್ರಾಂತಿಯ ಕನಸು ಎಂದು ಹೇಳಿಕೊಳ್ಳುವುದು ಯುವಕರಿಗೆ ಫ್ಯಾಷನ್‌ ಆಗಿತ್ತು. ಈಗ ನಾನು ಬಲಪಂಥೀಯ, ಮೋದಿ ಭಕ್ತ, ಹಿಂದುತ್ವವಾದಿ ಎಂದು ಹೇಳಿಕೊಳ್ಳುವುದು ಫ್ಯಾಷನ್‌ ಆಗಿದೆ. ಹೀಗಾಗಿ ದೇಶದಲ್ಲೆಡೆ ಬಿಜೆಪಿ ಪ್ರಭಾವ ಬೆಳೆದಂತೆ ಬಂಗಾಳದಲ್ಲಿ ಕೂಡ ಕೆಂಪು ಪಾರ್ಟಿಗಳ ನಿರ್ವಾತವನ್ನು ಕೇಸರಿ ತುಂಬಿಕೊಳ್ಳುತ್ತಿದೆ.

ಮಮತಾರ ಅತಿರೇಕವನ್ನು ಪ್ರತಿಭಟಿಸುವ ಶಕ್ತಿ 30 ವರ್ಷ ಅಧಿ​ಕಾರ ಉಂಡ ಎಡ ಪಕ್ಷಗಳಲ್ಲಿ ಉಳಿದಿಲ್ಲ. ಇದು ಸಹಜವಾಗಿ ಯುವಕರನ್ನು ಬಿಜೆಪಿ ಕಡೆ ಸೆಳೆಯುತ್ತಿದೆ ಅನ್ನಿಸುತ್ತಿದೆ. ಒಂದು ಅಂದಾಜಿನ ಪ್ರಕಾರ ಬಂಗಾಳ ದಕ್ಷಿಣದ, ಪಶ್ಚಿಮದ ರಾಜ್ಯಗಳಿಗಿಂತ 20 ವರ್ಷ ಹಿಂದಿದೆ. ಬಿಜೆಪಿಯತ್ತ ಬಂಗಾಳಿಗರು ಹೊರಳಲು ಇದು ಕೂಡ ಪ್ರಮುಖ ಕಾರಣ. ಒಂದು ಕಾಲದಲ್ಲಿ ಬಂಗಾಳ ನಮಗಿಂತ 20 ವರ್ಷ ಮುಂದೆ ಇತ್ತು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ