ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಹೇಳಿದ್ದ ಎಕ್ಸಿಟ್ ಪೋಲ್, ಸರಿಯಾದ ನಂಬರ್ ಹೇಳಿದ್ದು ಯಾರು?, ಎನ್‌ಡಿಎ 202 ಸ್ಥಾನ ಗೆದ್ದು ಹೊಸ ದಾಖಲೆ ನಿರ್ಮಿಸಿದೆ. ಈ ಎಕ್ಸಿಟ್ ಪೋಲ್‌ಗಳು ಎನ್‌ಡಿಎ ಗೆಲುವನ್ನು ಭವಿಷ್ಯ ನುಡಿದಿತ್ತು. ಆದರೆ ಹತ್ತಿರದ ಸಂಖ್ಯೆ ಹೇಳಿದ್ದು ಯಾರು?

ನವದೆಹಲಿ (ನ.16) ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ 202 ಸ್ಥಾನ ಗೆದ್ದು ಐತಿಹಾಸಿಕ ದಾಖಲೆ ಬರೆದಿದೆ. ಮಹಾಘಬಂದನ್ ಮಕಾಡೆ ಮಲಗಿದ್ದರೆ, ಎನ್‌ಡಿಎ ದೇಶಾದ್ಯಂತ ಸಂಭ್ರಮ ಆಚರಿಸುತ್ತಿದೆ. ವಿಶೇಷ ಅಂದರೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಬಹುತೇಕ ಎಲ್ಲಾ ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿತ್ತು. ಆದರೆ 202 ಸ್ಥಾನದ ನಿರೀಕ್ಷೆ ಮಾಡಿರಲಿಲ್ಲ. ಆದರೆ ಎಕ್ಸಿಟ್ ಪೋಲ್ ನುಡಿದ ಭವಿಷ್ಯ ನಿಜವಾಗಿದೆ. ಈ ಮೂಲಕ ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಬಿಹಾರದಲ್ಲಿ ಎರಡು ಹಂತದಲ್ಲಿ ಮತದಾನ ನಡೆದಿತ್ತು. ನವೆಂಬರ್ ಹಾಗೂ ನವೆಂಬರ್ 11ರಂದು ಮತದಾನ ನಡೆದಿತ್ತು. 11ರ ಮತದಾನ ಬಳಿಕ ಎಕ್ಸಿಟ್ ಪೋಲ್ ಎನ್‌ಡಿಎ ಗೆಲುವು ದಾಖಲಿಸಿದೆ ಎಂದಿತ್ತು. 243 ಸಂಖ್ಯಾ ಬಲದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಗರಿಷ್ಠ ಅಂದರೆ ಶೇಕಡಾ 67.13ರಷ್ಟು ಮತದಾನವಾಗಿತ್ತು. ಬಹುತೇಕ ಎಕ್ಸಿಟ್ ಪೋಲ್‍ಗಳು ಜೆಡಿಯು ಸೇರಿರುವ ಎನ್‍ಡಿಎ ಕ್ಲೀನ್ ಸ್ವೀಪ್ ಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದವು. ಆದರೆ, ಒಂದು ಸಮೀಕ್ಷೆ ಮಾತ್ರ ಮಹಾಘಟಬಂಧನ್ ಸರಳ ಬಹುಮತದ ಮೂಲಕ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎಂದು ಹೇಳಿತ್ತು. ಇತರ ಎಲ್ಲಾ ಎಕ್ಸಿಟ್ ಪೋಲ್ ಎನ್‌ಡಿಎ ಗೆಲುವು ಹೇಳಿತ್ತು. ಆದರೆ ಮಹಾಘಟಬಂದನ್ , ಕಾಂಗ್ರೆಸ್ ನಾಯಕರು ಮತಗಟ್ಟೆ ಸಮೀಕ್ಷೆ ಸುಳ್ಳಾಗಲಿದೆ ಎಂದಿದ್ದರು.

ಎಕ್ಸಿಟ್ ಪೋಲ್ ಹೇಳಿದ್ದೇನು?

ಎಕ್ಸಿಟ್ ಪೋಲ್ ನುಡಿದ ಭವಿಷ್ಯದಲ್ಲಿ ಸಂಖ್ಯೆಯಲ್ಲಿ ಹತ್ತಿರದ ನಂಬರ್ ಹೇಳಿದ ಸಂಸ್ಥೆ ಕಾಮಾಖ್ಯಾ ಅನಾಲಿಟಿಕ್. ಕಾಮಾಖ್ಯ ತನ್ನ ಸಮೀಕ್ಷೆಯಲ್ಲಿ ಎನ್‌ಡಿಎ 167 ರಿಂದ 187 ಸ್ಥಾನ ಗೆಲ್ಲಲಿದೆ ಎಂದಿತ್ತು. ಇದು ಅಂತಿಮ ಫಲಿತಾಂಶದ ಹತ್ತಿರ ಭವಿಷ್ಯವಾಗಿದೆ. ಇನ್ನು

ಮ್ಯಾಟ್ರಿಜ್ (147-167), ಟುಡೇಸ್ ಚಾಣಕ್ಯ (148-172) ಸಹ ಎನ್‍ಡಿಎಗೆ ಸ್ಥಿರ ಬಹುಮತದ ಮುನ್ಸೂಚನೆ ನೀಡಿತ್ತು. ಎನ್‌ಡಿಎ 202 ಸ್ಥಾನ ಗೆದ್ದುಕೊಂಡಿದೆ. ಸಂಖ್ಯೆ ವಿಚಾರ ಹೊರತುಪಡಿಸಿದರೆ ಅಭೂತಪೂರ್ವ ಗೆಲುವನ್ನು ಸಮೀಕ್ಷೆಗಳು ಸೂಚಿಸಿತ್ತು. ಮಹಾಘಟಬಂಧನ್ (ಎಂಜಿಬಿ) ಕಾಮಾಕ್ಯ (54-74), ಮ್ಯಾಟ್ರಿಜ್ (70-90) ಮತ್ತು ಟುಡೇಸ್ ಚಾಣಕ್ಯ (65-89) ರ ಅಂದಾಜುಗಳು ಫಲಿತಾಂಶದೊಂದಿಗೆ ಹೊಂದಿಕೆಯಾಗಿದೆ.

ಇನ್ನು ಸಣ್ಣ ಪಕ್ಷಗಳ ಭವಿಷ್ಯವಾಣಿಗಳು ಸಹ ಸಾಕಷ್ಟು ನಿಖರವಾಗಿದ್ದವು. ಉದಾಹರಣೆಗೆ ಮ್ಯಾಟ್ರಿಜ್‍ನ ಜೆಎಸ್‍ಪಿ/ಜೆಎಸ್‍ಯುಪಿಗೆ 5 ಸ್ಥಾನಗಳು ಮತ್ತು ಆಕ್ಸಿಸ್ ಮೈ ಇಂಡಿಯಾದ 2 ಸ್ಥಾನಗಳು, ಎರಡೂ ಫಲಿತಾಂಶಗಳಿಗೆ ಹೊಂದಿಕೆಯಾಗಿದೆ. ಎನ್‍ಡಿಎಗೆ 133-159 ಸ್ಥಾನಗಳು ಮತ್ತು ಎಂಜಿಬಿಗೆ 75-101 ಸ್ಥಾನಗಳನ್ನು ನೀಡಿತ್ತು. ದೈನಿಕ್ ಭಾಸ್ಕರ್ ಸಮೀಕ್ಷೆ (145-160 / 73-91) ಚುನಾವಣಾ ಫಲಿತಾಂಶಗಳ ದಿಕ್ಕನ್ನು ಊಹಿಸಿತ್ತು. ಪಿ-ಮಾರ್ಕ್, ಪೋಲ್‍ಸ್ಟ್ರಾಟ್, ಪೀಪಲ್?ಸಇನ್‍ಸೈಟ್ ನಂತಹ ಹಲವಾರು ಸಂಸ್ಥೆಗಳು ವ್ಯಾಪಕ ಶ್ರೇಣಿಯ ಅಂಕಿ-ಅಂಶಗಳನ್ನು ಒದಗಿಸಿದವು.

ಬಹುತೇಕ ಎಲ್ಲಾ ವಿಶ್ವಾಸಾರ್ಹ ಸಂಸ್ಥೆಗಳು ತಮ ಮಾದರಿಗಳು, ಬೂತ್ ವ್ಯಾಪ್ತಿ ಮತ್ತು ಜನಸಂಖ್ಯಾ ನಕ್ಷೆಗೆ ವಿಶೇಷ ಗಮನ ನೀಡಿವೆ. ಇದು ಅವರ ಭವಿಷ್ಯ ನಿಖರತೆಯ ಮೇಲೆ ಸಕಾರಾತಕ ಪರಿಣಾಮ ಬೀರಿದೆ. ಸಮೀಕ್ಷೆಗಳು ವಿಶ್ವಾಸ ಕಳೆದುಕೊಳ್ಳುತ್ತಿದೆ, ಉಲ್ಟಾ ಆಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದ್ದಂತೆ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಟ್ರೆಂಡ್ ಭವಿಷ್ಯ ನುಡಿಯುವಲ್ಲಿ ಯಶಸ್ವಿಯಾಗಿದೆ.