ಭಾರತದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಮತ ಚಲಾಯಿಸಲು ಮೊಬೈಲ್ ಆ್ಯಪ್ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಆ್ಯಪ್ ಮೂಲಕ ಮತ ಚಲಾವಣೆಗೆ ಅವಕಾಶ ನೀಡುವ ಮೂಲಕ ದೇಶದಲ್ಲೇ ಕ್ರಾಂತಿಗೆ ನಾಂದಿ ಹಾಡಿದೆ.
ಪಾಟ್ನಾ (ಜೂ.27) ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಇಲ್ಲಿ ಚುನಾವಣೆ ನಡೆಸುವುದು, ಚುನಾವಣೆ ಪ್ರಕ್ರಿಯೆಯಲ್ಲಿ ಪ್ರಜೆಗಳ ಪಾಲ್ಗೊಳ್ಳುವಿಕೆ ಹಲವು ದೇಶಗಳಿಗೆ ಕೌತುಕದ ವಿಷಯ. 140 ಕೋಟಿಗೂ ಹೆಚ್ಚು ಜನಸಂಖ್ಯೆಯ ದೇಶದಲ್ಲಿ ಚುನಾವಣೆ ಸುಸೂತ್ರವಾಗಿ ನಡೆಸುವುದು ಸವಾಲೇ ಸರಿ. ಪ್ರತಿ ಚುನಾವಣೆಗೂ ಚುನಾವಣಾ ಆಯೋಗ ಹೊಸ ಹೊಸ ಪ್ರಯೋಗ ಮಾಡಿ ಯಶಸ್ಸು ಕಂಡಿದೆ. ಇದೀಗ ದೇಶದ ಚುನಾವಣೆಯಲ್ಲಿ ಮಹಾ ಕ್ರಾಂತಿಗೆ ಆಯೋಗ ಮುನ್ನುಡಿ ಬರೆದಿದೆ. ದೇಶದಲ್ಲೇ ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಮತ ಚಲಾವಣೆಗೆ ಅವಕಾಶ ನೀಡಲಾಗಿದೆ. ಈ ಹೆಗ್ಗಳಿಕೆಗೆ ಬಿಹಾರ ಪಾತ್ರವಾಗಿದೆ.
ಮೊಬೈಲ್ ಆ್ಯಪ್ ಮೂಲಕ ಮತ ಚಲಾವಣೆಗೆ ಅವಾಕಾಶ ನೀಡಿದ ಮೊದಲ ರಾಜ್ಯ ಬಿಹಾರ. ಈ ಕುರಿತು ಬಿಹಾರ ಚುನಾವಣಾ ಆಯೋಗದ ಮುಖ್ಯಸ್ಥ ದೀಪಕ್ ಪ್ರಸಾದ್ ಸುದ್ದಿಗೋಷ್ಠಿ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಬಿಹಾರದಲ್ಲಿ ನಾಳೆ (ಜೂ. 28) ಮುನ್ಸಿಪಲ್ ಕೌನ್ಸಿಲ್ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಗೆ ಆಯೋಗ ಮೊಬೈಲ್ ಆ್ಯಪ್ ಮೂಲಕ ಮತಚಲಾವಣೆ ಪ್ರಯೋಗ ನಡೆಸುತ್ತಿದೆ.
ಕುಳಿತಲ್ಲಿಂದಲೇ ಮತ ಚಲಾವಣೆಗೆ ಅವಕಾಶ
ಬಿಹಾರ ಮುನ್ಸಿಪಲ್ ಕೌನ್ಸಿಲ್ ಚುನಾವಣೆಯಲ್ಲಿ ಮೊಬೈಲ್ ಆ್ಯಪ್ ಮೂಲಕ ಮತ ಚಲಾವಣೆಗೆ ಬಿಹಾರ ಚುನಾವಣಾ ಆಯೋಗ ಅವಕಾಶ ನೀಡಿದೆ. ಮತಗಟ್ಟೆಗೆ ತೆರಳಿ ಮತದಾನ ಮಾಡಲು ಸಾಧ್ಯವಾಗದ ಜನರು ಮೊಬೈಲ್ ಮೂಲಕ ಮತ ಚಲಾಯಿಸಲು ಸಾಧ್ಯವಿದೆ. ಉದಾಹರಣೆಗೆ ಹಿರಿಯ ನಾಗರೀಕರು, ಗರ್ಭೀಣಿ ಮಹಿಳೆಯರು, ವಿಶೇಷ ಚೇತನರು ಸೇರಿದಂತೆ ಮತಗಟ್ಟೆಗೆ ತೆರಳಲು ಸಾಧ್ಯವಾಗದವರಿಗೆ ಈ ಅವಕಾಶ ನೀಡಲಾಗಿದೆ. ಮತದಾರರು ಮನೆಯಲ್ಲಿ ಅಥವಾ ತಾವು ಇರುವ ಜಾಗದಿಂದಲೇ ಮತ ಚಲಾಯಿಸಲು ಆಯೋಗ ಅವಕಾಶ ನೀಡಿದೆ.
e-SECBHR ಆ್ಯಪ್ ಮೂಲಕ ಮತ ಚಲಾವಣೆ
ಮೊಬೈಲ್ ಆ್ಯಪ್ ಮೂಲಕ ಮತ ಚಲಾವಣೆ ಮಾಡಲು ಮತದಾರರು e-SECBHR ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಆದರೆ ಮೊದಲ ಹಂತದಲ್ಲಿ ಈ ಆ್ಯಪ್ ಆ್ಯಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ. ಐಫೋನ್ ಬಳಕೆದಾರರಿಗೆ ಈ ಆ್ಯಪ್ ಲಭ್ಯವಿಲ್ಲ. ಐಫೋನ್ ಬಳಕೆದಾರರು ಮೊಬೈಲ್ ಮೂಲಕ ನಾಳೆ ನಡೆಯಲಿರುವ ಮುನ್ಸಿಪಲ್ ಕೌನ್ಸಿಲ್ ಚುನಾವಣೆಯ ಮತ ಚಲಾಯಿಸಲು ಸಾಧ್ಯವಿಲ್ಲ.
ಒಂದು ಮೊಬೈಲ್‌ನಿಂದ ಗರಿಷ್ಠ ಇಬ್ಬರು ಮತಚಲಾಯಿಸಲು ಸಾಧ್ಯವಿದೆ. ಗುರುತಿನ ಚೀಟಿ ವೆರಿಫೈ ಮಾಡಿದ ಬಳಿಕ ಮತ ಚಲಾವಣೆಗೆ ಅವಕಾಶ ಸಿಗಲಿದೆ. ಇನ್ನು ಮೊಬೈಲ್ ಫೋನ್ ಇಲ್ಲದವರು ಚುನಾವಣಾ ಆಯೋಗದ ವೆಬ್ ಸೈಟ್ ಮೂಲಕ ಇ ಮತದಾನ ಮಾಡಲು ಸಾಧ್ಯವಿದೆ. ಈಗಾಗಲೇ 10,000 ಮಂದಿ ಆ್ಯಪ್ ಡೌನ್ಲೋಡ್ ಮಾಡಿ ರಿಜಿಸ್ಟ್ರೇಶನ್ ಮಾಡಿದ್ದಾರೆ. ಸರಿಸುಮಾರು 50,000 ಮಂದಿ ಇ ಮತದಾನ ಮಾಡುವ ಸಾಧ್ಯತೆ ಇದೆ ಎಂದು ಬಿಹಾರ ಚುನಾವಣಾ ಆಯೋಗ ಹೇಳಿದೆ.
ಮೊಬೈಲ್ ಫೋನ್ ಮೂಲಕ ಮತದಾನ ಮಾಡಿ ಮತ್ತೆ ಮತಗಟ್ಟೆಗೆ ತೆರಳಿ ಮತದಾನ ಮಾಡಲು ಸಾಧ್ಯವಿಲ್ಲ. ಇತ್ತ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮತ್ತೆ ಆ್ಯಪ್ ಮೂಲಕ ಮತದಾನ ಮಾಡಲು ಅವಕಾಶವಿಲ್ಲ. ಒಮ್ಮೆ ಮತ ಚಲಾಯಿಸಿದ ಬಳಿಕ ಚುನಾವಣಾ ಆಯೋಗದ ಡೇಟಾ ಸೆಂಟರ್‌ನಲ್ಲಿ ಎಲ್ಲಾ ಮಾಹಿತಿಯೊಂದಿಗೆ ಮತ ಚಲಾವಣೆ ದಾಖಲಾಗಲಿದೆ. ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಇದೇ ವರ್ಷ ಬಿಹಾರ ವಿಧಾನಸಭಾ ಚುನಾವಣೆ
ಇದೇ ವರ್ಷದ ಅಂತ್ಯದಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದೆ. ಬಿಹಾರ ವಿಧಾನಸಭಾ ಚುನಾವಣೆಗೂ ಈ ಮೊಬೈಲ್ ಮತದಾನದ ಅವಕಾಶ ವಿಸ್ತರಣೆಯಾಗುವ ಸಾಧ್ಯತೆ ಇಲ್ಲ. ಕಾರಣ ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ವ್ಯವಸ್ಥೆ ಸ್ಥಳೀಯ ಚುನಾವಣೆಯಲ್ಲಿ ಬಳಕೆ ಮಾಡಲು ಚುನಾವಣಾ ಆಯೋಗ ಚಿಂತನೆ ನಡೆಸಿದೆ. ಸ್ಥಳೀಯ ಚುನಾವಣೆಯಲ್ಲಿ ಇ ಮತದಾನ ಯಶಸ್ವಿಯಾದರೆ, ಇಧರ ಸಾಧಕ ಬಾಧಕ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಆಯೋಗ ನಿರ್ಧರಿಸಿದೆ.
